ನವದೆಹಲಿ: ಭಾರತೀಯ ಜನತಾ ಪಕ್ಷ ಮತ್ತು ಶಿವಸೇನಾ ಮೈತ್ರಿ ಮುರಿದು ಬಿದ್ದು ಸುಮಾರು ಎರಡು ವರ್ಷ ಕಳೆದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಯ ಹಿಂದೆ ಶಿವಸೇನಾ ಮತ್ತು ಬಿಜೆಪಿ ಮತ್ತೆ ಒಗ್ಗೂಡುವ ಸಾಧ್ಯತೆ ಇದೆ ಎಂಬ ಊಹಾಪೋಹ ಹರಿದಾಡತೊಡಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹಿಂದೂ ವಿರೋಧಿ ಸಿದ್ದರಾಮಯ್ಯ ದೇವಸ್ಥಾನದ ಬದಲು ಮಸೀದಿ ಬಗ್ಗೆ ಮಾತಾಡುತ್ತಾರೆ: ಅರುಣ್ ಸಿಂಗ್
ಔರಂಗಬಾದ್ ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಅವರ ಕುರಿತು ಭಾಷಣದಲ್ಲಿ, ಮಾಜಿ ಹಾಗೂ ಭವಿಷ್ಯದ ಸಹೋದ್ಯೋಗಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿರುವುದು ಮುಂದಿನ ದಿನಗಳಲ್ಲಿ ಮತ್ತೆ ಶಿವಸೇನಾ, ಬಿಜೆಪಿ ಒಂದಾಗುವ ಮುನ್ಸೂಚನೆಯಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಔರಂಗಬಾದ್ ನಲ್ಲಿ ನಡೆದ ಸಮಾರಂಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್, ನನ್ನ ಮಾಜಿ ಸಹೋದ್ಯೋಗಿ, ಒಂದು ವೇಳೆ ನಾವು ಮತ್ತೆ ಒಂದಾದರೆ, ಭವಿಷ್ಯದ ಸಹೋದ್ಯೋಗಿಯಾಗಲಿರುವ ರಾವ್ ಸಾಹೇಬ್ ಎಂದು ಭಾಷಣದಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.
ಮಹಾರಾಷ್ಟ್ರದ ಬಿಜೆಪಿ ಮುಖಂಡ ಕೇಂದ್ರ ಸಚಿವ ದಾನ್ವೆ, ಹಿರಿಯ ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ತೋರಟ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಎಲ್ಲಾ ಪಕ್ಷದ ಮಾಜಿ ಹಾಗೂ ಹಾಲಿ ಸಹೋದ್ಯೋಗಿಗಳು ಉಪಸ್ಥಿತರಿದ್ದ ಹಿನ್ನೆಲೆಯಲ್ಲಿ ಆ ರೀತಿ ಉಲ್ಲೇಖಿಸಿರುವುದಾಗಿ ಉದ್ಧವ್ ಠಾಕ್ರೆ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತ ಸಮಜಾಯಿಷಿ ನೀಡಿರುವುದಾಗಿ ವರದಿ ವಿವರಿಸಿದೆ.
ಒಂದು ವೇಳೆ ಪ್ರತಿಯೊಬ್ಬರು ಒಟ್ಟುಗೂಡಿದಾಗ, ಅವರು ಭವಿಷ್ಯದಲ್ಲಿಯೂ ಸಹೋದ್ಯೋಗಿಗಳಾಗಬಹುದು. ಅದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಉದ್ಧವ್ ಠಾಕ್ರೆ ಮಾರ್ಮಿಕವಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.
2019ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದಿತ್ತು. ಚುನಾವಣೆ ಬಳಿಕ ಕಾಂಗ್ರೆಸ್, ಎನ್ ಸಿಪಿ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಜತೆ ಕೈಜೋಡಿಸುವ ಮೂಲಕ ಶಿವಸೇನಾ ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು.