Advertisement

ಬಿಟ್‌ ಗ್ರಹಣ? ವಿಲೇವಾರಿಯಾಗದ ಕಡತ; ಆಡಳಿತ ನಿಶ್ಚಲ

01:04 AM Nov 15, 2021 | Team Udayavani |

ಬೆಂಗಳೂರು: ಬಹುಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ ಪ್ರಕರಣ ರಾಜಕೀಯ ವಿವಾದದ ಸ್ವರೂಪ ಪಡೆದಿದೆ. ಅದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುವ ಲಕ್ಷಣಗಳು ಕಂಡು ಬರುತ್ತಿವೆ. ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾ ವಣೆ ಯಿಂದಾಗಿ ಮುಖ್ಯಮಂತ್ರಿ ಸಹಿತ ಸಚಿವ ಸಂಪುಟ ಅತ್ತ ಗಮನಹರಿಸಿದ್ದರಿಂದ ಹದಿನೈದು ದಿನ ಆಡಳಿತ ಯಂತ್ರ ಸ್ಥಗಿತಗೊಂಡಂತೆ ಇತ್ತು. ಈಗ ಬಿಟ್‌ ಕಾಯಿನ್‌ ಪ್ರಕರಣ ಅನಂತರದ ಊಹಾಪೋಹಗಳು ಇದೇ ರೀತಿ ಮುಂದುವರಿದರೆ ಬೇರೆ ರೀತಿಯ ಪರಿಣಾಮ ಉಂಟಾಗ ಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

Advertisement

ಐಪಿಎಸ್‌-ಐಎಎಸ್‌ ಅಧಿಕಾರಿ ವಲಯ ಮತ್ತು ವಿಧಾನಸೌಧ-ಸಚಿವಾಲಯಗಳಲ್ಲೂ ಬಿಟ್‌ ಕಾಯಿನ್‌ ಮಾತುಕತೆಯೇ ವ್ಯಾಪಕವಾಗಿದ್ದು, ಬೊಮ್ಮಾಯಿ ಅವರ ಹೊಸದಿಲ್ಲಿ ಭೇಟಿಯ ಬಳಿಕದ ವಿದ್ಯಮಾನ ಗಳಿಂದ ಮುಂದೇನಾಗುತ್ತದೋ ಎಂಬ ಅಳುಕು ಆವರಿಸಿದಂತಿದೆ.

ಪ್ರಕರಣದ ರಾಜಕೀಯ ರಾಡಿಯಿಂದಾಗಿ ಆಡಳಿತ ಯಂತ್ರಕ್ಕೆ ಗ್ರಹಣ ಹಿಡಿಯದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರಮಿಸಬೇಕಿದೆ.

ಚುನಾವಣೆ ಮಧ್ಯೆ ಆತಂಕ
ವಿಧಾನಪರಿಷತ್‌ ಚುನಾವಣೆಗೆ ಸಜ್ಜಾಗು ತ್ತಿರುವ ಸಂದರ್ಭದಲ್ಲೇ ಆರೋಪ ಎದು ರಾಗಿರು ವುದು ಬಿಜೆಪಿ ಯಲ್ಲಿ ಆತಂಕ ಮೂಡಿ ಸಿದೆ. ಬಿಟ್‌ ಕಾಯಿನ್‌ ಪ್ರಕರಣದ ಕುರಿತು ಕಾಂಗ್ರೆಸ್‌ ಪ್ರಸ್ತಾವ ಮಾಡಿದ ಪ್ರಾರಂಭದಲ್ಲೇ ಪ್ರತಿದಾಳಿ ನಡೆಸಿದ್ದರೆ “ಹಾನಿ’ ತಪ್ಪುತ್ತಿತ್ತು. ಆಗ ಕಾಂಗ್ರೆಸ್‌ ಟೀಕೆಗಳ ಬಗ್ಗೆ ನಿರ್ಲಕ್ಷ é ಮಾಡಲಾಯಿತು. ಪ್ರಕರಣದ ಆರೋಪ ಬೇರೆ ಸ್ವರೂಪ ಪಡೆದದ್ದರಿಂದ ಪಕ್ಷ ಮತ್ತು ಸರಕಾರದ ಮೇಲೆ ದುಷ್ಪರಿ ಣಾಮ ಬೀರುವಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಕರಣದ ದಾಖಲೆಗಳನ್ನು ಸಚಿವರು, ಅಧಿಕಾರಿಗಳೇ ಒದಗಿಸುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಮಾತು ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿದೆ. ಸಿಎಂ ದಿಲ್ಲಿ ಭೇಟಿ ಸಂದರ್ಭದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ಸಚಿವರೊಬ್ಬರ ವಿರುದ್ಧ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Advertisement

ಶೀಘ್ರದಲ್ಲೇ ಆ ಸಚಿವರನ್ನು ವರಿಷ್ಠರು ಕರೆಸಿ ತಾಕೀತು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಟ್‌ ಕಾಯಿನ್‌ ವಿಚಾರ ಆಡಳಿತಾರೂಢ ಬಿಜೆಪಿಯಲ್ಲಿ ಸಾಕಷ್ಟು ತಳಮಳ ಸೃಷ್ಟಿಸಿದ್ದು, ಇದರಿಂದ ಪಕ್ಷ ಮತ್ತು ಸರಕಾರದ ಮೇಲೆ ಏನು ಪರಿಣಾಮ ವಾದೀತು ಎಂಬ ಚಿಂತೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡುತ್ತಿದೆ.

ವದಂತಿಗಳ ತೊಂದರೆ
ಯಾವುದೇ ಪಕ್ಷದ ಸರಕಾರ ಇರಲಿ; ನಾಯಕತ್ವ ಬದಲಾವಣೆಯ ಗುಸುಗುಸು ಪ್ರಾರಂಭವಾದರೆ ಯಾವಾಗ ಏನಾಗುತ್ತದೆಯೋ ಎಂಬ ಮಾತುಗಳು ಆರಂಭ ವಾಗುತ್ತವೆ. ಅದು ಆಡಳಿತ ಯಂತ್ರದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೊದಲ ದಿನದಿಂದಲೂ ಕೇಳಿ ಬರುತ್ತಿದ್ದ ಸರಕಾರದ ಪತನದ ಮಾತುಗಳಿಂದಾಗಿ ಆಡಳಿತ ಯಂತ್ರಕ್ಕೆ ವೇಗ ಸಿಗಲೇ ಇಲ್ಲ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗಲೂ ಆಗಾಗ ನಾಯಕತ್ವ ಬದಲಾವಣೆ ಚರ್ಚೆ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುವಂತಾಗಿತ್ತು.

ಕಡತ ವಿಲೇವಾರಿಗೆ ಮುಂದಾಗದ ಸಚಿವರು
ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ಇಡೀ ದಿನ ಕಡತ ವಿಲೇವಾರಿ ಮಾಡಿ ದರಾದರೂ ಇತರ ಸಚಿವರು ತಮ್ಮ ಇಲಾಖೆಗಳ ಕಡತಗಳ ವಿಲೇವಾರಿಗೆ ಮುಂದಾಗಿಲ್ಲ. ಅಧಿಕಾರಿ ವರ್ಗದ ನಿರಾಸಕ್ತಿಯಿಂದ ಮನೆ ಬಾಗಿಲಿಗೆ ಪಡಿತರ ಪೂರೈಕೆ, ರೈತರ ಮಕ್ಕಳಿಗೆ ವಿತರಿಸುವ ವಿದ್ಯಾನಿಧಿ, ಸೋಂಕಿನಿಂದ ಮೃತಪಟ್ಟವರಿಗೆ ಪರಿಹಾರ ವಿತರಣೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಿರೀಕ್ಷಿತ ವೇಗ ಸಿಗುತ್ತಿಲ್ಲ.

ಮೂಲ ನಾಯಕರ ಮೌನ, ಸಿಎಂ ಬೇಸರ
ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಮೂಲ ಬಿಜೆಪಿ ಸಚಿವರು ಮತ್ತು ನಾಯಕರು ಮೌನ ವಹಿಸಿರುವುದು ಸಿಎಂ ಬೊಮ್ಮಾಯಿ ಅವರಲ್ಲಿ ಬೇಸರ ಮೂಡಿಸಿದೆ ಎನ್ನಲಾಗಿದೆ. ವಿಪಕ್ಷ ಕಾಂಗ್ರೆಸ್‌ ವಾಗ್ಧಾಳಿ ನಡೆಸುತ್ತಿದ್ದರೂ ಸಂಪುಟದಲ್ಲಿರುವ ಮೂಲ ಬಿಜೆಪಿ ಸಚಿವರು ಚಕಾರ ಎತ್ತುತ್ತಿಲ್ಲ. ಬದಲಿಗೆ ಕಾಂಗ್ರೆಸನ್ನು ಪ್ರಚೋದಿಸುವ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಅವರ ಬೇಸರಕ್ಕೆ ಕಾರಣ ಎನ್ನಲಾಗಿದೆ. ಪಕ್ಷದ ಮುಖ್ಯ ವಕ್ತಾರ ಕ್ಯಾ| ಗಣೇಶ್‌ ಕಾರ್ಣಿಕ್‌, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ನಿತ್ಯ ಪತ್ರಿಕಾ ಗೋಷ್ಠಿ ಮತ್ತು ಹೇಳಿಕೆಗಳ ಮೂಲಕ ಕಾಂಗ್ರೆಸ್‌ ವಿರುದ್ಧ ಮುಗಿ ಬೀಳುತ್ತಿದ್ದು, ಸಚಿವ ಡಾ| ಸುಧಾಕರ್‌ ಪತ್ರಿಕಾಗೋಷ್ಠಿ ನಡೆಸಿದ್ದು ಬಿಟ್ಟರೆ ಮೂಲ ಬಿಜೆಪಿ ಸಚಿವರು ಹಾಗೂ ಪಕ್ಷದ ನಾಯಕರು ಸಿಎಂ ಪರ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಹೀಗಾಗಿ ಸಿಎಂಗೆ ಅಸಮಾಧಾನ ವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next