Advertisement

ಗಲಭೆಗೆ ಬಿಟ್‌ಕಾಯಿನ್‌ ಪೇಮೆಂಟ್‌?

01:55 AM Jan 16, 2021 | Team Udayavani |

ನ್ಯೂಯಾರ್ಕ್‌/ವಾಷಿಂಗ್ಟನ್‌: ಅಮೆರಿಕದ ಇತಿಹಾಸದಲ್ಲಿ ಜ.6ರಂದು ನಡೆದ ಭೀಕರ ಹಿಂಸಾಚಾರದ ಘಟನೆಗೆ 5 ಲಕ್ಷ ಅಮೆರಿಕನ್‌ ಡಾಲರ್‌ ಮೊತ್ತವನ್ನು ಬಿಟ್‌ಕಾಯಿನ್‌ ರೂಪದಲ್ಲಿ ವರ್ಗಾಯಿಸಲಾಗಿತ್ತು. ಈ ಬಗ್ಗೆ 22 ವರ್ಚುವಲ್‌ ವಹಿವಾಟು ನಡೆಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಕ್ರಿಪ್ಟೋಕರೆನ್ಸಿ ವಹಿವಾಟಿನ ಬಗ್ಗೆ ಮಾಹಿತಿ ನೀಡುವ “ಚೈನ್‌ಅನಾಲಿಸಿಸ್‌’ ಎಂಬ ವೆಬ್‌ಸೈಟ್‌ನಲ್ಲಿ ಈ ಅಂಶ ಉಲ್ಲೇಖವಾಗಿದೆ. ಡಿ.8ರಂದು ಫ್ರಾನ್ಸ್‌ನ ವ್ಯಕ್ತಿ ಅದನ್ನು ನೀಡಿದ್ದ ಎಂದು ಹೇಳಿಕೊಂಡಿದೆ. ಜತೆಗೆ ಹಲವರಿಗೆ ಈ ಮೊತ್ತ ಸಂದಾಯವಾಗಿದೆ ಎಂಬ ಅಂಶವನ್ನು ಖಚಿತಪಡಿಸಿದೆ. ನಿಕ್‌ ಫ್ಯುಂಟೇಟ್ಸ್‌ ಎಂಬಾತನಿಗೆ ಅತ್ಯಂತ ಹೆಚ್ಚು ಅಂದರೆ 2,50,000 ಅಮೆರಿಕನ್‌ ಡಾಲರ್‌ ಮೊತ್ತ ಸಂದಾಯವಾಗಿದೆ.  ಆದರೆ ದೇಣಿಗೆ ನೀಡಿದ ವ್ಯಕ್ತಿ ಜೀವಿಸಿಲ್ಲ ಎಂಬುದನ್ನೂ ವೆಬ್‌ಸೈಟ್‌ ಖಚಿತಪಡಿಸಿದೆ.

Advertisement

ಕ್ಯಾಪಿಟಲ್‌ ಹಿಲ್‌ನಲ್ಲಿ ಜ.6ರಂದು ನಡೆದಿದ್ದ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ ಫೆಡರಲ್‌ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದೆ. ಇದರ ಜತೆಗೆ ಆನ್‌ಲೈನ್‌ನಲ್ಲಿ ಘಟನೆ ದಿನ ನಡೆಸಲಾಗಿರುವ  ಚರ್ಚೆಯ ವಿವರಗಳನ್ನು  ಪರಿಶೀಲನೆ ನಡೆಸುತ್ತಿದೆ ಎಂದು ತನಿಖಾ ಸಂಸ್ಥೆಯ ನಿರ್ದೇಶಕ ಕ್ರಿಸ್ಟೋಫ‌ರ್‌ ವಾರೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳನ್ನು ನಡೆಸದಂತೆ ಇರಲು ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಜತೆಗಿನ ಭೇಟಿ ವೇಳೆ ಕ್ರಿಸ್ಟೋಫ‌ರ್‌ ಈ ಮಾತುಗಳನ್ನಾಡಿದ್ದಾರೆ.  ಗಲಭೆ ದಿನಕ್ಕೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಮಂದಿಯ ಮೇಲೆ ಸಂಶಯ ಹೊಂದಲಾಗಿದೆ ಎಂದಿದ್ದಾರೆ.

ಬೈಡೆನ್‌ ತಂಡಕ್ಕೆ ಕಾಶ್ಮೀರಿ ಸಮೀರಾ ಫ‌ಝಿಲಿ  :

ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಹಣಕಾಸು ಕ್ಷೇತ್ರ ಸುಧಾರಣೆ ಮಾಡಲು ತಂಡವೊಂದನ್ನು ಈಗಾಗಲೇ ರಚಿಸಿದ್ದಾರೆ. ಅದಕ್ಕೆ ಜಮ್ಮು ಮತ್ತು ಕಾಶ್ಮೀರ ಮೂಲದ ಸಮೀರಾ ಫ‌ಝಿಲಿ ಅವರನ್ನು ನೇಮಿಸಿದ್ದಾರೆ. ಅವರು ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕಿಯಾಗಲಿದ್ದಾರೆ.

ಕಮಲಾ ನೇತೃತ್ವದಲ್ಲಿ ಟ್ರಂಪ್‌ಗೆ ವಾಗ್ಧಂಡನೆ? :

Advertisement

ನ್ಯೂಯಾರ್ಕ್‌/ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸೆನೆಟ್‌ನಲ್ಲಿ ವಾಗ್ಧಂಡನೆ ಪ್ರಕ್ರಿಯೆ ಜ.20ರಂದು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಅದೇ ದಿನ ಡೆಮಾಕ್ರಟಿಕ್‌ ಪಕ್ಷದ ನಾಯಕ, ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ  ಸ್ವೀಕರಿಸಲಿದ್ದಾರೆ. ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಟ್ರಂಪ್‌ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆಯ ನೇತೃತ್ವವನ್ನು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೇ ವಹಿಸಿಕೊಳ್ಳುವ ಸಾಧ್ಯತೆಗಳು ಇವೆ. ಈ ಬಗ್ಗೆ ಮಾತನಾಡಿದ ಸೆನೆಟ್‌ ನಾಯಕ ಮಿಚ್‌ ಮ್ಯಾಕ್‌ಕೊನ್ನೆಲ್‌ ಟ್ರಂಪ್‌ ಅಧಿಕಾರದಿಂದ ನಿರ್ಗಮಿಸಿದ ಬಳಿಕ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಳ್ಳಲಿರುವುದರಿಂದ ಅವರೇ ಪ್ರಕ್ರಿಯೆಯ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.  ಟ್ರಂಪ್‌ ವಿರುದ್ಧದ ಪ್ರಕ್ರಿಯೆ ಪೂರ್ಣವಾಗಬೇಕಾದರೆ 100 ಸದಸ್ಯರಿರುವ ಅಮೆರಿಕ ಸಂಸತ್‌ ಮೇಲ್ಮನೆ, ಸೆನೆಟ್‌ನಲ್ಲಿರುವ 50 ಮಂದಿ ರಿಪಬ್ಲಿಕನ್‌ ಪಕ್ಷದ 17 ಮಂದಿ ಸಂಸದರು ಡೆಮಾಕ್ರಟ್‌ ಸದಸ್ಯರಿಗೆ ಬೆಂಬಲ ನೀಡಬೇಕು. ಹೀಗಾದರೆ ಮಾತ್ರ ಮೂರನೇ ಒಂದರಷ್ಟು ಬಹುಮತ ಬಂದು ಟ್ರಂಪ್‌ ವಿರುದ್ಧದ ಪ್ರಕ್ರಿಯೆ ಪೂರ್ಣಗೊಂಡಂತೆ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next