ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ವಿವಾದದ ಬಿಸಿ ಆರುವ ಮುನ್ನವೇ ನಗರದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ. ಪರಿವರ್ತನಾ ರ್ಯಾಲಿಗೆ ಸಂಬಂಧಿಸಿದ ಬ್ಯಾನರ್ ಕಟ್ಟುವ ಕುರಿತು ನಡೆದ ಜಗಳದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ (28) ಎಂಬಾತನನ್ನು ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದಿದ್ದಾರೆ.
ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಈ ಸಂಬಂಧ ರಾಮಸ್ವಾಮಿ ಪಾಳ್ಯ ವಾರ್ಡ್‌ನ ಕಾಂಗ್ರೆಸ್ ಅಧ್ಯಕ್ಷ ಖಾದರ್ ಪುತ್ರ ವಾಸೀಂ, ಈತನ ಸ್ನೇಹಿತ ಫಿಲಿಪ್ಸ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ ದ್ದಾರೆ. ಇನ್ನಿಬ್ಬರು ಆರೋಪಿಗಳಾದ ಉಮರ್ ಮತ್ತು ಇರ್ಫಾನ್‌ಗಾಗಿ ಹುಡುಕಾಟ ನಡೆದಿದೆ. ಫೆ.4ರಂದು ನಗರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದ್ದು, ಘಟನೆಯಲ್ಲಿ ರಾಜಕೀಯ ಕೈವಾಡವಿರಬಹುದೇ ಎಂಬ ಗುಮಾನಿ ವ್ಯಕ್ತವಾಗಿದೆ.
ರಾತ್ರಿ 8 ಗಂಟೆ ಸುಮಾರಿಗೆ ಸಂತೋಷ್ ಮೇಲೆ ದಾಳಿ ನಡೆಸಿದ ಆರೋಪಿಗಳು, ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದಿರುವುದಾಗಿ ಜೆ.ಸಿ.ನಗರ ಪೊಲೀಸರು ತಿಳಿಸಿದ್ದಾರೆ. ರಾಮಸ್ವಾಮಿ ಪಾಳ್ಯದಲ್ಲಿ ಗ್ಯಾಸ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಸಂತೋಷ್, ಇತ್ತೀಚೆಗಷ್ಟೇ ಬಿಜೆಪಿ ಸೇರಿ, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಈ ನಡುವೆ ಆರೋಪಿ ವಾಸೀಂ ಆಗಾಗ ಬಂದು ಸಂತೋಷ್‌ಗೆ ಕಾಂಗ್ರೆಸ್ ಸೇರುವಂತೆ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಗಾಂಜಾ ವ್ಯಸನಿಯಾಗಿರುವ ವಾಸೀಂಗೆ ಉತ್ತಮ ನಡತೆ ಹೊಂದುವಂತೆ ಸಂತೋಷ್ ಬುದ್ಧಿ ಹೇಳಿದ್ದ. ಇದೇ ವಿಷಯದ ಸಂಬಂಧ ಸ್ಥಳೀಯ ಬೇಕರಿ ಬಳಿ ಜಗಳವಾಗಿದೆ.
ಜನ್ಮದಿನ ಆಚರಿಸಿಕೊಂಡಿದ್ದ: ಈ ನಡುವೆ ಮಂಗಳವಾರವಷ್ಟೇ (ಜ.30)ಸಂತೋಷ್ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದ. ಬುಧವಾರ ರಾತ್ರಿ ಚಿನ್ನಪ್ಪ ಗಾರ್ಡನ್‌ನ ಬೇಕರಿ ಬಳಿ ಸಂತೋಷ್ ಹಾಗೂ ವಾಸೀಂ ಗುಂಪಿನ ನಡುವೆ ಜಗಳವಾಗಿದೆ. ಈ ವೇಳೆ ವಾಸೀಂ ಮತ್ತು
ಸಹಚರರು ಚಾಕುವಿನಿಂದ ಸಂತೋಷ್ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಕೊಲೆಗೈದಿದ್ದಾರೆ.