ಬಾಳೆಹೊನ್ನೂರು: ಕೇಂದ್ರ ಸರಕಾರವು ಸ್ವತಂತ್ರ ಸೇನಾನಿ ಬಿರ್ಸಾ ಮುಂಡಾ ಅವರ ಜಯಂತಿಯನ್ನು ರಜಾ ದಿನವೆಂದು ಘೋಷಿಸಬೇಕು ಹಾಗೂ ಆದಿವಾಸಿಗಳ ಅಭಿವೃದ್ಧಿಗೆ ಕೆಲಸ ಮಾಡುವಂತಾಗಬೇಕು ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎನ್. ವಿಠಲ್ ತಿಳಿಸಿದರು.
ಅವರು ಚಿಕ್ಕಮಗಳುರು ಜಿಲ್ಲಾ ಮತ್ತು ತಾಲೂಕು ಬುಡಕಟ್ಟು ಕೃಷಿಕರ ಸಂಘವು ಸಮೀಪದ ಖಾಂಡ್ಯ ಹೋಬಳಿ ವ್ಯಾಪ್ತಿಯ ಬಸರವಳ್ಳಿ ಗಿರಿಜನ ಹಾಡಿಯಲ್ಲಿ 147ನೇ ಬಿರ್ಸಾಮುಂಡಾ ಜಯಂತಿ ಆಚರಣೆ ಹಾಗೂ ಗಿಡನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
19ನೇ ಶತಮಾನದಲ್ಲಿ ಸಂಪದ್ಭರಿತ ಭಾರತವನ್ನು ಲೂಟಿ ಮಾಡಿ ಹಕ್ಕು ಸ್ಥಾಪಿಸಲು ಇಚ್ಚಿಸುತ್ತಿದ್ದು ಕಾಡಿನಲ್ಲಿದ್ದ ಆದಿವಾಸಿಗಳನ್ನು ಹೊರದಬ್ಬುವ ಹಾಗೂ ಕಾಡು ಉತ್ಪನ್ನಗಳನ್ನು ಸಂಗ್ರಹ ಮಾಡಬಾರದೆಂದು ಕಾನೂನು ರಚಿಸಿದ್ದರು, ಈ ಕಾನೂನನ್ನು ಪ್ರತಿಭಟಿಸಿ ಬ್ರಿಟೀಷರ ವಿರುದ್ಧ ಸಮರ ಸಾರಿದ್ದು ಈ ತರ ಜನಪ್ರಿಯತೆ ಹತ್ತಿಕ್ಕಲು ಬಿರ್ಸಾಮುಂಡರನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಿಡುಗಡೆಗೊಂಡ ನಂತರ ಕ್ರಿಶ್ಚಿಯನ್ ಧರ್ಮ ಪ್ರಚಾರಕರು ತಮ್ಮ ಧರ್ಮದ ಶ್ರೇಷ್ಠತೆ ಕೊಂಡಾಡುತ್ತಲೇ ಆದಿವಾಸಿಗಳ ಸಂಸ್ಕೃತಿ ಹಿಯಾಳಿಸುವವರ ವಿರುದ್ಧ ಆಕ್ರೋಶಗೊಂಡು ಆದಿವಾಸಿಗಳು ಬ್ರಿಟೀಷರ ವಿರುದ್ಧ ದಂಗೆ ಏಳಲಾರಂಭಿಸಿದರು.
ಆದಿವಾಸಿಗಳಲ್ಲಿ ಸ್ವಾಬಿಮಾನ ಮೂಡುವಂತೆ ಪ್ರಯತ್ನ ಮಾಡಿದ್ದು ಅದರಲ್ಲಿ ಯಶ್ವಸ್ವಿಯಾಗಿ ಉಳುವವರೇ ಭೂಮಿಯ ಒಡೆಯನಾಗಬೇಕೆಂಬ ಮಹದಾಸೆ ಹೊಂದಿದ್ದ ವ್ಯಕ್ತಿಯಾಗಿದ್ದ ಹಾಗೂ ಮತಾಂತರದ ವಿರುದ್ಧ ಸಿಡಿದೆದ್ದ ವೀರ ಸ್ವಾತಂತ್ರ್ಯ ಸೇನಾನಿಯಾಗಿದ್ದರು ಎಂದು ತಿಳಿಸಿದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
2006ರಲ್ಲಿ ಜಾರಿಗೊಳಸಿದ್ದ ಅರಣ್ಯ ಹಕ್ಕು ಜಾರಿಗೊಂಡಿದ್ದು ಆ ಪ್ರಕಾರ ಆದಿವಾಸಿಗಳಿಗೆ ಜಮೀನು ವಿತರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಆದಿವಾಸಿ ರಾಷ್ಟ್ರೀಯ ಆಂದೋಲನ ಸಂಚಾಲಕಿ ಎನ್. ಜ್ಯೋತಿ ಪ್ರಾಸ್ತಾವಿಕ ಮಾತನಾಡಿದರು.
ಬಸರವಳ್ಳಿ ಸುರೇಶ್ ಕುಸುಮಾಕರ್ ಸ್ವಾಗತಿಸಿದರು. ಶೃಂಗೇರಿ ತಾಲೂಕಿನ ಮಂಜುನಾಥ, ಸುಶೀಲ, ಪಟ್ಟಯ್ಯ, ಅನ್ನಪೂರ್ಣ, ಹುಯಿಗೆರೆ ಸುಂದರ, ಎನ್. ಆರ್. ಪುರ ಕೊಪ್ಪ. ಮೂಡಿಗೆರೆ, ಶೃಂಗೇರಿ ತಾಲೂಕಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.