Advertisement

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

02:29 AM May 21, 2022 | Team Udayavani |

ಕಾರ್ಕಳ: ನಾಗರಿಕರಿಗೆ ಗ್ರಾ.ಪಂ. ಕಚೇರಿಗಳಲ್ಲೇ ಜನನ -ಮರಣ ಪ್ರಮಾಣಪತ್ರ ಸಿಗುವಂತೆ ಮಾಡುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನವಾಗದ ಪರಿಣಾಮ ಈ ದಾಖಲೆಗಾಗಿ ಜನರು ಕಚೇರಿಗಳಿಗೆ ಅಲೆದಾಡುವ ಸ್ಥಿತಿ ಮುಂದುವರಿದಿದೆ.

Advertisement

ರಾಜ್ಯ ಸರಕಾರ ಜನನ, ಮರಣ ಪ್ರಮಾಣಪತ್ರವನ್ನು ಪಿಡಿಒಗಳ ಮೂಲಕ ಗ್ರಾ.ಪಂ. ಮಟ್ಟದಲ್ಲಿ ವಿತರಿಸಲು ಆದೇಶಿಸಿತ್ತು. ಆದೇಶವಾಗಿ ವರ್ಷ ಸಮೀಪಿಸಿದ್ದರೂ ಗ್ರಾ.ಪಂ.ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇವು ಗಳ ವಿತರಣೆ ಸಾಧ್ಯವಾಗಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆಯು ಗ್ರಾಮೀಣ ಭಾಗದಲ್ಲಿ ನಾಗರಿಕ ನೋಂದಣಿ ಯನ್ನು ಬಲಪಡಿಸಿ, ಶತ ಪ್ರತಿಶತ ಮರಣ, ಜನನ ನೋಂದಣಿಯನ್ನು ದಾಖಲಿಸಲು ಅನುವಾಗುವಂತೆ
ನೋಂದಣಾಧಿಕಾರಿಯಾಗಿ ಪಿಡಿಒ ಗಳನ್ನು ನೇಮಿಸಿತ್ತು.

ಆದೇಶ ಬದಲಾವಣೆ
ಇಲಾಖೆಯ ಪ್ರಾರಂಭದ ಆದೇಶ ಪ್ರಕಾರ ಪ್ರಮಾಣಪತ್ರ ವಿತರಿಸಲು ಪಿಡಿಒಗಳನ್ನು ಮಾತ್ರ ನೇಮಿಸ ಲಾಗಿತ್ತು. ಆದರೆ ಗ್ರಾಮ ಲೆಕ್ಕಿಗರು ಈ ಅಧಿಕಾರ ಹಸ್ತಾಂತರಿಸಲು ಹಿಂದೇಟು ಹಾಕಿದ್ದರಿಂದ ಸರಕಾರ 2022ರ ಜ. 7 ಮತ್ತು ಫೆ. 22ರಂದು ಮರು ಆದೇಶ ಹೊರಡಿಸಿದೆ.

ಅದರಲ್ಲಿ ನೋಂದಣಿ ಅಧಿಕಾರಿಯಾಗಿ ಪಿಡಿಒ ಮತ್ತು ಉಪ ನೋಂದಣಿ ಅಧಿಕಾರಿಯಾಗಿ ಗ್ರಾಮಲೆಕ್ಕಿಗರಿಗೆ ಜವಾಬ್ದಾರಿ ಹಂಚಿಕೆ ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ಆದರೂ ಪಿಡಿಒಗಳು ಜನನ-ಮರಣ ನೋಂದಣಾಧಿಕಾರಿಯಾಗಿ ಕಾರ್ಯಾ ಚರಿಸುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

Advertisement

ಈಗ ಸಚಿವರೂ ಇಲ್ಲ!
ಗ್ರಾ. ಮತ್ತು ಪಂ. ರಾಜ್‌ ಖಾತೆ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರ ರಾಜೀನಾಮೆಯ ಬಳಿಕ ಈ ಖಾತೆಗೆ ಹೊಸ ಸಚಿವರ ನೇಮಕವಾಗಿಲ್ಲ. ಖಾತೆ ಸದ್ಯ ಮುಖ್ಯಮಂತ್ರಿಗಳ ನಿರ್ವಹಣೆಯಲ್ಲಿದೆ. ಜನನ -ಮರಣ ಪ್ರಮಾಣ ಪತ್ರವನ್ನು ಗ್ರಾ.ಪಂ.ಗಳಲ್ಲಿ ವಿತರಿಸುವ ಸಂಬಂಧ ಮುಖ್ಯಮಂತ್ರಿಗಳೇ ಗಮನಹರಿಸಿ ಪರಿಹಾರ ಕಂಡು ಕೊಳ್ಳಬೇಕಿದೆ.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗಳಿಗೆ ಜನನ ಮತ್ತು ಮರಣ ನೋಂದಣಿ ಪತ್ರ ವಿತರಿಸುವ ಕುರಿತು ಈ ವರೆಗೂ ತರಬೇತಿ ಸಿಕ್ಕಿಲ್ಲ. ಪ್ರಮಾಣಪತ್ರ ವಿತರಿಸಲು ಯಾವುದೇ ಅಭ್ಯಂತರವಿಲ್ಲ. ಕಾರ್ಯಾದೇಶ ದೊರೆತಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ರಾಜ್ಯ ಪಿಡಿಒ ಸಂಘದ ಅಧ್ಯಕ್ಷ ಬೋರಯ್ಯ ಅವರು ಹೇಳಿದ್ದಾರೆ.

ಏನು ಕಾರಣ?
ಸರಕಾರ ಹೊರಡಿಸಿದ ಆದೇಶ ಪೂರ್ಣಪ್ರಮಾಣದಲ್ಲಿ ಕಾರ್ಯಗತವಾಗದೆ ಇರುವುದು ಇದಕ್ಕೆ ಕಾರಣ. ಜನನ-ಮರಣ ಪತ್ರ ವಿತರಣೆಗೆ ಸಂಬಂಧಿಸಿದ ಸಾಫ್ಟ್ ವೇರ್‌ನ ತಾಂತ್ರಿಕ ತೊಂದರೆ ಗಳೂ ಕಾರಣ ಎಂದು ಪಿಡಿಒಗಳು ಹೇಳುತ್ತಾರೆ. ಈ ಬಗ್ಗೆ ಪಿಡಿಒಗಳಿಗೆ ತರಬೇತಿಯನ್ನೂ ನೀಡಲಾಗಿಲ್ಲ. ಜನನ-ಮರಣ ಪ್ರಮಾಣ ಪತ್ರವನ್ನು ಆಯಾ ಆಸ್ಪತ್ರೆ, ಪಾಲಿಕೆ, ನಗರ ಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಮಾತ್ರವೇ ನೀಡಲಾಗುತ್ತಿತ್ತು. ಅನಂತರ ಗ್ರಾ.ಪಂ.ಗಳಲ್ಲಿ ಪಿಡಿಒ ಅವರನ್ನು ಜನನ- ಮರಣ ಪ್ರಮಾಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇ-ತಂತ್ರಾಂಶದಲ್ಲಿ ಪಿಡಿಒ ಅವರ ಡಿಜಿಟಲ್‌ ಸಹಿಯ ಮೂಲಕ ಈ ದಾಖಲೆ ವಿತರಿಸುವಂತೆ ಆದೇಶ ಇದೆ.

ಗ್ರಾ.ಪಂ. ಕಚೇರಿಯಲ್ಲಿ ಪ್ರಮಾಣಪತ್ರ ವಿತರಣೆಗೆಸಾಫ್ಟ್ವೇರ್‌ ಅಪ್‌ಡೇಟ್‌ಗೊಳಿಸುವ ತಾಂತ್ರಿಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರ ಅದು ಸರಿ ಹೋಗಲಿದೆ.
-ಡಾ| ಕುಮಾರ್‌
ಸಿಇಒ ದ. ಕನ್ನಡ ಜಿ.ಪಂ.

ಪಿಡಿಒಗಳಿಗೆ ಬಳಕೆ ಐಡಿ,ಪಾಸ್‌ವರ್ಡ್‌ ನೀಡಿಲ್ಲ. ಅವರಿಗೆ ತರಬೇತಿಯೂ ಆಗಿಲ್ಲ. ಇದಕ್ಕೆ 2-3 ತಿಂಗಳು ಬೇಕು. ಬಳಿಕ ಗ್ರಾ.ಪಂ.ಗಳಲ್ಲೇ ಜನನ- ಮರಣ ಪ್ರಮಾಣಪತ್ರ ವಿತರಣೆ ಆಗಲಿದೆ.
-ಎಚ್‌.ಕೆ. ಪ್ರಸನ್ನ,
ಸಿಇಒ, ಉಡುಪಿ ಜಿ.ಪಂ

- ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next