Advertisement

ಬಿಸರಳ್ಳಿ ನೀರಿನ ಸಮಸ್ಯೆ ಉಲ್ಬಣ

02:04 PM May 18, 2019 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ತಗ್ಗಿಲ್ಲ. ಜಿಲ್ಲಾಡಳಿತ ಮಾತ್ರ ಕೋಟಿ ಕೋಟಿ ಅನುದಾನ ವ್ಯಯಿಸಿ ಲೆಕ್ಕ-ಬಾಕಿ ತೋರಿಸುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ಜನತೆ ಇಂದಿಗೂನೀರಿಗಾಗಿ ಹೊಲ, ಗದ್ದೆ, ಕೆರೆ, ಕಟ್ಟೆಗಳಿಗೆ ಅಲೆದಾಡುವಂತಾಗಿದೆ.

Advertisement

ತಾಲೂಕಿನ ಬಿಸರಳ್ಳಿ ಗ್ರಾಮವು ಕುಡಿಯುವ ನೀರಿನ ಸಮಸ್ಯೆಗೆ ಹೊರಗಾಗಿಲ್ಲ. ಈ ಗ್ರಾಮ ಸಮೀಪದಲ್ಲೇ ತುಂಗಭದ್ರಾ ಡ್ಯಾಮ್‌ ಹಿನ್ನೀರು ಇದ್ದರೂ ಸಹಿತ ನೀರಿನ ಭವಣೆ ನೀಗಿಲ್ಲ. ಕಳೆದ 2-3 ವರ್ಷಗಳಿಂದಲೂ ನೀರಿನ ಸಮಸ್ಯೆಯಿದೆ. ಪ್ರಸಕ್ತ ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಜನತೆಗೆ ಒಂದು ಹೊತ್ತಿನ ಊಟ ಇಲ್ಲವೆಂದರೂ ಸಮಸ್ಯೆಯಾಗದು, ಆದರೆ ನೀರು ಇಲ್ಲವೆಂದರೆ ಬದುಕೇ ದುಸ್ತರವಾಗಲಿದೆ. ಅಲ್ಲದೇ, ಜಿಲ್ಲೆಯಲ್ಲಿ ಪದೇ ಪದೆ ಬರ ಆವರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೊಲ, ಗದ್ದೆಗಳಲ್ಲಿನ ಪಂಪ್‌ಸೆಟ್‌ಗಳು ನೀರಿಲ್ಲದೇ ಒಣಗಿವೆ. ಹೀಗಾಗಿ ಜನರು ನೀರಿಗೆ ಅಲೆದಾಡುವಂತ ಪರಿಸ್ಥಿತಿ ಎದುರಾಗಿದೆ.

ದನಕರುಗಳಿಗೆ ಉಪ್ಪು ನೀರೇ ಗತಿ: ಜನರಿಗೆ ಕುಡಿಯುವ ನೀರಿನ ಸಮಸ್ಯೆ ಒಂದಡೆಯಾದರೆ, ಜಾನುವಾರುಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಗ್ರಾಮದಲ್ಲಿ ಉಪ್ಪು ನೀರು ಪೂರೈಕೆ ಮಾಡುತ್ತಿದ್ದು, ಆ ನೀರನ್ನೇ ದನಕರುಗಳಿಗೆ ಕುಡಿಸಬೇಕಿದೆ. ಇಲ್ಲವೇ ಕೆರೆ ಪಂಪ್‌ಸೆಟ್ ಇರುವ ಸ್ಥಳಕ್ಕೆ ತೆರಳಿ ನೀರು ಕುಡಿಸಿಕೊಂಡು ಬರಬೇಕಿದೆ. ಎಲ್ಲ ದನಗಳನ್ನು ಪಂಪ್‌ಸೆಟ್ ಇರುವ ಸ್ಥಳಕ್ಕೆ ಹೊಡೆದುಕೊಂಡು ಹೋದರೆ ಹೊಲದ ಮಾಲಿಕರ ಕೆಂಗಣ್ಣಿಗೆ ಗುರಿಯಾಗಬೇಕಿದೆ ಎನ್ನುತ್ತಿದ್ದಾರೆ ಇಲ್ಲಿನ ಜನತೆ. ಒಟ್ಟಿನಲ್ಲಿ ಜಿಲ್ಲಾಡಳಿತ ಕುಡಿಯುವ ನೀರಿಗೆ 8 ಕೋಟಿಗೂ ಅಧಿಕ ಅನುದಾನ ಖರ್ಚು ಮಾಡಿದೆ. ಆದರೆ ಜನರಿಗೆ ನೀರಿನ ಭವಣೆ ತಪ್ಪಿಲ್ಲ. ಹೊಲ, ಗದ್ದೆ, ಕೆರೆ, ಕಟ್ಟೆಗಳಿಗೆ ಇಂದಿಗೂ ಆಸರೆಯಾಗುತ್ತಿವೆ. ಜಿಲ್ಲಾಡಳಿತ ಇನ್ನಾದರೂ ಇಂತ ಸಮಸ್ಯಾತ್ಮಕ ಹಳ್ಳಿಗಳ ಬಗ್ಗೆ ಕಣ್ತೆರೆದು ನೋಡಬೇಕಿದೆ.

ಈ ಗ್ರಾಮಕ್ಕೆ ನೀರು ಪೂರೈಸುವ ಉದ್ದೇಶದಿಂದ ಹಿರೇ ಸಿಂದೋಗಿ ಸಮೀಪದ ಹಳ್ಳದಲ್ಲಿ ಬೋರ್‌ವೆಲ್ ಕೊರೆಯಿಸಲಾಗಿದೆ. ಆದರೆ ಇದು ತಿಂಗಳಿಗೆ 2-3 ಬಾರಿ ಕೆಟ್ಟಿರುತ್ತದೆ. ಒಂದೊಮ್ಮೆ ಪೈಪ್‌ ಒಡೆದಿದ್ದರೆ, ಮತ್ತೂಮ್ಮೆ ಮೋಟರ್‌ ರಿಪೇರಿ ಬಂದಿರುತ್ತದೆ. ಹೀಗಾಗಿ ಗ್ರಾಮಕ್ಕೆ ನೀರು ಪೂರೈಕೆಯಾಗಲ್ಲ. ಕನಿಷ್ಟ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಾರೆ. ನೀರಿಗಾಗಿ ನಾವು ಮನೆಯಲ್ಲಿ ಒಬ್ಬರು ಕಾಯಂ ಇರಬೇಕು. ಇಲ್ಲವೆಂದರೆ ನಾವು ಜೀವನ ನಡೆಸುವುದು ಕಷ್ಟ ಎಂದೆನ್ನುತ್ತಾರೆ ಇಲ್ಲಿನ ಜನತೆ. ಗ್ರಾಮದ ಸಮೀಪದ ಶಿವು ಮೋರನಾಳ ಎಂಬುವರು ತಮ್ಮ ಇಟ್ಟಿಗೆ ಉದ್ಯಮಕ್ಕೆ ಬಳಕೆ ಮಾಡುವ ಬೋರ್‌ವೆಲ್ ನೀರನ್ನೇ ಜನರಿಗೆ ಪೂರೈಕೆ ಮಾಡುತ್ತಿದ್ದಾರೆ. ವಿದ್ಯುತ್‌ ಬಿಲ್ ಸಹಿತ ಅವರೇ ಕಟ್ಟಿಕೊಳ್ಳುತ್ತಿದ್ದಾರೆ. ಅವರು ಗ್ರಾಮಕ್ಕೆ ಆಸರೆಯಾಗಿದ್ದಾರೆ ಎನ್ನುವ ಮಾತನ್ನಾಡುತ್ತಿದ್ದಾರೆ ಇಲ್ಲಿನ ಜನತೆ.

.ದತ್ತು ಕಮ್ಮಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next