Advertisement

ಮಧ್ಯ, ಕಿತ್ತೂರು ಕರ್ನಾಟಕ ಗೆಲುವಿಗೆ ಕಾರ್ಯತಂತ್ರ

12:30 AM Jan 04, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯಲು ಹಳೇ ಮೈಸೂರು ಒಳಗೊಂಡ ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

Advertisement

ಮಧ್ಯ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ನಾಯಕರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಲಿಂಗಾಯಿತ ನಾಯಕರಿಗೆ ಹೆಚ್ಚು ಸ್ಥಾನ ಗೆಲ್ಲುವ ಗುರಿ ನೀಡಿದ್ದು, ತತ್‌ಕ್ಷಣದಿಂದ ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ.

ಅಮಿತ್‌ ಶಾ ಇತ್ತೀಚೆಗೆ ರಾಜ್ಯ ಪ್ರವಾಸ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಸೇರ್ಪಡೆಗೂ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಐವರು ಹಾಲಿ ಶಾಸಕರ ಜತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದು ಯಾವುದೇ ಸಂದರ್ಭದಲ್ಲಿ ಬಿಜೆಪಿ ಸೇರುವ ಸಾಧ್ಯತೆಯಿದೆ. ಎಲ್ಲರಿಗೂ ಬಿಜೆಪಿ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡುವ ಭರವಸೆ ಸಹ ನೀಡಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಪ್ರಸ್ತುತ ಬಿಜೆಪಿ 15 ಸ್ಥಾನ ಗೆದ್ದಿದ್ದು, ಇನ್ನೂ ಐದು ಸ್ಥಾನ ಗೆಲ್ಲಲೇಬೇಕೆಂದು ಸೂಚಿಸಲಾಗಿದೆ. ಉಳಿದಂತೆ ಬೆಂಗಳೂರು ಬಿಟ್ಟು ಮಧ್ಯ ಕರ್ನಾಟಕ ಭಾಗದಲ್ಲಿ 35 ಸ್ಥಾನ ಗೆಲ್ಲುವ ಗುರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಬೆಂಗಳೂರು ಬಿಟ್ಟರೆ ಹೆಚ್ಚು ವಿಧಾನಸಭೆ ಕ್ಷೇತ್ರ ಒಳಗೊಂಡ ಬೆಳಗಾವಿಯಲ್ಲೂ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲು ಲಿಂಗಾಯಿತ ನಾಯಕರಿಗೆ ಸೂಚಿಸಲಾಗಿದ್ದು, ಅಲ್ಲಿ ಹದಿನೆಂಟು ಕ್ಷೇತ್ರಗಳ ಪೈಕಿ ಹಾಲಿ ಇರುವ ಹದಿಮೂರು ಸ್ಥಾನಗಳನ್ನು 15ಕ್ಕೆ ಏರಿಸಬೇಕೆಂದು ತಿಳಿಸಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಕೈಗೊಂಡಿರುವ ನಿರ್ಧಾರದ ಬಗ್ಗೆ ತಿಳಿಸಿ ಸಮುದಾಯದ ಮನವೊಲಿಸಲು ಸೂಚನೆ ನೀಡಲಾಗಿದೆ.

ಕಿತ್ತೂರು ಕರ್ನಾಟಕ ಭಾಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಮಾಜಿ ಸಚಿವರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಲಕ್ಷ್ಮಣ ಸವದಿ ,ಸಚಿವರಾದ ಮುರುಗೇಶ್‌ ನಿರಾಣಿ, ಸಿ.ಸಿ.ಪಾಟೀಲ್‌, ನಾಯಕತ್ವ ವಹಿಸಿಕೊಂಡು ಹೆಚ್ಚು ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.

ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲವಾದರೂ ಮೈ ಮರೆಯಬಾರದು. ಹಾಲಿ ಇರುವ ಸ್ಥಾನಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವ ಕಾರಣ ಎಚ್ಚರಿಕೆ ವಹಿಸಬೇಕು. ಉಳಿದಂತೆ ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿಯ ನೀಲನಕ್ಷೆ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಟಾರ್ಗೆಟ್‌ 55
ರಾಜಧಾನಿ ಬೆಂಗಳೂರಿನಲ್ಲಿ 20 ಸ್ಥಾನ ಸೇರಿ ಮಧ್ಯ ಕರ್ನಾಟಕ ಭಾಗದಲ್ಲಿ 55 ಸ್ಥಾನ ಗೆಲ್ಲುವ ಟಾರ್ಗೆಟ್‌ ನೀಡಲಾಗಿದ್ದು, ಪ್ರಮುಖವಾಗಿ ಒಕ್ಕಲಿಗ ಸಮುದಾಯದ ನಾಯಕರು ಇದಕ್ಕೆ ಶ್ರಮ ಹಾಕಲು ನಿರ್ದೇಶನ ನೀಡಲಾಗಿದೆ. ಆರ್‌. ಅಶೋಕ್‌, ಅಶ್ವತ್ಥನಾರಾಯಣ, ಡಾ| ಕೆ.ಸುಧಾಕರ್‌, ಎಸ್‌.ಟಿ. ಸೋಮಶೇಖರ್‌, ಗೋಪಾಲಯ್ಯ, ಸೋಮಣ್ಣ , ಬೈರತಿ ಬಸವರಾಜ್‌, ಮುನಿರತ್ನರಂತಹ ಘಟಾನುಘಟಿ ನಾಯಕರು ಇರುವಾಗ ಸ್ಥಾನ ಗೆಲ್ಲಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next