Advertisement
ಪ್ರಸ್ತುತ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿರುವ ಜೆಡಿಎಸ್ ಮೇಯರ್ ಸ್ಥಾನ ಸಿಗದೇ ಇದ್ದರೆ ಕಾಂಗ್ರೆಸ್ ಜತೆಗಿನ ಸಖ್ಯ ತೊರೆಯುವ ಬೆದರಿಕೆ ಹಾಕಿದೆ. ಹೀಗಾಗಿ ಜೆಡಿಎಸ್ ಪಾಲಿಕೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದೇ ಎಂಬ ಪ್ರಶ್ನೆ ಮೂಡ ತೊಡಗಿದೆ. ಒಂದು ವೇಳೆ ಮೈತ್ರಿ ಮುರಿದರೆ ಜೆಡಿಎಸ್ ಜತೆ ಸೇರಿ ಅಧಿಕಾರ ಗಿಟ್ಟಿಸಿಕೊಳ್ಳುವ ಕೈ ಹಾಕಬಾರದೆಂಬ ತೀರ್ಮಾನವನ್ನು ಬಿಜೆಪಿ ಕೈಗೊಂಡಿದೆ ಎನ್ನಲಾಗಿದೆ.
ಇನ್ನೊಂಡೆದೆ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರು ತಮ್ಮ ವಿಳಾಸ ಬದಲಿಸಿಕೊಂಡು ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ನಿಯಮಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿರುವ ವಿಚಾರ ಇದೀಗ ಚುನಾವಣಾ ಆಯೋಗ ಮತ್ತು ವಿಧಾನ ಪರಿಷತ್ ಸಭಾಪತಿಗಳ ಮುಂದಿದೆ. ಆಯೋಗ ಮತ್ತು ಸಭಾಪತಿಗಳು ನೀಡುವ ಆದೇಶ ಆಧರಿಸಿ ಎಂಟು ಮಂದಿ ವಿಧಾನ ಪರಿಷತ್ ಸದಸ್ಯರನ್ನು ಅನರ್ಹಗೊಳಿಸುವಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಹೀಗಿರುವಾಗ ಮೈತ್ರಿ ಮಾಡಿಕೊಂಡರೆ ಕಾನೂನು ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣವೂ ಬಿಜೆಪಿ ತೀರ್ಮಾನದ ಮುಂದಿದೆ ಎಂದು ಹೇಳಲಾಗಿದೆ.
Related Articles
Advertisement
ಬಿಜೆಪಿ ನಿರ್ಧಾರಕ್ಕೆ ಕಾರಣಗಳೇನು? 2006ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿ ಕೈಸುಟ್ಟುಕೊಂಡಿತ್ತು. ಈ ಕಾರಣಕ್ಕಾಗಿಯೇ 2015ರಲ್ಲಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ವಿಚಾರವಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಯಡಿಯೂರಪ್ಪ ನಿರಾಕರಿಸಿದ್ದರು. ಇದರ ಪರಿಣಾಮ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದಿತ್ತು. ಇದೀಗ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೂ ಅದು ಈ ಬಾರಿ ಮೇಯರ್ ಸ್ಥಾನ ಕೇಳಿ ಮುಂದಿನ ಬಾರಿ ಬಿಜೆಪಿಗೆ ಬಿಟ್ಟುಕೊಡುವ ಪ್ರಸ್ತಾಪ ಮಾಡಬಹುದು. ನಂತರ ಕೈಕೊಡಬಹುದು ಇಲ್ಲವೇ ಮೇಯರ್ ಸ್ಥಾನ ಬಿಜೆಪಿಗೆ ಬಿಟ್ಟುಕೊಟ್ಟರು ಪ್ರತಿ ಸಂದರ್ಭದಲ್ಲೂ ಬೆದರಿಕೆ ಒಡ್ಡಬಹುದು ಎಂಬ ಕಾರಣಕ್ಕೆ ಜೆಡಿಎಸ್ ಜತೆ ಮೈತ್ರಿಗೆ ಬಿಜೆಪಿ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಬಿಬಿಎಂಪಿಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಜತೆ ಕೈಜೋಡಿಸಿ ಬಿಜೆಪಿ ಆ ಭ್ರಷ್ಟಾಚಾರದಲ್ಲಿ ಪಾಲುದಾರನಾಗಲು ಇಷ್ಟಪಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಬಿಬಿಎಂಪಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ವೆಚ್ಚ ಮಾಡಿದ ಸಾವಿರಾರು ಕೋಟಿ ರೂ. ಇತ್ತೀಚೆಗೆ ಬಿದ್ದ ಮಳೆಗೆ ಕೊಚ್ಚಿಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಮೈತ್ರಿ ಮಾಡಿಕೊಂಡು ಕೆಟ್ಟ ಹೆಸರು ತೆಗೆದುಕೊಳ್ಳುವುದಿಲ್ಲ.
-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ * ಎಂ.ಪ್ರದೀಪಕುಮಾರ್