Advertisement

ಕ್ರೈಸ್ತ ಸನ್ಯಾಸಿನಿ ಮೇಲಣ ನಿರ್ಬಂಧ ಹಿಂದೆಗೆದುಕೊಂಡ ಚರ್ಚ್‌ 

07:10 AM Sep 26, 2018 | Team Udayavani |

ವಯನಾಡು: ಅತ್ಯಾಚಾರ ಆರೋಪಿ ಬಿಷಪ್‌ ಫ್ರಾಂಕೊ ಮುಳಕ್ಕಲ್‌ ಅವರ ಬಂಧನಕ್ಕೆ ಆಗ್ರಹಿಸಿ ಕೊಚ್ಚಿಯಲ್ಲಿ ಕ್ರೈಸ್ತ ಸನ್ಯಾಸಿನಿಯರು ಈಚೆಗೆ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕ್ಯಾಥೋಲಿಕ್‌ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಚರ್ಚ್‌ ಸೋಮವಾರ ಹಿಂದೆಗೆದುಕೊಂಡಿತು.

Advertisement

ರವಿವಾರ ಇಲ್ಲಿನ ತನ್ನ ಪ್ಯಾರಿಶ್‌ಗೆ ಮರಳಿದ್ದ ಸಿಸ್ಟರ್‌ ಲೂಸಿ ಕಾಲಪುರ ಅವರಿಗೆ ಚರ್ಚ್‌ ನ ಎಲ್ಲ ಕರ್ತವ್ಯಗಳಿಂದ ದೂರವಿರುವಂತೆ ಸೂಚಿಸಲಾಗಿತ್ತು. ಇವುಗಳಲ್ಲಿ ಪ್ರಾರ್ಥನೆಗಳ ನಿರ್ವಹಣೆ ಸೇರಿದಂತೆ ಸಿರೊ ಮಲಬಾರ್‌ ಕ್ಯಾಥೋಲಿಕ್‌ ಚರ್ಚ್‌ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಸೇರಿದ್ದವು. ಜಿಲ್ಲೆಯ ಕರಕ್ಕಮಲದಲ್ಲಿನ ಸೈಂಟ್‌ ಮೇರೀಸ್‌ ಚರ್ಚ್‌ನ ಪ್ಯಾರಿಶ್‌ ಸಭೆಯಲ್ಲಿ  ಕ್ರೈಸ್ತ ಸನ್ಯಾಸಿನಿ ಮೇಲಣ ನಿಷೇಧವನ್ನು ಹಿಂದೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಕ್ರೈಸ್ತ ಸನ್ಯಾಸಿನಿ ವಿರುದ್ಧ ಕ್ರಮವನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಪ್ಯಾರಿಶ್‌ ಹಾಲ್‌ನ ಮುಂಭಾಗದಲ್ಲಿ ಆಸ್ತಿಕರ ಗುಂಪೊಂದು ಕೂಡ ಪ್ರತಿಭಟನೆ ನಡೆಸಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಸ್ಟರ್‌ ಲೂಸಿ ಕಾಲಪುರ, ತನ್ನ ವಿರುದ್ಧ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿರುವುದರಿಂದ ತನಗೆ ಸಂತಸವಾಗಿದೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಹೇಳಿದರು. ಬಿಷಪ್‌ ಅವರ ಬಂಧನಕ್ಕೆ ಆಗ್ರಹಿಸಿ ಕ್ರೈಸ್ತ ಸನ್ಯಾಸಿನಿಯರು 13 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಬಿಷಪ್‌ ಅವರನ್ನು ಕಳೆದ ಶನಿವಾರ ಬಂಧಿಸಲಾಗಿತ್ತು ಮತ್ತು ಮೂರು ದಿನಗಳ ಕಾಲ ಪೊಲೀಸ್‌ ತಂಡ ಅವರನ್ನು ತೀವ್ರ ಪ್ರಶ್ನೆಗೊಳಪಡಿಸಿದ ಬಳಿಕ ಸೋಮವಾರ ಕೋರ್ಟು ಅವರನ್ನು 12 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next