Advertisement

ಈ ಮನೆ ಮಂದಿ ಕರೆದರೆ ಬರುತ್ತವೆ ರಾಶಿ ರಾಶಿ ಪಕ್ಷಿಗಳು!

02:50 AM Nov 21, 2018 | Karthik A |

ಉಡುಪಿ: ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಲು ಎಲ್ಲರಿಗೂ ಬರುವುದಿಲ್ಲ. ಈ ವಿಚಾರದಲ್ಲಿ ಉಡುಪಿ ತೆಂಕಪೇಟೆಯ ಹೊಟೇಲ್‌ ರಾಮಭವನದ ಮಾಲಕ, ಸಮಾಜ ಸೇವಕ ವಿಶ್ವನಾಥ ಶೆಣೈ, ಅವರ ಪತ್ನಿ ಪ್ರಭಾ ವಿ. ಶೆಣೈ, ಸಹೋದರ ಘನಶ್ಯಾಮ ಶೆಣೈ ಅವರು ಭಿನ್ನ. ನಿತ್ಯ ಮನೆಯ ಮಹಡಿಗೆ ಬರುವ ನೂರಾರು ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಪಕ್ಷಿ ಪ್ರೀತಿಗೆ ತೋರಿಸುತ್ತಿದ್ದಾರೆ.

Advertisement

ಬೆಳಗ್ಗೆ 8ಕ್ಕೆ ಹಾಜರು
ಪ್ರತಿದಿನ ಬೆಳಗ್ಗೆ 8ರ ಸುಮಾರಿಗೆ ಸರಿಯಾಗಿ ಅವರ ಮನೆಯ ಮಹಡಿಗೆ 50ರಿಂದ 100 ಪಾರಿವಾಳಗಳು, 10ರಿಂದ 20 ಕಾಗೆಗಳು, ಹತ್ತಾರು ಅಳಿಲುಗಳು ಬಂದು ಆಹಾರವನ್ನು ಸ್ವೀಕರಿಸಿ, ಕೃತಜ್ಞತಾ ಭಾವವೋ ಎಂಬಂತೆ ಅವರ ಕೈ ಮೇಲೆ ಕುಳಿತು ಹಾರಿ ಹೋಗುತ್ತವೆ. ಕಾಗೆ, ಪಾರಿವಾಳಗಳು ಮಹಡಿಯ ಒಂದು ಮೂಲೆಯಲ್ಲಿ ಬಂದರೆ, ಅಳಿಲುಗಳು ಬೇರೆ ಸ್ಥಳದಲ್ಲಿ ಬಂದು ಆಹಾರ ತಿಂದು ಹೋಗುತ್ತವೆ.


ಪಾರಿವಾಳಗಳಿಗೆ ಗೋಧಿ, ಜೋಳ ಹಾಕಿದರೆ, ಕಾಗೆ ಮತ್ತು ಅಳಿಲುಗಳಿಗೆ ಗಳಿಗೆ ಕರಿದ ಆಹಾರ, ಮನೆಯ ನಿತ್ಯದ ಆಹಾರಗಳಾದ ಚಪಾತಿ, ದೋಸೆ, ಇಡ್ಲಿಗಳನ್ನೇ ಹಾಕುತ್ತಾರೆ. 5 ಮಂದಿ ವಾಸವಿರುವ ಮನೆಯಲ್ಲಿ ಬೆಳಗ್ಗೆ ಪಕ್ಷಿಗಳಿಗೆ ದವಸ ಧಾನ್ಯ, ಕಾಳು, ನೀರು, ತಿಂಡಿ ತಿನಿಸುಗಳನ್ನು ನೀಡಿದ ಬಳಿಕವೇ ಅವರು ಉಪಹಾರ ಸೇವಿಸುವುದು ಪರಿಪಾಠ. ಜತೆಗೆ ಪಕ್ಷಿಗಳಿಗೆ ಹಾಕಲು ತುಸು ಹೆಚ್ಚುವರಿ ಆಹಾರ ತಯಾರಿಸುತ್ತಾರೆ. ಪಾರಿವಾಳಗ‌ಳಿಗಾಗಿ ಗೋಧಿ, ಜೋಳ ಖರೀದಿಸಿ ತಂದಿಟ್ಟುಕೊಳ್ಳುತ್ತಾರೆ.

ಆಹಾರ ಪೂರೈಸಲು ಪ್ರೇರಣೆ
ಶೆಣೈ ಅವರ ಮನೆಯ ಬಳಿಯ ನಾಗಬನದ ಬಳಿಯಿರುವ ಮರದಲ್ಲಿ ಸಾಕಷ್ಟು ಹಣ್ಣು ಬೆಳೆಯುತ್ತಿತ್ತು. ಅದನ್ನು ತಿನ್ನಲು ಹಿಂದೆ ಈ ನೂರಾರು ಪಕ್ಷಿಗಳು ಸದಾ ಬರುತ್ತಿದ್ದವು. ಮರ ಕಡಿದ ಕಾರಣ ಆಹಾರವಿಲ್ಲದೆ ಪಕ್ಷಿಗಳು ಪಡುವ ಕಷ್ಟ ಗಮನಿಸಿ ತಾವೇ ಆಹಾರ ನೀಡಲು ನಿರ್ಧರಿಸಿದರು. ಪಕ್ಷಿಗಳು ನಿರ್ಭೀತಿಯಿಂದ ಬಂದು ಆಹಾರ ಸ್ವೀಕರಿಸಿ ತೆರಳುತ್ತವೆ. ಮತ್ತೆ ಪುನಃ ಬೆಳಗ್ಗೆ 8ಕ್ಕೆ ಹಾಜರಾಗುತ್ತವೆ. ಮಧ್ಯಾಹ್ನ, ಸಂಜೆಯ ಹೊತ್ತಿಗೂ ಕೆಲವು ಪಕ್ಷಿಗಳು ಮಾತ್ರ ಬರುತ್ತವೆ. ಬೇರೆ ಮಹಡಿಯಲ್ಲಿ ಕುಳಿತು ಮನೆಯವರು ಹೊರಗೆ ಬರುತ್ತಾರೆಯೇ ಪಕ್ಷಿಗಳು ವೀಕ್ಷಿಸುವುದೂ ಉಂಟು ಎಂದು ಶೆಣೈ ಅವರು ಹೇಳುತ್ತಾರೆ.

ಮನಸ್ಸಿಗೆ ತೃಪ್ತಿ 
ನಮಗೆ ಹಿಂದಿನಿಂದಲೂ ಪ್ರಾಣಿ, ಪಕ್ಷಿಗಳೆಂದರೆ ಅದೇನೋ ಪ್ರೀತಿ, ವಾತ್ಸಲ್ಯ. ಹಲವಾರು ವರ್ಷಗಳಿಂದ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದೇವೆ. ಆಹಾರ ಸ್ವೀಕರಿಸುವಾಗ, ಸ್ವೀಕರಿಸಿದ ಬಳಿಕ ಪಕ್ಷಿಗಳು ತೋರಿಸುವ ಕೃತಜ್ಞತಾ ಭಾವದಿಂದ ಸಂತೃಪ್ತ ಭಾವನೆ ಮೂಡುತ್ತದೆ.
– ವಿಶ್ವನಾಥ ಶೆಣೈ ಉಡುಪಿ

Advertisement

— ಎಸ್‌.ಜಿ. ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next