Advertisement

ಕ್ರಿಸ್ಮಸ್‌: ಬಿಷಪ್‌ ಸಂದೇಶ

10:01 AM Dec 24, 2018 | |

ಕ್ರಿಸ್ಮಸ್‌ ಭರವಸೆಯ ಬದುಕಿಗೆ ಆಹ್ವಾನ
ಉಡುಪಿ: ಯೇಸು ಕ್ರಿಸ್ತರ ಜನನ ಭರವಸೆಯ ಕಿರಣ, ಹೊಸ ಬದುಕಿಗೆ ಆಹ್ವಾನವಾಗಿದೆ.ಕ್ರಿಸ್ತ ಜಯಂತಿ ಹಬ್ಬದ ಆಚರಣೆಯಲ್ಲಿ ಜಗತ್ತಿನಾದ್ಯಂತ ವೈವಿಧ್ಯವಿದ್ದರೂ ಯೇಸು ಕ್ರಿಸ್ತರ ಜನನದ ಸಂದೇಶದಲ್ಲಿ ಏಕತೆಯಿದೆ. ಆತನು ಶಾಂತಿ, ಪ್ರೀತಿ, ಸಹಕಾರ, ಸೌಹಾರ್ದದ ಸಾಕಾರ ಮೂರ್ತಿ. ಆತನು ಎಲ್ಲ ವರ್ಗದ ಜನರಿಗಾಗಿ ಅವತರಿಸಿದ ದಿವ್ಯತಾರೆ, ದೇವಕುವರನೆಂದು ಜಗವೆಲ್ಲ ಸಂತೋಷಪಡುವಾಗ, ವಿವಿಧ ರೀತಿಯ ಶೋಷಣೆ, ಭಯ, ಭಯೋತ್ಪಾದನೆ, ಕಳವಳ, ಹಿಂಸೆ, ಗಲಭೆ, ಅಸಮಾನತೆಯ ವಾತಾವರಣ ದಲ್ಲಿ ಯೇಸುಕ್ರಿಸ್ತನ ಶಾಂತಿ-ಪ್ರೀತಿಯ ಸಂದೇಶ ಸಾರುವ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುವುದು ಹೆಚ್ಚು ಅರ್ಥಪೂರ್ಣ.


ದೇವರ ಪ್ರೀತಿಯ ಅಗಾಧತೆಯನ್ನು ತಿಳಿಸುವ, ಶಾಂತಿ ಸಂದೇಶ ಸಾರುವ ಹಬ್ಬ ಕ್ರಿಸ್ಮಸ್‌. ದೇವರೊಂದಿಗಿನ ಆತ್ಮೀಯ ಸಂಬಂಧದಿಂದ ದೂರಾದ ಮಾನವನನ್ನು ಮತ್ತೆ ತನ್ನೊಂದಿಗಿನ ಸಂಬಂಧದಲ್ಲಿ ಐಕ್ಯಗೊಳಿಸಲು ದೇವರು ಆರಿಸಿದ ವಿಶಿಷ್ಟ ವಿಧಾನವೇ ಯೇಸುವಿನ ಆಗಮನ. ಮನುಷ್ಯತ್ವ ಮರೀಚಿಕೆಯಾದಂತೆ ಭಾಸವಾಗುತ್ತಿರುವ, ಪ್ರಸ್ತುತ ಸಮಾಜದಲ್ಲಿ ದೇವರೂ ಸಂಪೂರ್ಣ ಮಾನವರೂ ಆದ ಯೇಸುಕ್ರಿಸ್ತರ ಜಯಂತಿ ಮನುಜಕುಲದ ಹಿರಿಮೆ, ಸ್ವಾತಂತ್ರ್ಯ, ಶಾಂತಿ, ಭಾವೈಕ್ಯ, ನೈತಿಕತೆಯನ್ನು ಜ್ಞಾಪಿಸುವ, ಎತ್ತಿ ಹಿಡಿಯುವ ಶ್ರೇಷ್ಠ ಸಂದರ್ಭ. ಕ್ರಿಸ್ತ ಜಯಂತಿಯ ಆಚರಣೆ ಇಂದು ಹೆಚ್ಚು ಪ್ರಸ್ತುತವೆನಿಸುತ್ತದೆ. ಅಂದು ಜರಗಿದ ಅನೇಕ ಘಟನೆಗಳನ್ನು ಅದು ಇಂದು ನೆನಪಿಸುತ್ತದೆ. ಮಾತೆ ಮರಿಯ ಮತ್ತು ಸಂತ ಜೋಸೆಫ್ ಎಲ್ಲ ಯಾತ್ರಾರ್ಥಿಗಳಿಗೆ, ನಿರಾಶ್ರಿತರಿಗೆ ನಿರ್ಲಕ್ಷಿತರಿಗೆ ಸ್ಫೂರ್ತಿಯಾಗಿದ್ದಾರೆ. ಎಲ್ಲ ಸುಮನಸ್ಕ ಬಂಧು-ಬಾಂಧವರಿಗೆ ಕ್ರಿಸ್ತ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಉದಯಸೂರ್ಯ ಯೇಸುಕಂದ ನಿಮ್ಮ ಮನೆ- ಮನಗಳನ್ನು ತನ್ನ ಜ್ಯೋತಿಪ್ರಕಾಶದಿಂದ ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ.
ಡಾ| ಜೆರಾಲ್ಡ್‌ ಐಸಾಕ್‌ ಲೋಬೊ, ಬಿಷಪ್‌, ಉಡುಪಿ ಧರ್ಮಪ್ರಾಂತ 

Advertisement

ಯೇಸು ನಮ್ಮೆಲ್ಲರ ಅಮೂಲ್ಯ ನಿಧಿ
ಕಡಬ: ಯೇಸು ಕಂದ ನಮ್ಮೆಲ್ಲರ ಹೃದಯವೆಂಬ ಗೋದಲಿಯಲ್ಲಿ ಹುಟ್ಟಿದಾಗ ಮಾತ್ರ ನಾವು ಆಚರಿಸುವ ಕ್ರಿಸ್ತ ಜಯಂತಿ ಹಬ್ಬವು ಸಾರ್ಥಕವಾಗುವುದು. ಎಲ್ಲ ರೀತಿಯ ಅಭದ್ರತೆಗಳಿಂದ, ಕಷ್ಟ-ಕಾರ್ಪಣ್ಯಗಳಿಂದ ನಮ್ಮ ಜೀವನವು ಬಿಡುಗಡೆ ಹೊಂದಲಿ.


ಪ್ರಭು ಕ್ರಿಸ್ತರ ಜನನದ ಸಂದೇಶವನ್ನು ಪಡೆದ ಆ ದೀನ ಕುರುಬರು ಬಾಲ ಏಸುವನ್ನು ಹುಡುಕುತ್ತಾ ಹೊರಟರು. ಜ್ಞಾನಿಗಳು ಬಾಲ ಯೇಸುವನ್ನು ಹುಡುಕಿ ಅವರ ದರ್ಶನ ಪಡೆದು ಕೊಡುಗೆಗಳನ್ನು ಅರ್ಪಿಸಿ ಜಯಂತಿಯ ಸಂದೇಶವನ್ನು ಇತರರಿಗೂ ತಿಳಿಸುವುದರ ಮುಖಾಂತರ ಸುವಾರ್ತೆಯನ್ನು ಸಾರುವವರಾಗಿ ಹೊರಬಂದರು. ನಾವು ಶಾಂತಿಯ ದೂತರಾಗಿ ಏಸುವಿನ ಅನ್ವೇಷಣೆಗೆ ತೊಡಗೋಣ. ವಿಶ್ವ ಶಾಂತಿಯ ಸಾಧಕರಾಗೋಣ, ಹೊಸ ವರುಷದಲ್ಲಿ ಕ್ರಿಸ್ತರ ಅನುಯಾಯಿಗಳು ಹಾಗೂ ಅನುರೂಪಿಗಳಾಗಿ ಹೊಸ ಬಾಳನ್ನು ಆರಂಭಿಸಿ ದೀನ-ದಲಿತರೊಡನೆ ಸಮಾನತೆಯಿಂದ ಬಾಳ್ಳೋಣ.

ಮನುಷ್ಯತ್ವ ಹಾಗೂ ಮಾನವೀಯತೆ ಮರೀಚಿಕೆಯಾಗುವಂತಹ ಪ್ರಸ್ತುತ ಸಮಾಜದಲ್ಲಿ ದೇವರೂ ಸಂಪೂರ್ಣ ಮಾನವರೂ ಆದ ಯೇಸು ಕ್ರಿಸ್ತರ ಜಯಂತಿ ಮಾನವ ಕುಲದ ಭಾವೈಕ್ಯ ಹಾಗೂ ನೈತಿಕತೆಯನ್ನು ಜ್ಞಾಪಿಸುವಂತಾಗಲಿ. ಪ್ರಭು ಯೇಸು ನಮ್ಮ ಜೀವನದ ಅಮೂಲ್ಯ ನಿಧಿಯಾಗಿ ಬದುಕಿಗೆ ಅರ್ಥ, ಮೌಲ್ಯ ಹಾಗೂ ಸುರಕ್ಷತೆಯನ್ನು ಒದಗಿಸಿ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ವಂ| ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೋಸ್‌, ಧರ್ಮಾಧ್ಯಕ್ಷರು, ಪುತ್ತೂರು ಧರ್ಮಪ್ರಾಂತ

Advertisement

Udayavani is now on Telegram. Click here to join our channel and stay updated with the latest news.

Next