Advertisement

ಭಾಜಪ ಮತ್ತು ರಾಮಜಪ

09:41 AM Nov 11, 2019 | Lakshmi GovindaRaju |

ಅದು 1989ರ ಸುಮಾರು. ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತದೆ. ಆ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಬಗ್ಗೆ ಪ್ರಸ್ತಾಪಿಸುವ ಬಿಜೆಪಿ, 1948ರಲ್ಲಿ ಸರ್ಕಾರವೇ ಸೋಮನಾಥಪುರದಲ್ಲಿ ಸೋಮನಾಥನ ದೇಗುಲ ಕಟ್ಟಿಸಿದ ಹಾಗೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡದೇ ಹೋದರೆ, ಭಾವನೆಗಳು ಕೆರಳುತ್ತವೆ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಂಭವವಿದೆ ಎಂದು ತನ್ನದೇ ಪ್ರಣಾಳಿಕೆಯಲ್ಲಿ ಹೇಳುತ್ತದೆ.

Advertisement

ಇಂದಿರಾಗಾಂಧಿ ಹತ್ಯೆಯ ತರುವಾಯ, 1984ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಅಭೂತ ಪೂರ್ವವಾಗಿ ಗೆದ್ದಿದ್ದ ರಾಜೀವ್‌ ಗಾಂಧಿ, 1989ರ ಹೊತ್ತಿಗೆ ಮೈಮೇಲೆ ಬೋಫೋರ್ಸ್‌ ಕಳಂಕ ಸೇರಿದಂತೆ ಹಲವು ವಿವಾದ ಹೊತ್ತಿರುತ್ತಾರೆ. ಆಗ ನಡೆಯುವ ಚುನಾವಣೆಯಲ್ಲಿ ಬಿಜೆಪಿ 85 ಸ್ಥಾನಗಳಲ್ಲಿ ಗೆಲ್ಲುತ್ತದೆ. ಅದೇ ಸಂದರ್ಭದಲ್ಲಿ ಬಿಜೆಪಿಗೆ ರಾಮಮಂದಿರ ವಿಚಾರ ವರ್ಕೌಟ್‌ ಆಗುತ್ತದೆ ಎಂಬ ವಿಷಯ ಗೊತ್ತಾಗಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ರಥಯಾತ್ರೆ ಕೈಗೊಳ್ಳುತ್ತಾರೆ. 1991ರಲ್ಲಿ ಬಿಜೆಪಿಯ ಬೆಂಬಲ ಪಡೆದು ಸರ್ಕಾರ ರಚಿಸಿದ್ದ ಪ್ರಧಾನಿ ವಿ.ಪಿ.ಸಿಂಗ್‌, ಬಿಹಾರದಲ್ಲಿ ಆಡ್ವಾಣಿ ಅವರ ರಥಯಾತ್ರೆ ತಡೆ ಯು ತ್ತಾರೆ. ಆಗ ಬಿಜೆಪಿ, ವಿ.ಪಿ. ಸಿಂಗ್‌ ಗೆ ನೀಡಿದ್ದ ಬೆಂಬಲ ವಾಪಸ್‌ ಪಡೆಯುತ್ತದೆ. ಸರ್ಕಾರ ಬೀಳುತ್ತದೆ.

1991ರಲ್ಲಿ ಮತ್ತೆ ಲೋಕಸಭೆ ಚುನಾವಣೆ. ಮೊದಲ ಹಂತದ ಚುನಾವಣೆ ಮುಗಿದ ನಂತರದಲ್ಲಿ ರಾಜೀವ್‌ ಗಾಂಧಿ ಹತ್ಯೆಯಾಗುತ್ತಾರೆ. ದೇಶಾದ್ಯಂತ ಹಿಂದೂ ಪ್ರೈಡ್‌ ಅನ್ನು ವ್ಯಾಪಿಸಿ, ಕಾಂಗ್ರೆಸ್‌ಗೆ ಬಿಜೆಪಿಯಷ್ಟೇ ಪರ್ಯಾಯ ಎಂದು ಬಿಂಬಿಸಿ ಕೊಂಡಿದ್ದ ಬಿಜೆಪಿಗೆ, ರಾಜೀವ್‌ ಗಾಂಧಿ ಹತ್ಯೆ, ಪೆಟ್ಟು ನೀಡುತ್ತದೆ. ಆದರೆ, ಉತ್ತರ ಪ್ರದೇಶದಲ್ಲಿ ಮಾತ್ರ ಬಿಜೆಪಿಯ ರಾಮಮಂದಿರ ನಿರ್ಮಾಣ ಮಾಡುವ ಭರವಸೆ ಕೆಲಸ ಮಾಡುತ್ತದೆ. ಆಗ ಉ.ಪ್ರ.ದಲ್ಲಿ ಇದ್ದ 85 ಲೋಕಸಭೆ ಸ್ಥಾನಗಳಲ್ಲಿ ಬಿಜೆಪಿ, 52ರಲ್ಲಿ ಗೆಲ್ಲುತ್ತದೆ. ದೇಶದಲ್ಲಿ 120 ಸ್ಥಾನಗಳಲ್ಲಿ ಗೆಲ್ಲುತ್ತದೆ.

ಮಂದಿರ ಪ್ರಸ್ತಾಪ…: 1996ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ, ಭರತವರ್ಷದ ಪರಿಕಲ್ಪನೆಯನ್ನು ತೇಲಿಬಿಟ್ಟು, ಅಯೋಧ್ಯೆಯ ರಾಮಜನ್ಮಸ್ಥಾನದಲ್ಲೇ ರಾಮಮಂದಿರ ಕಟ್ಟುವುದಾಗಿ, ಈ ಮೂಲಕ ಭಾರತ ಮಾತೆಗೆ ಗೌರವ ಸಲ್ಲಿಸುವುದಾಗಿ ಹೇಳುತ್ತದೆ. ವಿಶೇಷವೆಂದರೆ, ಚುನಾವಣೆಯಲ್ಲಿ ಈ ಅಂಶ ವರ್ಕೌಟ್‌ ಕೂಡ ಆಗುತ್ತದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್‌ ಅನ್ನು ಹೊರತುಪಡಿಸಿದ ಪಕ್ಷವೊಂದು ಹೆಚ್ಚು ಸ್ಥಾನ ಗಳಿಸುತ್ತದೆ. 1984ರಲ್ಲಿ ಕೇವಲ 2ರಲ್ಲಿ ಗೆದ್ದಿದ್ದ ಬಿಜೆಪಿ, 1996ರಲ್ಲಿ ಈ ಸಂಖ್ಯೆಯನ್ನು 161ಕ್ಕೆ ಏರಿಸಿಕೊಳ್ಳುತ್ತದೆ. ಅಲ್ಲದೆ, ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ಪಕ್ಷವಾಗಿಯೂ ರೂಪುಗೊಳ್ಳುತ್ತದೆ. 1996ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಬಿಜೆಪಿ ಸರ್ಕಾರ ರಚಿಸಿದರೂ, ಬಹುಮತಕ್ಕೆ ಬೇಕಾದ 273 ಅನ್ನು ಹೊಂದಿಸಿಕೊಳ್ಳುವಲ್ಲಿ ವಿಫ‌ಲರಾಗಿ, 13 ದಿನದಲ್ಲೇ ರಾಜೀನಾಮೆ ನೀಡುತ್ತಾರೆ.

ಜಯಾ ಬೆಂಬಲ ವಾಪಸ್‌, ಸರ್ಕಾರ ಪತನ: 1998ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಮತ್ತೆ ರಾಮಮಂದಿರವನ್ನು ಪ್ರಸ್ತಾಪಿಸುವ ಬಿಜೆಪಿ, ಈಗಾಗಲೇ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ರಾಮಜನ್ಮಸ್ಥಾನದಲ್ಲೇ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು 182ಕ್ಕೆ ಹೆಚ್ಚಿಸಿಕೊಳ್ಳುತ್ತದೆ. ಪ್ರಾದೇಶಿಕ ಪಕ್ಷಗಳ ನೆರವಿನಿಂದ ವಾಜ ಪೇಯಿ ಅವರು ಸರ್ಕಾರ ರಚಿಸಿ ಒಂದು ವರ್ಷ ಅಧಿಕಾರ ನಡೆಸು ತ್ತಾರೆ. ಆದರೆ, ಜಯಲಲಿತಾ ಅವರ ಎಐಎಡಿಎಂಕೆ ಬೆಂಬಲ ವಾಪಸ್‌ ಪಡೆದಿದ್ದರಿಂದ 1999 ರಲ್ಲೇ ವಾಜಪೇಯಿ ಸರ್ಕಾರವೂ ಬಿದ್ದುಹೋಗಿ, ಹೊಸ ಚುನಾ ವಣೆ ಎದು ರಾಗುತ್ತದೆ.

Advertisement

ಮಂದಿರ ವಿಚಾರ ಹಿಂದಕ್ಕೆ…: ವಿಶೇಷವೆಂದರೆ, ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಮಮಂದಿರ ವಿಚಾರವನ್ನು ತುಸು ಹಿಂದಕ್ಕೆ ಹಾಕಲಾಗುತ್ತದೆ. ಅದು 1999ರ ಚುನಾವಣೆಯಲ್ಲಿ ಮಾತ್ರ. 1998ರಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ಸರ್ಕಾರ ಮಾಡಿ, ಕಾರ್ಗಿಲ್‌ ಸಮರವನ್ನು ಯಶಸ್ವಿಯಾಗಿ ನಿಭಾ ಯಿ ಸಿದ್ದ ವಾಜ ಪೇಯಿ, 1999ರಲ್ಲಿ ಪ್ರಾದೇಶಿಕ ಪಕ್ಷಗ ಳಿಗಾ ಗಿಯೇ ರಾಮಮಂದಿರ ನಿರ್ಮಾಣ ವಿಚಾರ ವನ್ನು ಹಿಂದಕ್ಕೆ ಹಾಕಿದರು. ಆದರೂ, ಈ ಚುನಾವಣೆ ಯಲ್ಲೂ ಬಿಜೆಪಿ 182 ಸ್ಥಾನಗಳನ್ನೇ ಪಡೆಯಿತು.

ಮತ್ತೆ ಮಂದಿರ ಜಪ: 2004ರ ಚುನಾವಣೆಯಲ್ಲಿ ಅಭಿವೃದ್ಧಿಯ ಜತೆ ಜತೆಗೇ ಬಿಜೆಪಿ ರಾಮಮಂದಿರದ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿತು. ಕೋರ್ಟ್‌ನ ಆದೇಶ ಏನೇ ಬಂದರೂ, ಅದನ್ನು ಒಪ್ಪಿಕೊಂಡು ರಾಮಜನ್ಮಸ್ಥಾನದಲ್ಲಿ ಮಂದಿರ ಕಟ್ಟುತ್ತೇವೆ. ಅಯೋಧ್ಯೆ ಹಿಂದೂಗಳ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳ ರೂಪದಲ್ಲಿ ಕುಳಿತಿದೆ ಎಂದು ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡುತ್ತದೆ. ಆದರೆ, ಆ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ರೀತಿ ಯಲ್ಲಿ ಸೋಲುತ್ತದೆ. ನಂತರ ದಲ್ಲಿ 2004 ಮತ್ತು 2009ರಲ್ಲೂ ಅಯೋಧ್ಯೆ ವಿಚಾರವನ್ನು ಪ್ರಣಾಳಿ ಕೆಯಲ್ಲಿ ಪ್ರಸ್ತಾಪಿಸಿದ್ದರೂ, ಗೆಲ್ಲಲು ಸಾಧ್ಯವಾಗಲ್ಲ. ಒಟ್ಟಾರೆಯಾಗಿ, ಅಯೋಧ್ಯೆ ಬಿಜೆಪಿಯ ರಾಜಕೀಯ ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ.

ಎಲ್‌.ಕೆ.ಅಡ್ವಾಣಿ: ಬಿಜೆಪಿಗೊಂದು ಉಜ್ವಲ ಭವಿಷ್ಯ ನೀಡಿದ್ದು ಆಡ್ವಾಣಿ ಅವರ ರಥಯಾತ್ರೆ. ಒಂದು ತಿಂಗಳ ಕಾಲ ನಡೆದ ಈ ರಥಯಾತ್ರೆಯ ಅಂತ್ಯದಲ್ಲಿ ಮೂರು ಬೆಳವಣಿಗೆಗಳಾದವು. ತತ್‌ಕ್ಷಣಕ್ಕೆ ವಿ.ಪಿ.ಸಿಂಗ್‌ ಅವರ ಸರ್ಕಾರದ ಪತನ, ಬಿಜೆಪಿಯ ಏಳಿಗೆ ಮತ್ತು ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ. 1991ರಲ್ಲಿ ಮೂರಂಕಿಗೆ ತಲುಪಿದ ಬಿಜೆಪಿ, ಅಂದಿನಿಂದಲೂ ತನ್ನ ಹರವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಅಡ್ವಾಣಿ ಅವರೂ ವಾಜಪೇಯಿ ಸರ್ಕಾರದಲ್ಲಿ ಉಪಪ್ರಧಾನಿ, ಗೃಹ ಮಂತ್ರಿಯಾದರು.

ಉಮಾಭಾರತಿ: ಬಿಜೆಪಿಯ ಫೈರ್‌ ಬ್ರಾಂಡ್‌ ನಾಯಕಿ ಎಂದೇ ಗುರುತಿಸಿಕೊಂಡಿರುವ ಉಮಾಭಾರತಿ, ಇಡೀ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಂದೋಲನದಲ್ಲಿ ಪ್ರಮುಖವಾಗಿ ಭಾಗವಹಿಸಿದವರು. ಬಾಬ್ರಿ ಮಸೀದಿ ಧ್ವಂಸಕ್ಕೂ ಮುನ್ನ ಅಯೋಧ್ಯೆಯಲ್ಲಿ ಕರಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ನಂತರದಲ್ಲಿ ಇವರು ವಾಜಪೇಯಿ ಸರ್ಕಾರಗಳಲ್ಲಿ ಮಂತ್ರಿ, ನರೇಂದ್ರ ಮೋದಿ ಸರ್ಕಾರದಲ್ಲೂ ಸಚಿವ ಸ್ಥಾನ ಹಾಗೂ ಮಧ್ಯಪ್ರದೇಶದ ಸಿಎಂ ಆದರು.

ಮುರಳಿ ಮನೋಹರ ಜೋಷಿ: ಅಡ್ವಾಣಿ ಅವರ ರಥಯಾತ್ರೆ ವೇಳೆ ಸಕ್ರಿಯವಾಗಿ ಪಾಲ್ಗೊಂಡಿದ್ದ ಮುರಳಿ ಮನೋಹರ ಜೋಷಿ ಅವರು, ಬಾಬ್ರಿ ಮಸೀದಿ ಧ್ವಂಸಕ್ಕೂ ಮುನ್ನ ಕರಸೇವಕರನ್ನು ಉದ್ದೇಶಿಸಿ ಮಾತನಾಡಿದವರು. ಲೆಬರ್ಹಾನ್‌ ಆಯೋಗದ ವರದಿಯಲ್ಲಿ ಪ್ರಮುಖವಾಗಿ ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಉಮಾಭಾರತಿ ಅವರ ಹೆಸರುಗಳೇ ಪ್ರಸ್ತಾಪವಾದವು. ಮುರಳಿ ಮನೋಹರ ಜೋಷಿ ಅವರೂ ವಾಜಪೇಯಿ ಅವರ ಎರಡೂ ಸರ್ಕಾರಗಳಲ್ಲೂ ಪ್ರಮುಖ ಖಾತೆ ನಿರ್ವಹಿಸಿದರು.

ನರೇಂದ್ರ ಮೋದಿ: ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು, ಸಾಮಾನ್ಯ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಗಿದ್ದರು. ಆದರೆ, ಅಡ್ವಾಣಿ ಅವರ ರಥಯಾತ್ರೆ ವೇಳೆಯಲ್ಲಿ ಅವರ ಜತೆಗೇ ಇದ್ದು, ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮೋದಿ ಅವರ ಹೆಸರು ಇಲ್ಲದೇ ಇದ್ದರೂ, ರಥಯಾತ್ರೆ ಸಂದರ್ಭದಲ್ಲಿ ನೀಡಿದ ಸಹಕಾರದಿಂದಾಗಿಯೇ ಬಿಜೆಪಿಯಲ್ಲಿ ಹೆಚ್ಚು ಬೆಳೆಯಲು ಕಾರಣವಾಯಿತು. ಮುಂದೆ ಗುಜರಾತ್‌ ಸಿಎಂ, ಪ್ರಧಾನಮಂತ್ರಿಯೂ ಆದರು.

Advertisement

Udayavani is now on Telegram. Click here to join our channel and stay updated with the latest news.

Next