ಮುಂಬಯಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಕೆಲವು ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಯಾವುದೇ ರೀತಿಯಲ್ಲಿ ಭೀತಿ ಪಡಬೇಕಾದ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹಿಂದೆ ಹೇಗಿತ್ತೋ ಹಾಗೆ ಡ್ರೆಸ್ ಕೋಡ್ ಮುಂದುವರೆಯಲಿ: ಆರ್. ಧ್ರುವನಾರಾಯಣ
ಇತ್ತೀಚೆಗೆ ತಹಸೀಲ್ ನ ವೆಹ್ಲೋಳಿ ಗ್ರಾಮದ ಕೋಳಿ ಫಾರಂವೊಂದರಲ್ಲಿ ಸುಮಾರು 100 ಕೋಳಿಗಳು ಸಾವನ್ನಪ್ಪಿದ ನಂತರ ಶಹಾಪುರದಲ್ಲಿ ಹಕ್ಕಿಜ್ವರದ ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಸಾವನ್ನಪ್ಪಿರುವ ಕೋಳಿಯಿಂದ ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಕೋಳಿಗಳು ಎಚ್ 5ಎನ್ 1 ಏವಿಯನ್ ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಫಲಿತಾಂಶ ದೃಢಪಡಿಸಿದೆ ಎಂದು ಥಾಣೆ ಜಿಲ್ಲಾ ಪರಿಷತ್ ನ ಸಿಇಒ ಡಾ.ಭೌಸಾಹೇಬ್ ಡಾಂಗ್ಡೆ ತಿಳಿಸಿದ್ದಾರೆ.
ಶಹಾಪುರ್ ಗ್ರಾಮದ ಒಂದು ಕಿಲೋ ಮೀಟರ್ ಸುತ್ತಳತೆಯಲ್ಲಿರುವ ಕೋಳಿಫಾರಂಗಳಲ್ಲಿನ ಕೋಳಿಗಳನ್ನು ಕೊಲ್ಲುವಂತೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಥಾಣೆ ಜಿಲ್ಲಾಧಿಕಾರಿ ರಾಜೇಶ್ ನಾರ್ವೇಕರ್, ಸುಮಾರು 25,000ಕ್ಕೂ ಅಧಿಕ ಕೋಳಿಗಳನ್ನು ಕೊಲ್ಲುವಂತೆ ಶನಿವಾರ (ಫೆ.19) ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.
ಶಹಾನ್ ಪುರ್ ಹೊರತುಪಡಿಸಿ ಜಿಲ್ಲೆಯ ಬೇರೆ ಯಾವುದೇ ಭಾಗದಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಇದರಿಂದಾಗಿ ಜನರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.