Advertisement

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

11:47 PM Mar 18, 2024 | Team Udayavani |

ಬೆಂಗಳೂರು: ಮೈತ್ರಿ ಪಾಲಿನ ಮೂರು ಸೇರಿ ಒಟ್ಟು ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡುವುದು ಬಿಜೆಪಿ ಪಾಲಿಗೆ ಜಟಿಲವಾಗಿದ್ದು, ಇನ್ನೂ ಎರಡು ದಿನ ವಿಳಂಬವಾಗುವ ಸಾಧ್ಯತೆ ಇದೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಟಿಕೆಟ್‌ ಇತ್ಯರ್ಥಗೊಳಿಸುವುದು ವರಿಷ್ಠರಿಗೆ “ಅನಂತ’ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಕಳೆದ ಲೋಕಸಭಾ ಚುನಾವಣೆ ಸಂದರ್ಭ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೆಂದು ನಿರ್ಧರಿಸುವುದು ವರಿಷ್ಠರಿಗೆ ತೀವ್ರ ಸಮಸ್ಯೆ ತಂದೊಡ್ಡಿತ್ತು. ತೇಜಸ್ವಿನಿ ಅನಂತಕುಮಾರ್‌ ಅವರ ಬದಲು ತೇಜಸ್ವಿ ಸೂರ್ಯರಿಗೆ ಎಲ್ಲರಿಗಿಂತ ಕೊನೆಯಲ್ಲಿ ಪ್ರಕಟಿಸಲಾಗಿತ್ತು. ಈ ಬಾರಿ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸುವ ವಿಚಾರವೂ ಇದೇ ತಿರುವು ಪಡೆದುಕೊಳ್ಳುವತ್ತ ಸಾಗಿದೆ.

ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತ ಪ್ರವಾಸ ಮುಗಿಸಿ ದಿಲ್ಲಿಗೆ ಮರಳಿದ ಬಳಿಕ ಸಿಇಸಿ ಸಭೆ ನಡೆಯುವ ಸಾಧ್ಯತೆ ಇದೆ. ಮಂಗಳವಾರ ಸಭೆ ಸೇರಿ ಬುಧವಾರ ರಾತ್ರಿಯ ವೇಳೆಗೆ ಪಟ್ಟಿ ಪ್ರಕಟಿಸಬಹುದು ಎಂಬುದು ಬಿಜೆಪಿ ಮೂಲಗಳ ಅಭಿಪ್ರಾಯ. ಜೆಡಿಎಸ್‌ ಕೂಡ ಟಿಕೆಟ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್‌ ಕಮಿಟಿ ಸಭೆ ನಡೆಸಿದ್ದು, ಜೆಡಿಎಸ್‌ ಪಟ್ಟಿ ಇತ್ಯರ್ಥಗೊಂಡ ಬಳಿಕ ಎಲ್ಲದಕ್ಕೂ ಒಟ್ಟಿಗೆ ಹಸುರು ನಿಶಾನೆ ತೋರಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.

ದಿಲ್ಲಿಗೆ ಹೋದರಾ ಅನಂತ್‌?
ಸಂಸದ ಅನಂತ್‌ಕುಮಾರ್‌ ಹೆಗಡೆ ನಡೆ ಇನ್ನೂ ನಿಗೂಢವಾಗಿದೆ. ಎರಡು ದಿನಗಳಿಂದ ಕ್ಷೇತ್ರದಲ್ಲಿ ಅವರ ಪ್ರಚಾರದ ಅಬ್ಬರ ಕಡಿಮೆಯಾಗಿದೆ. ಗುಟ್ಟಾಗಿ ಅವರು ದಿಲ್ಲಿಗೆ ತೆರಳಿದ್ದಾರೆಂಬ ಸುದ್ದಿಗಳು ಕ್ಷೇತ್ರದಲ್ಲಿವೆ. ಆದರೆ ಯಾರೂ ದೃಢಪಡಿಸಿಲ್ಲ. ದಿಲ್ಲಿಯಲ್ಲೂ ಅವರೂ ಪಕ್ಷದ ಪಡಸಾಲೆಯಲ್ಲಿ ಕಾಣಿಸಿಕೊಂಡಿಲ್ಲ. ಪತ್ರಕರ್ತರ ಸಂಪರ್ಕಕ್ಕೂ ಸಿಕ್ಕಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅನಂತ್‌ ಅಭಿಮಾನಿ ಬಳಗ ಮಾತ್ರ ಟಿಕೆಟ್‌ ವಿಚಾರದಲ್ಲಿ ಇನ್ನೂ ಭರವಸೆ ಹೊಂದಿದೆ.

ಮೂಲಗಳ ಪ್ರಕಾರ ಸಂಘ ಪರಿವಾರದ ಸ್ಥಳೀಯ ಮುಖಂಡರು ಹಾಗೂ ನಾಗಪುರದ ಹಿರಿಯರು ಅನಂತ್‌ಕುಮಾರ್‌ ವಿಚಾರದಲ್ಲಿ ಇನ್ನೂ ಸಹಾನುಭೂತಿ ಹೊಂದಿದ್ದಾರೆ. ಅವರಿಗೆ ಟಿಕೆಟ್‌ ಕೊಡಬೇಕೆಂದು ಬಿಜೆಪಿ ವರಿಷ್ಠರಿಗೆ ಸಂದೇಶ ರವಾನೆ ಮಾಡಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಮಾತ್ರ ಈ ಬಗ್ಗೆ ಬಿಗಿ ನಿಲುವು ತಾಳಿದ್ದಾರೆ. ಅನಂತ್‌ಕುಮಾರ್‌ ಪಕ್ಷಕ್ಕೆ ಅವಿಧೇಯ ಎಂಬ ಅಭಿಪ್ರಾಯವನ್ನು ಮೋದಿ ಹಾಗೂ ಅಮಿತ್‌ ಶಾ ಮನಸ್ಸಿನಲ್ಲಿ ಗಟ್ಟಿಗೊಳಿಸಲಾಗಿದೆ. ಬಿಎಸ್‌ವೈ ಹೊರತು ಉಳಿದೆಲ್ಲರೂ ಅನಂತ್‌ಕುಮಾರ್‌ಗೆ ಟಿಕೆಟ್‌ ಬೇಡ ಎನ್ನುತ್ತಿದ್ದಾರೆ. ಆದರೆ ಸಂಘ ಹಿಡಿದ ಪಟ್ಟು ಈಗ ಪಕ್ಷಕ್ಕೆ ಇರಿಸುಮುರಿಸು ಉಂಟು ಮಾಡುತ್ತಿದೆ.

Advertisement

ಬೆಳಗಾವಿ: ಶೆಟ್ಟರ್‌ಗೂ ಇಕ್ಕಟ್ಟು
ಬೆಳಗಾವಿ ಟಿಕೆಟ್‌ ಹಂಚಿಕೆ ವಿಚಾರವೂ ಹೈಕಮಾಂಡ್‌ಗೆ ತಲೆಬಿಸಿ ಸೃಷ್ಟಿಸಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ಕೊಟ್ಟರೆ ಅವರ ವಿರುದ್ಧ “ಬೆಳಗಾವಿ ರಿಪಬ್ಲಿಕ್‌’ ತಿರುಗಿ ಬೀಳಬಹುದು ಎಂಬ ಭಯ ಕಾಡುತ್ತಿದೆ. ಈ ಮಧ್ಯೆ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಮುರುಗೇಶ್‌ ನಿರಾಣಿ ಹೆಸರು ಕೂಡ ಪಂಚಮಸಾಲಿ ಕೋಟಾದಲ್ಲಿ ಮುನ್ನೆಲೆಗೆ ಬರಲಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next