ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆ ನಾಶ ಮಾಡುವತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಜಾರಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಭಾನುವಾರ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರು ಯಾವುದೋ ಒಂದು ಧರ್ಮದ ಸಿದ್ಧಾಂತ ಇಟ್ಟುಕೊಂಡು ದೇಶವನ್ನು ಅವನತಿಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ಬಡಜನರ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಸಂವಿಧಾನದ 103ನೇ ತಿದ್ದು ಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಹಿಂದುಳಿದ ಆಯೋಗಗಳ ಅಧಿಕಾರ ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಕಿಡಿಕಾರಿದ ಅವರು, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಎಂದರು.
ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಯುವಕರಿಗೆ ಹೊಸ ಶಕ್ತಿ. ಯುವ ಸಮೂಹಕ್ಕೆ ರಾಜಕೀಯದಲ್ಲಿ ಅವಕಾಶ ಕೊಡಬೇಕೆಂಬುದು ಅವರ ಆಶಯವಾಗಿತ್ತು. ಅದಕ್ಕಾಗಿ ರಾಜೀವ್‌ಗಾಂಧಿ 10 ವರ್ಷಕ್ಕೆ ಮತದಾನಕ್ಕೆ ಅವಕಾಶ ನೀಡಿದರು. ಅಧಿಕಾರ ವಿಕೇಂದ್ರೀಕರಣಕ್ಕೆ ಕಾಯ್ದೆ ರೂಪಿಸಿದರು. ರಾಜೀವ್‌ಗಾಂಧಿ ಮೊಬೈಲ್, ಕಂಪ್ಯೂಟರ್ ಪರಿಚಯ ಮಾಡಿದಾಗ ತುಂಬಾ ಜನ ವಿರೋಧಿಸಿದರು. ಅಂದು ಟೀಕೆ ಮಾಡಿದವರೇ ಇವತ್ತು ನಾಲ್ಕು ಮೊಬೈಲ್ ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ರಾಜೀವ್‌ಗಾಂಧಿ ಮತ್ತು ದೇವರಾಜ ಅರಸು ಇಬ್ಬರೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಜಗತ್ತಿನಲ್ಲಿ ಇಂದು ಭಾರತ ವೇಗವಾಗಿ ಬೆಳೆಯುತ್ತಿರುವ ದೇಶ.ಇದಕ್ಕೆ ರಾಜೀವ್‌ಗಾಂಧಿ ಕಾರಣ ಎಂದ ಅವರು, ನಮ್ಮದು ಭ್ರಷ್ಟಾಚಾರದ ಸರ್ಕಾರವೆಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಜೈಲಿಗೆ ಹೋದವರನ್ನು ಪಕ್ಕ ಕೂರಿಸಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟ ಅನ್ನೋಕೆ ಬಿಜೆಪಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಇಂದಿರಾ ಕ್ಯಾಂಟೀನ್ ಆರಂಭ ಮಾಡಿರುವುದು ಬಿಜೆಪಿಗೆ ಹೊಟೆಯುರಿ ತಂದಿದೆ. ಅದಕ್ಕಾಗಿ ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಕೆ.ಸಿ ರಾಮಮೂರ್ತಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಂಸದ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಪರಿಷತ್ ಸದಸ್ಯ ಅಲ್ಲಮ ವೀರಭದ್ರಪ್ಪ, ಮೇಯರ್ ಜಿ.ಪದ್ಮಾವತಿ, ಕೆಪಿಸಿಸಿ ಓಬಿಸಿ ವಿಭಾಗದ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಚಂದ್ರು, ಸತೀಶ್ ಜಾರಕಿಹೊಳಿ, ದೇವರಾಜ್ ಅರಸು ಅವರ ಮೊಮ್ಮಗ ಸೂರಜ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಗೌರವ ಪುರಸ್ಕಾರ
ಸಾಹಿತಿ ಚನ್ನಣ್ಣ ವಾಲೀಕಾರ, ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಡಿ.ದೇವರಾಜ ಅರಸು ಸ್ಮಾರಕ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.