ಬೆಂಗಳೂರು: ಬಿಟ್ ಕಾಯಿನ್ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಅವರ ಸಹೋದರ ಸುದರ್ಶನ್ ರಮೇಶ್ ಅವರ ವಿರುದ್ಧ ಹೊರಡಿಸಲಾಗಿರುವ “ಲುಕ್‌ಔಟ್ ಸರ್ಕ್ನೂಲರ್’ (ಎಲ್‌ಒಸಿ)ಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿ ಜಾರಿ ನಿರ್ದೇಶನಾಲಯ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಸುದರ್ಶನ್ ರಮೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು ವಾದ ಮಂಡಿಸಿ, ಲುಕ್ ಔಟ್ ಸರ್ಕ್ನೂಲರ್ ಬಗ್ಗೆ ಮಾಹಿತಿ ನೀಡಲಾಗುತ್ತಿಲ್ಲ. ಹೀಗಾಗಿ ವಾದ ಮಂಡನೆಗೆ ಕಷ್ಟವಾಗುತ್ತಿದೆ. ಅಲ್ಲದೇ ಫೆ.12ರೊಳಗೆ ಕೆಲಸಕ್ಕೆ ಹಾಜರಾಗದಿದ್ದರೆ, ಉದ್ಯೋಗದಿಂದ ತೆರವುಗೊಳಿಸಲಾಗುವುದು ಎಂದು ಉದ್ಯೋಗದಾತ ಸಂಸ್ಥೆ ಹೇಳಿದೆ. ಆದ್ದರಿಂದ ತಮ್ಮ ಕಕ್ಷಿದಾರರು ನೆದರ್‌ಲ್ಯಾಂಡ್‌ಗೆ ಹೋಗದಿದ್ದರೆ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅದಕ್ಕೆ, ಲುಕ್‌ಔಟ್ ಸರ್ಕ್ನೂಲರ್ ಗೌಪ್ಯ ದಾಖಲೆಯಾಗಿದ್ದು, ಬಹಿರಂಗಪಡಿಸಲು ಆಗುವುದಿಲ್ಲ ಎಂದರು. ಹಾಗಿದ್ದರೆ, ಲುಕ್‌ಔಟ್ ಸರ್ಕ್ನೂಲರ್ ಮಾಹಿತಿ ಅರ್ಜಿದಾರರ ಪರ ವಕೀಲರಿಗೆ ಇಲ್ಲವಾದರೆ ಅವರು ಅದನ್ನು ಪ್ರಶ್ನಿಸುವುದು ಹೇಗೆ ಎಂದು ಆಕ್ಷೇಪಿಸಿದ ನಾಯಪೀಠ, ಲುಕ್‌ಔಟ್ ಸರ್ಕ್ನೂಲರ್’ (ಎಲ್‌ಒಸಿ)ಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿತು. ಜಾರಿ ನಿರ್ದೇಶನಾಲಯದ ಪರ ವಕೀಲ ಪಿ. ಪ್ರಸನ್ನಕುಮಾರ್ ವಾದ ಮಂಡಿಸಿದರು.