Advertisement
ಚಿದಾನಂದ ಮೂರ್ತಿಯವರು ಹುಟ್ಟಿದ್ದು ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ 1931ರ ಮೇ 10ರಂದು. ಅವರ ತಂದೆ ಕೊಟ್ಟೂರಯ್ಯ ಹಾಗೂ ತಾಯಿ ಪಾರ್ವತಮ್ಮ. ತಂದೆ ಶಿಕ್ಷಕರಾಗಿದ್ದವರು. ಮನೆಯೇ ಮೊದಲ ಪಾಠ ಶಾಲೆಯಾಗಿತ್ತು. ಬಾಲ್ಯದ ಶಿಕ್ಷಣ ಹಿರೇಕೋಗಲೂರು ಹಾಗೂ ಸಂತೆಬೆನ್ನೂರಿನಲ್ಲಿ ಪೂರೈಸಿದ ಅವರು ನಂತರದ ದಿನಗಳಲ್ಲಿ ದಾವಣಗೆರೆಯ ಜಯದೇವ ಹಾಸ್ಟೆಲ್ ನಲ್ಲಿದ್ದುಕೊಂಡು ತಮ್ಮ ವಿದ್ಯಾಭ್ಯಾಸ ನಡೆಸಿದ್ದರು. ಮುಂದೆ ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು.ಸತತ 40 ವರ್ಷಗಳಿಂದಲೂ ಕನ್ನಡಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರು.
ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡಿಗರನ್ನು ಸಂಘಟಿತರನ್ನಾಗಿಸುವ ಕೆಲಸ ಮಾಡಿದವರು. ಇತಿಹಾಸ ಸಂಶೋಧನೆಯ ಪುಸ್ತಕಗಳನ್ನು ಬರೆದಿರುವ ಚಿದಾನಂದ ಮೂರ್ತಿಯವರದು ಬದ್ದತೆ, ಚಿಂತನೆಯ ವ್ಯಕ್ತಿತ್ವ. ಅವರ ಹುಟ್ಟೂರಾದ ಹಿರೇಕೋಗಲೂರಿನಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನವಿದೆ. ಸುಮಾರು 4 ಲಕ್ಷ ರೂಗಳನ್ನು ಬ್ಯಾಂಕಿನಲ್ಲಿರಿಸಿ ಅದನ್ನು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದರು. ಇದಲ್ಲದೆ ಹಿರೇಕೋಗಲೂರಿನಲ್ಲಿ ಚಿಮೂ ಹೆಸರಿನಲ್ಲಿ ಸಾಂಸ್ಕೃತಿಕ ಭವನವಿದ್ದು ಅನೇಕ ಸಾಹಿತ್ಯಪರ ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಹಿರೇಕೋಗಲೂರು ಗ್ರಾಮದ ಅವರ ಒಡನಾಡಿಗಳು ಹಾಗೂ ಹಿರಿಯ ಪತ್ರಕರ್ತ ಚಿಕ್ಕೋಳ್ ಈಶ್ವರಪ್ಪ ಅವರ ಬಾಲ್ಯದ ದಿನಗಳು ಹಾಗೂ ಗ್ರಾಮದೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ. ಅವರ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ನಡೆಸಬೇಕೆಂದು ಕುಟುಂಬದವರಲ್ಲಿ ಮನವಿ ಮಾಡಿದ್ದಾರೆ. ಗ್ರಾಮಸ್ಥರು ಸಹ ಚಿದಾನಂದ ಮೂರ್ತಿಯವರ ಆತ್ಮಕ್ಕೆ ಶಾಂತಿಕೋರಿ ಅವರಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಹುಟ್ಟಿಬೆಳೆದ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಸಬೇಕು ಹಾಗೂ ಗ್ರಾಮದಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Related Articles
Advertisement