Advertisement

ಪಕ್ಷಿಗಳ ವಿಹಾರ ತಾಣ, ಕೃಷಿ ಭೂಮಿಗೆ ಅನುಕೂಲ

11:26 AM Dec 10, 2022 | Team Udayavani |

ಪುತ್ತೂರು: ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸಾಂಪ್ರದಾಯಿಕ ಕೆರೆ-ಕಟ್ಟೆಗಳನ್ನು ಉಳಿಸಿ ಅಭಿವೃದ್ಧಿಪಡಿಸುವ ಅಭಿಯಾನಕ್ಕೆ ಪೂರಕ ಎಂಬಂತೆ ಬಜತ್ತೂರು ಗ್ರಾ.ಪಂ. ವ್ಯಾಪ್ತಿಯ ಮೇಲೂರಿನಲ್ಲಿ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಾರಂಭಗೊಂಡಿದೆ.

Advertisement

ಮೇಲೂರಿನಲ್ಲಿ 60 ಸೆಂಟ್ಸ್‌ ಜಾಗ ಕೆರೆಗೆ ಮೀಸಲಿಡಲಾಗಿತ್ತು. ಅದರಲ್ಲಿ 10 ಸೆಂಟ್ಸ್‌ ಜಾಗದಲ್ಲಿ ಮಾತ್ರ ನೀರು ನಿಲ್ಲುತ್ತಿತ್ತು. ಇನ್ನುಳಿದ 50 ಸೆಂಟ್ಸ್‌ ಜಾಗದಲ್ಲಿ ಹೂಳು ತುಂಬಿತ್ತು. ಕೆರೆಗೆ ಹೊಂದಿಕೊಂಡಿರುವ ಭೂ ಮಾಲಕರಾದ ಮೇಲೂರು ಅಪರಂಜಿ ಅರಿಗ ಅವರು 40 ಸೆಂಟ್ಸ್‌ ಜಾಗವನ್ನು ಗ್ರಾ.ಪಂ.ಗೆ ದಾನ ಪತ್ರದ ಮೂಲಕ ನೀಡಿದ್ದಾರೆ. ಕೆರೆ ರಚನೆಗೆ ಮುತುವರ್ಜಿ ವಹಿಸಿ ಜಮೀನು ದಾನ ನೀಡಿರುವುದು ಕೆರೆ ಅಭಿವೃದ್ಧಿ ನಡೆಸಲು ಮುಖ್ಯ ಕಾರಣ ಎನ್ನುತ್ತದೆ ಗ್ರಾ.ಪಂ. ಆಡಳಿತ ಮಂಡಳಿ.

ಕೆರೆ ಅಭಿವೃದ್ಧಿ

ಮೇಲೂರು ಕೆರೆ ಅಭಿವೃದ್ಧಿ ಕುರಿತು ಉದ್ಯೋಗ ಖಾತರಿ ಯೋಜನೆಯ ಗ್ರಾಮಸಭೆಯಲ್ಲಿ ಪ್ರಸ್ತಾವವಾಗಿತ್ತು. ಕೇವಲ ಉದ್ಯೋಗ ಖಾತರಿ ಯೋಜನೆಯ ಅನುದಾನದಿಂದ ಅಭಿವೃದ್ಧಿ ಸಾಧ್ಯವಿಲ್ಲದಿ ರುವುದರಿಂದ ಜಿ.ಪಂ., ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಧ.ಗ್ರಾ. ಯೋಜನೆ ಹೀಗೆ ಹಲವು ಇಲಾಖೆಗಳಿಗೆ ಮತ್ತು ಸಿಎಸ್‌ಆರ್‌ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಜಿ.ಪಂ., ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಅನುದಾನದಲ್ಲಿ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 32 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೊಳ್ಳಲಿದೆ.

ಮೂರು ಭಾಗ ಗುಡ್ಡ ಪ್ರದೇಶವಿದ್ದು ಮಧ್ಯದಲ್ಲಿ ಮೇಲೂರು ಕೆರೆ ಇದೆ. ತಗ್ಗು ಪ್ರದೇಶದಲ್ಲಿ ತೋಟ, ಗದ್ದೆ ಇದ್ದು, ಗುಡ್ಡ ಪ್ರದೇಶದಿಂದ ಹರಿದು ಬಂದ ನೀರು ಈ ಕೆರೆಯಲ್ಲಿ ನಿಲ್ಲಲು ಸಹಕಾರಿಯಾಗಲಿದೆ. ಮಳೆಗಾಲ ಆರಂಭವಾಗುವಾಗ ವಿವಿಧ ಜಾತಿಯ ಪಕ್ಷಿಗಳು ಈ ಪರಿಸರದಲ್ಲಿ ವಿಹರಿಸಿ ಡಿಸೆಂಬರ್‌ ವೇಳೆ ವಲಸೆ ಹೋಗುತ್ತವೆ. ಹೀಗೆ ಪಕ್ಷಿಗಳಿಗೆ ಪ್ರಿಯ ತಾಣವೂ ಇದಾಗಿದೆ.

Advertisement

ಕೆರೆಯ ಹೂಳೆತ್ತುವುದುರಿಂದ ಅಂತ ರ್ಜಲ ವೃದ್ಧಿಯಾಗಲಿದೆ. ಸುತ್ತಲಿನ ನೀರಿನ ಮೂಲಗಳಿಗೆ ಅಲ್ಲದೆ ಕೊಳವೆ ಬಾವಿಗಳಿಗೂ ಪ್ರಯೋಜನವಾಗಲಿದೆ.

ಅಂತರ್ಜಲ ವೃದ್ಧಿಗೆ ಮುಖ್ಯ ಪಾತ್ರವಹಿ ಸಲಿರುವ ಕಾರಣ ಕೆರೆಯ ಅಭಿವೃದ್ಧಿಯ ಆವಶ್ಯಕತೆಗೆ 0.40 ಸೆಂಟ್ಸ್‌ ಜಾಗವನ್ನು ಗ್ರಾ.ಪಂ.ಗೆ ದಾನ ನೀಡಿದ್ದೇವೆ. ಗ್ರಾಮದ ಜನತೆಗೆ ಸಹಾಯವಾಗುತ್ತಿರುವುದಕ್ಕೆ ಖುಷಿ ಇದೆ ಎಂದು ಜಾಗ ದಾನಿಗಳಾದ ವೀರೇಂದ್ರ ಜೈನ್‌ ಮೇಲೂರು ಹೇಳುತ್ತಾರೆ.

ಕಾಮಗಾರಿ ಪ್ರಗತಿಯಲ್ಲಿದೆ: ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆಯಿಂದ 32 ಲ.ರೂ.ನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಅಂದಾಜು 6 ಮೀ. ಆಳ ಹಾಗೂ 60 ಮೀ. ಉದ್ದ -ಅಗಲ ಕಾಮಗಾರಿ ಪ್ರಗತಿಯಲ್ಲಿದೆ. ಅನುದಾನದ ಕೊರತೆಯಾದರೆ ಇತರ ಅನುದಾನಗಳನ್ನು ಒಗ್ಗೂಡಿಸಿ ಅನುಷ್ಠಾನಿಸಬೇಕಿದೆ. –ಭರತ್‌ ಬಿ.ಎಂ., ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂ. ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಪುತ್ತೂರು

ಪಕ್ಷಿಗಳಿಗೂ ಸಹಕಾರಿ: ಮೇಲೂರು ಕೆರೆ ಅಭಿವೃದ್ಧಿಯಿಂದ ಕೃಷಿ ಜಮೀನುಗಳಿಗೆ ಅನುಕೂಲಕರವಾಗಲಿದೆ. ಕೆರೆಗೆ ಬೇರೆಡೆಯಿಂದ ವಿವಿಧ ಜಾತಿಯ ಪಕ್ಷಿಗಳು ಸ್ಥಳಕ್ಕೆ ವಲಸೆ ಬರುತ್ತಿದ್ದು, ಪಕ್ಷಿಗಳಿಗೂ ಸಹಕಾರಿಯಾಗಲಿದೆ. –ಪ್ರೇಮಾ ಬಿ., ಅಧ್ಯಕ್ಷರು, ಬಜತ್ತೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next