Advertisement
1946ರಲ್ಲಿ ಅಮೃತಸರದ ಸಂಪ್ರದಾಯಸ್ಥ ಸಿಕ್ಖ್ ಕುಟುಂಬದಲ್ಲಿ ಜನಿಸಿದ ಬಿಷನ್ ಸಿಂಗ್ ಬೇಡಿ, 1967-1979ರ ಅವಧಿಯಲ್ಲಿ 67 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಎಡಗೈ ಸ್ಪಿನ್ ಆಕ್ರಮಣದ ಜತೆಗೆ ನೇರ ಹಾಗೂ ದಿಟ್ಟ ವರ್ತನೆಯಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಕ್ರಿಕೆಟಿಗನಾಗಿದ್ದರು. ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಏಕದಿನ ಕ್ರಿಕೆಟ್‌ನಲ್ಲೂ ಸ್ವಲ್ಪ ಮಟ್ಟಿಗೆ ಛಾಪು ಮೂಡಿಸಿದ್ದರು. ಪತ್ನಿ ಅಂಜು, ಪುತ್ರ-ನಟ ಅಂಗದ್ ಬೇಡಿ, ಪುತ್ರಿ ನೇಹಾ ಬೇಡಿ ಹಾಗೂ ಅಪಾರ ಕ್ರಿಕೆಟ್ ಅಭಿಮಾನಿಗಳನ್ನು ಬೇಡಿ ಅಗಲಿದ್ದಾರೆ.
67 ಟೆಸ್ಟ್ ಪಂದ್ಯಗಳಿಂದ 266 ವಿಕೆಟ್, ಏಕದಿನದಲ್ಲಿ 7 ವಿಕೆಟ್ ಉರುಳಿಸಿದ ಸಾಧನೆ ಬೇಡಿ ಅವರದು. ಭಾರತೀಯ ಸ್ಪಿನ್ ವಿಶ್ವ ಕ್ರಿಕೆಟನ್ನು ಆಳುತ್ತಿದ್ದ ಸಂದರ್ಭದಲ್ಲಿ ಬೇಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಇವರೊಂದಿಗೆ ಬಿ.ಎಸ್. ಚಂದ್ರಶೇಖರ್, ಇ.ಎ.ಎಸ್. ಪ್ರಸನ್ನ ಮತ್ತು ಎಸ್. ವೆಂಕಟರಾಘವನ್ ಅವರ ಅದ್ಭುತ ಕಾಂಬಿನೇಶನ್ ಇತ್ತು. ಆಗ ಭಾರತ ತಂಡ ಈ ನಾಲ್ವರು ಸ್ಪಿನ್ನರ್‌ಗಳಿಂದಲೇ ಟೆಸ್ಟ್ ಪಂದ್ಯಗಳನ್ನು ಗೆದ್ದು ಬರುತ್ತಿತ್ತು. ವೇಗದ ಬೌಲರ್ ಲೆಕ್ಕದ ಭರ್ತಿಗಷ್ಟೇ ಇದ್ದರು. ಒಂದು ದಶಕದ ಕಾಲ ಈ ಸ್ಪಿನ್ ಚತುಷ್ಟಯರು ಜಾಗತಿಕ ಕ್ರಿಕೆಟ್‌ನಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. ಇನ್ನಿಂಗ್ಸ್ ಒಂದರಲ್ಲಿ 98ಕ್ಕೆ 7 ವಿಕೆಟ್, ಟೆಸ್ಟ್ ಒಂದರಲ್ಲಿ 194ಕ್ಕೆ 10 ವಿಕೆಟ್ ಕೆಡವಿದ್ದು ಬೇಡಿ ಅವರ ಅತ್ಯುತ್ತಮ ನಿರ್ವಹಣೆ ಆಗಿದೆ. ಪೂರ್ವ ಆಫ್ರಿಕಾ ಎದುರಿನ 1975ರ ವಿಶ್ವಕಪ್ ಪಂದ್ಯದಲ್ಲಿ 12 ಓವರ್‌ಗಳಲ್ಲಿ 8 ಮೇಡನ್ ಮಾಡಿ, ಕೇವಲ 6 ರನ್ ನೀಡಿದ್ದು ಬೇಡಿ ಅವರ ಬೌಲಿಂಗ್ ಪರಾಕ್ರಮಕ್ಕೊಂದು ಸಾಕ್ಷಿ. 370 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,560 ವಿಕೆಟ್ ಉರುಳಿಸಿದ ಸಾಧನೆ ಇವರದು.
Related Articles
ಬೇಡಿ 1975-1979ರ ಅವಧಿಯಲ್ಲಿ ಭಾರತೀಯ ಟೆಸ್ಟ್ ತಂಡದ ನಾಯಕರೂ ಆಗಿದ್ದರು. ಮನ್ಸೂರ್ ಅಲಿ ಖಾನ್ ಪಟೌಡಿ ಅವರ ನಿವೃತ್ತಿ ಬಳಿಕ ಬೇಡಿಗೆ ನಾಯಕತ್ವ ಒಲಿದು ಬಂದಿತ್ತು. 1974-1982ರ ಅವಧಿಯಲ್ಲಿ ದಿಲ್ಲಿ ರಣಜಿ ತಂಡದ ನಾಯಕರಾಗಿದ್ದರು. ಇವರ ಸಾರಥ್ಯದಲ್ಲಿ ದಿಲ್ಲಿ 2 ಸಲ ರಣಜಿ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಟೆಸ್ಟ್ ವಿದಾಯದ ಬಳಿಕ 1990ರ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಭಾರತ ತಂಡದ ಮ್ಯಾನೇಜರ್ ಆಗಿ ಕರ್ತವ್ಯ ನಿಭಾಯಿಸಿದ್ದರು. ರಾಷ್ಟ್ರೀಯ ಆಯ್ಕೆಗಾರರೂ ಆಗಿದ್ದರು. ಮಣಿಂದರ್ ಸಿಂಗ್, ಸುನೀಲ್ ಜೋಶಿ, ಮುರಳಿ ಕಾರ್ತಿಕ್ ಮೊದಲಾದ ಪ್ರತಿಭಾನ್ವಿತ ಸ್ಪಿನ್ನರ್ ಬೇಡಿ ಅವರ ದೇಣಿಗೆ ಎಂಬುದನ್ನು ಮರೆಯುವಂತಿಲ್ಲ.
Advertisement
ಪಂದ್ಯವನ್ನೇ ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟಿದ್ದ ಬೇಡಿ!ಇದು 1978ರ ಪಾಕಿಸ್ಥಾನ ಪ್ರವಾಸದ ವೇಳೆ ನಡೆದ ಘಟನೆ. ಏಕದಿನ ಸರಣಿ 1-1 ಸಮಬಲದಲ್ಲಿತ್ತು. ಸಾಹಿವಾಲ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನ ಹಾದಿಯಲ್ಲಿತ್ತು. ಪಾಕ್ ಸ್ಕೋರ್ 7ಕ್ಕೆ 205 ರನ್. ಭಾರತ 2ಕ್ಕೆ 183 ರನ್ ಗಳಿಸಿ ಗೆಲುವನ್ನು ಸಮೀಪಿಸಿತ್ತು. ಆಗ ಸಫìರಾಜ್ ನವಾಜ್ ಭಾರತದ ಆರಂಭಕಾರ ಅಂಶುಮನ್ ಗಾಯಕ್ವಾಡ್ ಅವರಿಗೆ ಸತತ 4 ಬೌನ್ಸರ್ ಎಸೆದರು. ಪಾಕ್ ಅಂಪಾಯರ್ ಮಿಸುಕಾಡಲಿಲ್ಲ. ಬೇಡಿ ಸಿಟ್ಟು ನೆತ್ತಿಗೇರಿತು. ಕ್ರೀಸ್‌ನಲ್ಲಿದ್ದ ಗಾಯಕ್ವಾಡ್ ಮತ್ತು ವಿಶ್ವನಾಥ್ ಅವರನ್ನು ವಾಪಸ್ ಕರೆಸಿದರು. ಪಂದ್ಯವನ್ನು ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟು ತಮ್ಮ ಪ್ರತಿಭಟನೆಯ ಉಗ್ರರೂಪ ತಾಳಿದ್ದರು ಬಿಷನ್ ಸಿಂಗ್ ಬೇಡಿ!
ಈ ಘಟನೆ ನಡೆದು ನಾಡಿದ್ದು ನ. 3ಕ್ಕೆ ಭರ್ತಿ 45 ವರ್ಷ. ಅಂದಿನ ಈ ವಿದ್ಯಮಾನದ ಬಳಿಕ ಸಾಹಿವಾಲ್‌ನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ!