Advertisement
ಸಿಐಡಿ ವಿಭಾಗದಲ್ಲಿರುವ ಎಸ್‌ಐಟಿ ತಂಡದ ತನಿಖಾಧಿಕಾರಿ ಕೆ.ರವಿ ಶಂಕರ್ ನೀಡಿದ ದೂರಿನ ಆಧಾರದ ಮೇಲೆ ಎಚ್ ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್ ಪ್ರೈ.ಲಿ.ನ ಸಿಇಒ ಕೆ.ಎಸ್. ಸಂತೋಷ್ ಕುಮಾರ್(ಎ1), ಬೆಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ (ಎ2), ಚಂದ್ರಾಧರ್ (ಎ3), ಆಡುಗೋಡಿ ಟೆಕ್ನಿಕಲ್ ಸಪೋರ್ಟ್ ಸೆಂಟರ್‌ನ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು (ಎ4), ಬೆಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಕೆ.ಪೂಜಾರ್ (ಎ5) ವಿರುದ್ಧ ಸಿಐಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
Related Articles
Advertisement
ಶ್ರೀಕಿಯನ್ನು ಕೂಡಿ ಹಾಕಿದ್ದ ತನಿಖಾಧಿಕಾರಿಗಳು: ಬಿಟ್ ಕಾಯಿನ್ ಪ್ರಕರಣ ಸಂಬಂಧ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿಯಾಗಿದ್ದ ಆರೋಪಿ ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ್ ಪ್ರಕರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇಲ್ ವಾಲ್‌ನನ್ನು 2020ರಲ್ಲಿ ಸಿಎಆರ್ ಅತಿಥಿ ಗೃಹ ಹಾಗೂ ಸಿಸಿಬಿ ಕಚೇರಿಯಲ್ಲಿ ಅಕ್ರಮವಾಗಿ ಅಕ್ರಮ ಬಂಧನದಲ್ಲಿರಿಸಿದ್ದರು. ಶ್ರೀಕಿ ಮತ್ತು ರಾಬಿನ್‌ನನ್ನು 2020ರ ಡಿಸೆಂಬರ್ ಹಾಗೂ 2021ರ ಜನವರಿಯಲ್ಲಿ ಹಲವಾರು ಬಾರಿ ಆನಧಿಕೃತವಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಖಾಸಗಿ ಸಂಸ್ಥೆ ಜಿಸಿಐಡಿ ಟೆಕ್ನಾಲಜೀಸ್ ಪ್ರೈ.ಲಿ.ಗೆ ತನಿಖಾಧಿಕಾರಿಗಳು ಕರೆದೊಯ್ದಿದ್ದರು. ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಪ್ರಕರಣಗಳಲ್ಲಿ ತಾಂತ್ರಿಕ ವಿಶ್ಲೇಷಣೆಗಾಗಿ ಆರೋಪಿ ಸಂತೋಷ್ ಕುಮಾರ್‌ನನ್ನು ತನಿಖಾಧಿಕಾರಿಗಳಿಗೆ ಪರಿಚಯಿಸಿದ್ದರು. ನಂತರ ತನಿಖೆಯಲ್ಲಿ ಸಂತೋಷ್‌ನನ್ನು ಬಳಸಿಕೊಳ್ಳಲಾಗಿತ್ತು.
ತನಿಖಾಧಿಕಾರಿಗಳಿಂದಲೇ ಸಾಕ್ಷ್ಯ ನಾಶ : 2021ರ ಜ.22ರಂದು ಶ್ರೀಕಿಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸೌಲಭ್ಯ ಒದಗಿಸಿಕೊಟ್ಟು ಆತನನ್ನು ಸ್ವತಂತ್ರವಾಗಿ ಬಿಟ್ಟಿದ್ದ ಕಾರಣ ಆತ ತನ್ನ ಸ್ನೇಹಿತೆಗೆ ಈಮೇಲ್ ರವಾನಿಸಿದ್ದ. ಶ್ರೀಕಿ ವ್ಯಾಲೆಟ್‌ನಿಂದ ಸಂತೋಷ್ ಕುಮಾರ್ ವ್ಯಾಲೆಟ್‌ಗೆ ಅಕ್ರಮವಾಗಿ ಬಿಟ್ ಕಾಯಿನ್ ವರ್ಗಾವಣೆ ಮಾಡಿಕೊಳ್ಳಲು ತನಿಖಾಧಿಕಾರಿಗಳೇ ಅವಕಾಶ ಕಲ್ಪಿಸಿದ್ದಾರೆ. ಸಂತೋಷ್ ಕುಮಾರ್ ಹಾಗೂ ತನಿಖಾಧಿಕಾರಿಗಳು ತಾವು ಎಸಗಿರುವ ಅಕ್ರಮಗಳು ಬೆಳಕಿಗೆ ಬಂದರೆ ಮುಂದೆ ನಡೆಯಬಹುದಾದ ತನಿಖೆಗೆ ಸಾಕ್ಷ್ಯ ದೊರೆಯಬಾರದೆಂಬ ಉದ್ದೇಶದಿಂದಲೇ ಎಂಎಸ್‌ಐ ಲ್ಯಾಪ್‌ಟಾಪ್‌ನಲ್ಲಿ ಬ್ಯಾಶ್ ಹಿಸ್ಟರಿ ಡಿಲೀಟ್ ಮಾಡಿ, ಬಿಟ್ ಕಾಯಿನ್ ವರ್ಗಾವಣೆ ಮಾಡುವಾಗ ಮಿಕ್ಸರ್ ಬಳಸಿ ಸಾಕ್ಷ್ಯಧಾರ ನಾಶಪಡಿಸಿದ್ದಾರೆ.
ಏನಿದು ಬಿಟ್ ಕಾಯಿನ್ ಪ್ರಕರಣ? : 2020ರಲ್ಲಿ ಕೆಂಪೇಗೌಡ ನಗರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿದ್ದರು. ಈತ ಡಾರ್ಕ್‌ನೆಟ್‌ನಲ್ಲಿ ಬಿಟ್ ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿರುವುದು ಗೊತ್ತಾಗಿತ್ತು. ಪ್ರಕರಣದ ಮೂಲ ಪತ್ತೆ ಹಚ್ಚಲು ಹೋದಾಗ ಬಿಟ್ ಕಾಯಿನ್ ರೂವಾರಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಸಿಕ್ಕಿಬಿದ್ದಿದ್ದ. ಶ್ರೀಕಿ ತನ್ನ ಸಹಚರರ ಜೊತೆ ಸೇರಿ ಸರ್ಕಾರಿ ವೆಬ್ ಸೈಟ್ ಸೇರಿದಂತೆ ಆನ್‌ಲೈನ್ ಗೇಮಿಂಗ್ ಆ್ಯಪ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ದೋಚಿದ್ದರು ಎನ್ನಲಾಗಿದೆ.
ಹೆಚ್ಚಿನ ತನಿಖೆಗಾಗಿ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು. 2023ರ ಜುಲೈನಲ್ಲಿ ಬಿಟ್‌ಕಾಯಿನ್ ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಲಾಗಿತ್ತು. ಬಿಟ್‌ಕಾಯಿನ್ ಹಗರಣದಲ್ಲಿ ಇನ್ ಸ್ಪೆಕ್ಟರ್ ಹಾಗೂ ಖಾಸಗಿ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಪತ್ತೆಯಾದ ಸಾಕ್ಷ್ಯಾಧಾರದ ಮೇಲೆ ಎಸ್‌ಐಟಿ ತಂಡ ಇದರ ಜಾಲ ಭೇದಿಸುತ್ತಿದೆ. ತನಿಖಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚು ಮಾಹಿತಿ ನೀಡಲು ಆಗುವುದಿಲ್ಲ. -ಅಲೋಕ್ ಮೋಹನ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ