Advertisement

BJP: ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಬಿಜೆಪಿ ಉದ್ದೇಶ: ವಿಜಯೇಂದ್ರ

09:44 PM Nov 26, 2023 | Team Udayavani |

ಬೆಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವುದು ಬಿಜೆಪಿ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್‌ ಉದ್ದೇಶ ನೆಹರೂ ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ನೀಡುವುದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಎಸ್ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಸಮರ್ಪಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರೂ ಸ್ಮಾರಕಕ್ಕೆ 30 ಎಕ್ರೆ, ಇಂದಿರಾ ಗಾಂಧಿ ಸ್ಮಾರಕಕ್ಕೆ 20 ಎಕ್ರೆ ಭೂಮಿ ನೀಡಿದ ಕಾಂಗ್ರೆಸ್‌, ದೇಶಕ್ಕೆ ಸಂವಿಧಾನ ನೀಡಿದವರ ರಾಷ್ಟ್ರೀಯ ಸ್ಮಾರಕವನ್ನೇಕೆ ಮಾಡಿಲ್ಲ? ಅವರ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್‌ ಪಕ್ಷ, ಅವರ ಶವಸಂಸ್ಕಾರವನ್ನೂ ಗೌರವಯುತವಾಗಿ ಮಾಡಲಿಲ್ಲ. ಆ ಪಕ್ಷಕ್ಕೆ ಬಾಬಾಸಾಹೇಬ್‌ ಅಂಬೇಡ್ಕರರ ಹೆಸರು ಹೇಳುವ ನೈತಿಕತೆಯೂ ಇಲ್ಲ ಎಂದು ಟೀಕಿಸಿದರು.

ಬಿಜೆಪಿ ಸರಕಾರವು ಪಂಚತೀರ್ಥಗಳನ್ನು ಅಭಿವೃದ್ಧಿ ಮಾಡಿದ್ದನ್ನು ನೆನಪಿಸಿದ ಅವರು, ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್‌. ಆದರೆ ನ.26ನ್ನು ಸಂವಿಧಾನ ಸಮರ್ಪಣ ದಿನ ಎಂದು ಘೋಷಿಸುವ ಮೂಲಕ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿಗೆ ಗೌರವ ಸೂಚಿಸಿದ್ದು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಎಂದರು.
ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಜಿ.ವಿ. ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ನವರು ದೀನದಲಿತರನ್ನು ಮತಬ್ಯಾಂಕಾಗಿ ಬಳಸಿಕೊಂಡರೇ ಹೊರತು ಅಂಬೇಡ್ಕರ್‌ ಬಯಸಿದಂತೆ ಅಸ್ಪೃಶ್ಯರು ಮತ್ತು ದಲಿತರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ. ಅಂಬೇಡ್ಕರ್‌ ಶಿಕ್ಷಣಕ್ಕೆ ಆದ್ಯತೆ ಕೊಡಲು ಹೇಳಿದ್ದರು. ಸಿದ್ದರಾಮಯ್ಯನವರು ಅಕ್ಕಿ ಕೊಡುತ್ತೇನೆ, ಕೋಳಿ, ಕುರಿ ಕೊಡುತ್ತೇನೆ ಎನ್ನುತ್ತಾರೆ. ದೇಶದ ಜನಸಂಖ್ಯೆಯ ಶೇ.50ರಷ್ಟಿರುವ ನಾವು ದಲಿತರು ಕೋಳಿ, ಕುರಿ, ಅಕ್ಕಿ ಬೇಡ; ಶಿಕ್ಷಣ ಕೊಡಿ ಎಂದು ಒತ್ತಾಯಿಸಬೇಕು.
ಗೋವಿಂದ ಕಾರಜೋಳ, ಮಾಜಿ ಡಿಸಿಎಂ

Advertisement

ಅಂಬೇಡ್ಕರರು ಬದುಕಿದ್ದಾಗಲೇ ಅವರಿಗೆ ಭಾರತರತ್ನ ಕೊಡಬಹುದಿತ್ತು. ಕಾಂಗ್ರೆಸ್‌ ಆಳ್ವಿಕೆಯಲ್ಲಿ ತಮ್ಮವರಿಗೆ ಭಾರತರತ್ನ ಕೊಟ್ಟುಕೊಂಡರೆ ಹೊರತು, ಅಂಬೇಡ್ಕರರಿಗೆ ಕೊಡಲಿಲ್ಲ. ವಾಜಪೇಯಿ ಅವರ ಪ್ರಸ್ತಾವನೆಗೆ ಅಂದಿನ ಪ್ರಧಾನಿ ವಿ.ಪಿ.ಸಿಂಗ್‌ ಅವರು ಅಂಬೇಡ್ಕರರಿಗೆ ಭಾರತರತ್ನ ಘೋಷಿಸಿದರು. ಅಂಬೇಡ್ಕರರ ಪಂಚತೀರ್ಥಗಳನ್ನು ಪಿಎಂ ಮೋದಿ ಅವರ ಸರಕಾರ ನಿರ್ಮಿಸಿದೆ. ಕುರಿ, ಕೋಳಿ ಆಸೆಗೆ ಮೈಮರೆತರೆ ಅದು ರಾಷ್ಟ್ರವಿನಾಶಕ್ಕೆ ದಾರಿ. ಸಂವಿಧಾನ ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
ಸಿ.ಟಿ. ರವಿ, ಮಾಜಿ ಸಚಿವ

ಅಂಬೇಡ್ಕರರ ತಪಸ್ಸಿನ ಫ‌ಲವಾಗಿ ಸಂವಿಧಾನ ಸಿಕ್ಕಿದೆ. ಸಂವಿಧಾನದ ಅರಿವು ಈಗ ಹೆಚ್ಚಾಗಿದೆ. ಸಂವಿಧಾನದ ಆಶಯವನ್ನು ನಾವು ಅಳವಡಿಸಿಕೊಳ್ಳಬೇಕು. ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದು ನಮ್ಮ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕಿ. ಮೋದಿ ಸರಕಾರದಿಂದ ಮನೆಮನೆಗೆ ಸೌಕರ್ಯಗಳು ಲಭಿಸಿವೆ. ಮನೆಗಳು, ಶೌಚಾಲಯಗಳು, ಗ್ಯಾಸ್‌, ರಸ್ತೆ, ರೈಲ್ವೆ ಸಹಿತ ಅನೇಕ ಮೂಲಸೌಕರ್ಯಗಳನ್ನು ನೀಡಲಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next