ಹುಣಸೂರು: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರ ಸಮ್ಮುಖದಲ್ಲೇ ಸಂಸದ ಡಿ.ಕೆ.ಸುರೇಶ್ ಅಸಭ್ಯವಾಗಿ ವರ್ತಿಸಿರುವುದು ಅವರಿಗೆ ಶೋಭೆ ತರುವುದಿಲ್ಲವೆಂದು ತಾಲೂಕು ಬಿಜೆಪಿ ಅಧ್ಯಕ್ಷ ಹಳ್ಳದಕೊಪ್ಪಲುನಾಗಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಂವಿದಾನ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಧಿಕ್ಕಾರ ಮೊಳಗಿಸಿ ಗಮನ ಸೆಳೆದರು.
ನಂತರ ಮಾತನಾಡಿದ ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ ಸಂಸದ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ದಿ ಜೊತೆಗೆ ಅಂಬೇಡ್ಕರ್ ಪುತ್ಥಳಿ ಅನಾವರಣ ಸಮಾರಂಭದ ವೇಳೆ ಕಾರ್ಯಕರ್ತರನ್ನು ಎತ್ತಿಕಟ್ಟಿ ಗಲಾಟೆ ನಡೆಸಿದ್ದಲ್ಲದೆ ಸಂಸದನಾಗಿದ್ದೇನೆ ಎನ್ನುವುದನ್ನೇ ಮರೆತು ಅಸಭ್ಯರೀತಿಯಲ್ಲಿ ನಡೆದುಕೊಂಡು ಹುದ್ದೆಗೆ ಅವಮಾನ ಮಾಡಿದ್ದಾರೆ, ಸಂಸ್ಕೃತಿ , ಸಮಯ ಪ್ರಜ್ಞೆಯ ಅರಿವಿಲ್ಲದ ರಾಜಕಾರಣಿ ಸಂಸದ ಡಿ.ಕೆ.ಸುರೇಶ್ ಉದ್ದೇಶ ಪೂರ್ವಕವಾಗಿ ವೇದಿಕೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಮುಖ್ಯವಂತ್ರಿಗಳಿರುವ ವೇದಿಕೆಗೆ ನಿಗದಿತ ಸಮಯಕ್ಕೂ ಆಗಮಿಸದೆ ಶಿಕ್ಷಾಚಾರ ಅನುಸರಿಸಿಲ್ಲವೆಂದು ಡಿ.ಸಿ.ಎಂ.ಡಾ.ಅಶ್ವತ್ಥನಾರಾಯಣ್ ವಿರುದ್ದ ಕಿಡಿಕಾರಲು ವೇದಿಕೆಯನ್ನು ಬಳಸಿಕೊಂಡು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಹುಡಾ ಅಧ್ಯಕ್ಷ ಗಣೇಶ ಕುಮಾರಸ್ವಾಮಿ ಮಾತನಾಡಿ ಜನಪ್ರತಿನಿಧಿಯಾಗಿ ಸಾರ್ವಜನಿಕ ಸಭೆಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲದೆ ಗೂಂಡಾಗಿರಿ ನಡೆಸಿದ್ದಲ್ಲದೆ ಕಾರ್ಯಕರ್ತರನ್ನು ಎತ್ತಿಕಟ್ಟಿರುವುದು ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಿನಾಮೆ ನೀಡಲಿ
ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದಕುಮಾರ್, ನಗರಸಭೆ ಸದಸ್ಯರಾದ ರಮೇಶ್, ಅರುಣ್ ಚೌವ್ಹಾಣ್, ಶ್ರೀನಿವಾಸ್, ಉಮೇಶ್, ಸಾಯಿನಾಥ್, ಮುಖಂಡರಾದ ನಾಗರಾಜಮಲ್ಲಾಡಿ, ನೀಮಾ ಶ್ರೀನಿವಾಸ್, ಕಮಲಮ್ಮ, ನೀಲು ಸೇರಿದಂತೆ ಅನೇಕರಿದ್ದರು.