ಚಾಮರಾಜನಗರ : ‘ಬಿಜೆಪಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ’ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಸಾಂವಿಧಾನಿಕ ಶಾಸನಗಳನ್ನು ಬದಲಾಯಿಸುವ ಬಿಜೆಪಿ ಯತ್ನವನ್ನು ಎಷ್ಟೇ ಬೆಲೆ ತೆತ್ತಾದರೂ ತಡೆಯುವ ಶಪಥ’ ಕೈಗೊಂಡರು.
ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್, “ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಮೂಲಕ ಬಿಜೆಪಿ ಜನರ ಹಣವನ್ನು ಕಿತ್ತುಕೊಳ್ಳುತ್ತಿದೆ; ಈಗ ಸಂವಿಧಾನದ ಮೇಲೆ ದಾಳಿ ನಡೆಸುವುದರ ಅದರ ಹೊಸ ಫ್ಯಾಶನ್ ಆಗಿದೆ’ ಎಂದು ಟೀಕಿಸಿದರು.
“ಸಂವಿಧಾನವನ್ನು ಬದಲಾಯಿಸಲು ನಾವು ಬಿಜೆಪಿಗೆ ಬಿಡುವುದಿಲ್ಲ. ಬಿಜೆಪಿ ಆ ದಿಶೆಯಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ನಾವು ಅಂಬೇಡ್ಕರ್ ಜೀ ಮಾಡಿರುವ ಕೆಲಸವನ್ನು ರಕ್ಷಿಸುತ್ತೇವೆ’ ಎಂದು ರಾಹುಲ್ ಹೇಳಿದರು.
ರಾಹುಲ್ ಗಾಂಧಿ ಅವರೀಗ ಕರ್ನಾಟಕ ಪ್ರವಾಸದ ನಾಲ್ಕನೇ ಹಂತದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಎರಡು ದಿನಗಳ ಭೇಟಿಯಲ್ಲಿ ಅವರು ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ಸಂದರ್ಶಿಸುತ್ತಿದ್ದಾರೆ. ಈ ಮೊದಲಿನ ಭೇಟಿಯಲ್ಲಿ ರಾಹುಲ್ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಸಂದರ್ಶಿಸಿದ್ದರು.
ಉದ್ಯೋಗ ಮತ್ತು ನೋಟು ಅಮಾನ್ಯದ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ; ಅವರಿಗೆ ಆ ಬಗ್ಗೆ ಸಂವೇದನೆಯೇ ಇಲ್ಲವಾಗಿದೆ ಎಂದು ರಾಹುಲ್ ದೂರಿದರು.
ನೋಟು ಅಮಾನ್ಯದಿಂದ ಯಾರಿಗೂ ಪ್ರಯೋಜನವಾಗಿಲ್ಲ ಎಂದು ಹೇಳಿದ ರಾಹುಲ್ ಶೇ.28ರ ತೆರಿಗೆ ಸೇರಿದಂತೆ ಐದು ವಿಭಿನ್ನ ಜಿಎಸ್‌ಟಿ ರೇಟ್ ಹೊಂದುವುದರ ಔಚಿತ್ಯವೇನು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.