Advertisement

ಏರ್‌ ಶೋಗೆ ಉಕ್ಕಿನ ಹಕ್ಕಿಗಳ ಭರ್ಜರಿ ತಾಲೀಮು

11:44 AM Feb 10, 2017 | |

ಬೆಂಗಳೂರು: ವಿಶ್ವ ವಿಖ್ಯಾತ “ಏರೋ ಇಂಡಿಯಾ’ ಏರ್‌ಶೋಗೆ ಕ್ಷಣಗಣನೆ ಶುರುವಾಗಿದ್ದು, ನಗರದ ಯಲಹಂಕ ವಾಯುನೆಲೆಯಲ್ಲಿ ಇದೀಗ ಉಕ್ಕಿನ ಹಕ್ಕಿಗಳ ಹಾರಾಟದ ತಾಲೀಮು ನಡೆಯುತ್ತಿದೆ. ಯಲಹಂಕ ವಾಯುನೆಲೆಯಲ್ಲಿ ಫೆ.14ರಿಂದ 18ರವರೆಗೆ ನಡೆಯಲಿರುವ “ಏರೋ ಇಂಡಿಯಾ’ ಏರ್‌ಶೋನಲ್ಲಿ ದೇಶ-ವಿದೇಶಗಳ ಪ್ರಮುಖ ವೈಮಾನಿಕ ತಂಡಗಳು ಬಾನಂಗಳದಲ್ಲಿ ಹಾರಾಟದ ಕೌಶಲ ಪ್ರದರ್ಶಿಸಲಿವೆ. 

Advertisement

ಫೆ.14ರಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರು ಏರ್‌ಶೋಗೆ ಚಾಲನೆ ನೀಡಲಿದ್ದಾರೆ. ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅಶೋಕ್‌ ಕುಮಾರ್‌ ಗುಪ್ತ, ವಾಯುಸೇನೆ ಮುಖ್ಯಸ್ಥ ಬೀರೇಂದ್ರ ಸಿಂಗ್‌ ಧನೋವಾ, ಕೌಶಲ್ಯ ಅಭಿವೃದ್ಧಿ ಇಲಾಖೆ ರಾಜ್ಯ ಸಚಿವ ರಾಜೀವ್‌ ಪ್ರತಾಪ್‌ ರೂಡಿ, ವಿಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್‌. ಚೌಧರಿ, ಆಂಧ್ರ ಪ್ರದೇಶ ಹಣಕಾಸು ಸಚಿವ ವೈ. ರಾಮಕೃಷ್ಣುಡು, ನಾಗರಿಕ ವಿಮಾನಯಾನ ಖಾತೆ ಸಚಿವ ಪಿ. ಅಶೋಕ್‌ ಗಜಪತಿರಾಜು ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದಾರೆ. 

ಈ ಬಾರಿಯ ಏರ್‌ಶೋದಲ್ಲಿಯೂ ಸುಮಾರು 70ಕ್ಕೂ ಅಧಿಕ ವಿಭಿನ್ನ ಮಾದರಿ ಯುದ್ಧ ವಿಮಾನಗಳು ಬಾನಂಗಳದಲ್ಲಿ ಸಾಮರ್ಥ್ಯ ಪ್ರದರ್ಶಿಸಲಿವೆ. ಸ್ವದೇಶಿ ನಿರ್ಮಿತ ಸಾರಂಗ್‌ ಹೆಲಿಕಾಪ್ಟರ್‌, ತೇಜಸ್‌ನಂಥ ಯುದ್ಧ ವಿಮಾನಗಳ ಹಾರಾಟ ಈ ಬಾರಿಯ ಏರ್‌ಶೋದ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ, ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾದಂಥ ವಿಶ್ವದ ಪ್ರಬಲ ದೇಶಗಳ ಯುದ್ಧ ವಿಮಾನಗಳು ಕೂಡ ಶೋದಲ್ಲಿ ತಮ್ಮ ಪರಾಕ್ರಮ ತೋರಿಸಲಿವೆ. ಆ ಮೂಲಕ, ಏರೋ ಇಂಡಿಯಾದ 11ನೇ ಆವೃತ್ತಿಯ ಈ ಏರ್‌ಶೋ ಯಶಸ್ವಿಗೊಳಿಸುವುದಕ್ಕೆ ಎಲ್ಲ ರೀತಿಯ ಪೂರ್ವ ತಯಾರಿ ನಡೆಸಲಾಗುತ್ತಿದೆ.

ನಿಲ್ದಾಣ  ಪೂರ್ಣ  ಸ್ಥಗಿತ: ಏರ್‌ಶೋ ಪ್ರಯುಕ್ತ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಮುಚ್ಚಲಾಗಿದ್ದು, ನಿಗದಿತ ಅವಧಿಗೆ ಈ ವಿಮಾನದಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣ ರದ್ದುಪಡಿಸಲಾಗಿದೆ.  

ಏರ್‌ಶೋನಲ್ಲಿ ಟಾಟಾದ 8 ಕಂಪನಿಗಳು: ಏರ್‌ಶೋನಲ್ಲಿ ಟಾಟಾ ಕಂಪೆನಿಗಳ ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಎಂಟು ಕಂಪೆನಿಗಳು ಭಾಗವಹಿಸಲಿವೆ. ಟಾಟಾ ಅಡ್ವಾನ್ಸ್‌ ಸಿಸ್ಟಮ್ಸ್‌ ಲಿ., ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌, ಟಾಟಾ ಅಡ್ವಾನ್ಸ್‌$x ಮಟಿರಿಯಲ್ಸ್‌ ಲಿ., ಟಾಟಾ ಮೋಟಾರ್ ಲಿ., ಟೈಟನ್‌ ಕಂಪೆನಿ ಲಿ., ಟಾಟಾ ಸ್ಟೀಲ್‌ (ಸ್ಪೆಷಾಲಿಟಿ ಸ್ಟೀಲ್‌ ಬ್ಯುಸಿನೆಸ್‌ ಇನ್‌ ಯೂರೋಪ್‌), ಟಿಎಎಲ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಸಲೂಷನ್ಸ್‌ ಲಿ., ಮತ್ತು ಟಾಟಾ ಪವರ್‌ ಸ್ಟ್ರಾಟೆಜಿಕ್‌ ಎಂಜಿನಿಯರಿಂಗ್‌ ಡಿವಿಜನ್‌ ಕಂಪೆನಿಗಳು ಏರೋ ಇಂಡಿಯಾ ಶೋದಲ್ಲಿ ಭಾಗವಹಿಸಲಿವೆ. 

Advertisement

ಇನ್‌ಟೆಕ್‌ನ ಸ್ವದೇಶಿ ಎಂಜಿನ್‌ ಪ್ರದರ್ಶನ   
ಬೆಂಗಳೂರು: ದೇಶದ ಅತಿದೊಡ್ಡ ಲೋಹದ 3ಡಿ ಪ್ರಿಂಟಿಂಗ್‌ ಪೂರೈಕೆದಾರ ಇನ್‌ಟೆಕ್‌ ಡಿಎಂಎಲ್‌ಎಸ್‌ ಪ್ರೈ.ಲಿ., ಸ್ವದೇಶಿ ನಿರ್ಮಿತ “ಜೆಟ್‌ ಎಂಜಿನ್‌’ ಅನ್ನು ಅಭಿವೃದ್ಧಿಪಡಿಸಿದೆ. ಮಾನವರಹಿತ ಮತ್ತು ರಿಮೋಟ್‌ ಕಂಟ್ರೋಲ್‌ ಮೂಲಕ ಎಂಜೆಇ-20 ಹಾಗೂ ಎಸ್‌ಜೆಇ-350 ಸರಣಿಯ ಎರಡು ಜೆಟ್‌ ಎಂಜಿನ್‌ಗಳನ್ನು ನಿಯಂತ್ರಿಸಬಹುದಾಗಿದೆ. ವೈಮಾನಿಕ ಕ್ಷೇತ್ರದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಂಪೆನಿಯೊಂದು ಜೆಟ್‌ ಎಂಜಿನ್‌ ನಿರ್ಮಿಸಿದೆ. ಫೆ. 14ರ ಏರ್‌ ಶೋನಲ್ಲಿ  ಎಂಜಿನ್‌’ಗಳು ಪ್ರದರ್ಶನಗೊಳ್ಳಲಿವೆ. 

ಆನ್‌ಲೈನಲ್ಲಿ ಟಿಕೆಟ್‌ ಲಭ್ಯ
ಈ ಬಾರಿ ಆನ್‌ಲೈನ್‌ ಮೂಲಕ ಟಿಕೆಟ್‌ ಖರೀದಿಸಬಹುದು. ಬಿಸಿನೆಸ್‌ ಟಿಕೆಟ್‌ಗೆ 2500 ರೂ., ಸಾಮಾನ್ಯ ಟಿಕೆಟ್‌ಗೆ 1500 ರೂ., ಸಾರ್ವಜನಿಕರ ಪ್ರವೇಶ ಟಿಕೆಟ್‌ಗೆ 600 ರೂ. ನಿಗದಿಪಡಿಸಲಾಗಿದೆ. ಏರ್‌ಶೋಗೆ ತೆರಳಬಯಸುವವರು ಮೊದಲು ಏರೊ ಇಂಡಿಯಾ ವೆಬ್‌ಸೈಟ್‌ನ ವಿಜಿಟರ್‌ ಝೋನ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಪ್ರತ್ಯೇಕ ಬಾರ್‌ಕೋಡ್‌ ಪಡೆದುಕೊಳ್ಳಬೇಕು. ನಂತರ ಬಾರ್‌ಕೋಡ್‌ ಜತೆಗೆ ಗುರುತಿನ ಚೀಟಿ ದಾಖಲೆಯೊಂದಿಗೆ ಏರ್‌ಶೋ ಪ್ರವೇಶಕ್ಕೆ ಟಿಕೆಟ್‌ ಪಡೆದುಕೊಳ್ಳಬೇಕು.

5 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್‌ ಇರುವುದಿಲ್ಲ. ಕೋರಮಂಗಲ(4ನೇ ಬ್ಲಾಕ್‌ನ 100 ಅಡಿ ರಸ್ತೆ), ಜೆಪಿ ನಗರ(ಮೊದಲ ಹಂತದ ಆರ್‌ವಿ ವೈದ್ಯ ಕಾಲೇಜು ಬಳಿ), ಮಲ್ಲೇಶ್ವರ(ಸಂಪಿಗೆ ರಸ್ತೆ), ವೈಟ್‌ಫೀಲ್ಡ್‌ (ವೈಟ್‌ಫೀಲ್ಡ್‌ ಮುಖ್ಯರಸ್ತೆ) ಹಾಗೂ ಎಂಜಿ ರಸ್ತೆ(ಬಾರ್ಟನ್‌ ಸೆಂಟರ್‌)ಯಲ್ಲಿರುವ ಕೆಫೆ ಕಾಫಿ ಡೇ ಮಳಿಗೆಗಳಲ್ಲಿಯೂ ಏರ್‌ಶೋ ಟಿಕೆಟ್‌ಗಳನ್ನು ಪಡೆದುಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next