Advertisement
ಅಂದಾಜು ನಿತ್ಯ 58 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸುವ ವ್ಯವಸ್ಥೆ ಈಗ ಆರ್ಥಿಕ ಮುಗ್ಗಟ್ಟಿನಿಂದಾಗಿ ಹಳಿ ತಪ್ಪಿದೆ. ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಸಲು ಶಿಕ್ಷಕರೇ ಹಣ ಖರ್ಚು ಮಾಡುತ್ತಿರುವುದರಿಂದ ಅವರ ಜೇಬಿಗೆ ಹೊರೆ ಬೀಳುವಂತಾಗಿದೆ.
Related Articles
Advertisement
ಕೇಂದ್ರ ಸರಕಾರ ಬಿಸಿಯೂಟಕ್ಕೆ ನೀಡಬೇಕಾದ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡದಿರುವುದರಿಂದ ಈ ಶೈಕ್ಷಣಿಕ ವರ್ಷದ ಮೊದಲ ತೈಮಾಸಿಕದ ಹಣ ಬಿಡುಗಡೆ ತಡವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ ನಡೆಸುವ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯ ಶೇ. 60 ವೆಚ್ಚವನ್ನು ಕೇಂದ್ರ ಸರಕಾರ, ಉಳಿದ ಶೇ. 40ರಷ್ಟು ವೆಚ್ಚವನ್ನು ರಾಜ್ಯ ಸರಕಾರ ಭರಿಸುತ್ತದೆ. ಮೊದಲ ತೈಮಾಸಿಕದ ಬಿಸಿಯೂಟ ಯೋಜನೆಗೆ ಕೇಂದ್ರ ಸರಕಾರದಿಂದ ಹಣ ಬರಲು ಬಾಕಿಯಿದ್ದ ಕಾರಣ ನಾವು ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ಕೇಂದ್ರದಿಂದ 135 ಕೋಟಿ ರೂ ಬಿಡುಗಡೆಯಾಗಿದ್ದು ರಾಜ್ಯ ಸರಕಾರದಿಂದ 81 ಕೋಟಿ ರೂ. ಬಂದಿದೆ. ಹೀಗಾಗಿ ಮುಂದಿನ ವಾರ ಅನುದಾನ ಬಿಡುಗಡೆಯಾಗಬಹುದೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
58 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ
ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಪ್ರತೀ ದಿನ 1ರಿಂದ 5ನೇ ತರಗತಿಯ ಪ್ರತೀ ವಿದ್ಯಾರ್ಥಿಗೆ ತಲಾ 1.49 ರೂ. ಮತ್ತು 6ರಿಂದ 10ನೇ ತರಗತಿಯ ಪ್ರತೀ ವಿದ್ಯಾರ್ಥಿಗೆ 2.24 ರೂ.ಗಳಂತೆ ಅನುದಾನ ನೀಡಲಾಗುತ್ತಿದೆ. ರಾಜ್ಯದಲ್ಲಿ 53,882 ಶಾಲೆಗಳಲ್ಲಿ ಒಟ್ಟು 58 ಲಕ್ಷ ವಿದ್ಯಾರ್ಥಿಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕೆಲವು ಶಾಲೆಗಳಿಗೆ ಬಿಸಿಯೂಟದ ಹಣ ಬಿಡುಗಡೆಯಾಗಿಲ್ಲ ಎಂಬ ಮಾಹಿತಿಯಿದೆ. ಶೀಘ್ರವೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಾಳೆಹಣ್ಣು, ಚಿಕ್ಕಿ, ಮೊಟ್ಟೆಯ ಅನುದಾನ ಬಂದಿಲ್ಲ ಎಂದು ಮುಖ್ಯ ಶಿಕ್ಷಕರು ಹೇಳುತ್ತಿದ್ದಾರೆ. ಸಮಸ್ಯೆ ಶೀಘ್ರ ಪರಿಹಾರಗೊಳ್ಳುವ ವಿಶ್ವಾಸವಿದೆ.
– ಕೃಷ್ಣಪ್ಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ
ಮೂರು ತಿಂಗಳುಗಳಿಂದ ಬಿಸಿಯೂಟ ಯೋಜನೆಗೆ ಅನುದಾನ ಬಿಡುಗಡೆ ಆಗಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದ್ದು, ವಾರದಲ್ಲಿ ಎಲ್ಲ ಶಾಲೆಗಳಿಗೆ ಅನುದಾನ ಜಮೆ ಮಾಡಲಾಗುತ್ತದೆ.
-ಬಂದೋಲಿಸಾಬ, ಅಕ್ಷರ ದಾಸೋಹ ಅಧಿಕಾರಿ
ರಾಕೇಶ್ ಎನ್.ಎಸ್./ನಾಗರಾಜ ತೇಲ್ಕರ್