ಹೊಸದಿಲ್ಲಿ: ದೇಶದಲ್ಲಿ ಹಕ್ಕಿ ಜ್ವರ ಭೀತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲೂ ಹಕ್ಕಿ ಜ್ವರ ಪ್ರಕರಣಗಳು ದೃಢವಾಗಿದ್ದು, ದೇಶದ ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡಂತಾಗಿದೆ.
ಶನಿವಾರ ದೇಶದಲ್ಲಿ 1200ಕ್ಕೂ ಹೆಚ್ಚು ಹಕ್ಕಿಗಳು ಸಾವಿಗೀಡಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದರಲ್ಲೂ 900 ಹಕ್ಕಿಗಳು ಮಹಾರಾಷ್ಟ್ರ ಒಂದರಲ್ಲೇ ಸಾವನ್ನಪಪ್ಪಿದೆ.
ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಇದೀಗ ಉತ್ತರ ಪ್ರದೇಶ ರಾಜ್ಯದಲ್ಲೂ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂದು ಕೇಂದ್ರ ದೃಢಪಡಿಸಿದೆ.
ಇದನ್ನೂ ಓದಿ:ಪ್ರಪ್ರಥಮವಾಗಿ ಮುದ್ರಣ ಯಂತ್ರವನ್ನು ಆವಿಷ್ಕರಿಸಿದ… ಗುಟೆನ್‌ಬರ್ಗ್ ಮ್ಯೂಸಿಯಂ!
ದಿಲ್ಲಿ, ಮಹಾರಾಷ್ಟ್ರ ಮತ್ತು ಛತ್ತೀಸ್ ಗಡ್ ರಾಜ್ಯದಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಝೀಪುರ್ ಮಾರುಕಟ್ಟೆಯಿಂದ ಕೋಳಿ ಸೇರಿದಂತೆ ಹಕ್ಕಿಗಳನ್ನು ಮುಂದಿನ ಹತ್ತು ದಿನಗಳವರೆಗೆ ತರುವುದನ್ನು ತಡೆಯಲಾಗಿದೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.
ದಕ್ಷಿಣ ದಿಲ್ಲಿಯ ಜಸೋಲಾ ಪಾರ್ಕ್ ನಲ್ಲಿ 24 ಕಾಗೆಗಳು ಸತ್ತು ಬಿದ್ದಿದ್ದವು. ಪ್ರಸಿದ್ಧ ಸಂಜಯ್ ಕೆರೆಯಲ್ಲಿ ಸುಮಾರು ಹತ್ತು ಬಾತುಕೋಳಿಗಳು ಮೃತಪಟ್ಟಿದ್ದವು. ಇದರಿಂದ ರಾಷ್ಟ್ರ ರಾಜಧಾನಿಯಲ್ಲೂ ಸೋಂಕು ಭೀತಿ ಹೆಚ್ಚಿದೆ.