ವಿಜಯಪುರ:ಅರಣ್ಯ ನಾಶ ತಡೆ, ಅಕ್ರಮ ಗಣಿಗಾರಿಕೆ ತಡೆಗಟ್ಟುವುದು ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವಂತೆ ಜಲ ಬಿರಾದರಿ ಸಂಘಟನೆ ಪದಾಧಿಕಾರಿಗಳು ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆ ಸಂಚಾಲಕ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ಜಾಗತಿಕ ತಾಪಮಾನದ ಏರಿಕೆ, ಹವಾಮಾನ ಏರುಪೇರು ಭವಿಷ್ಯದ ಭೂಮಿಯ ಜೀವ ಸಂಕುಲದ ಅಳಿವಿಗೆ ಕಾರಣವಾಗಬಹುದು ಎಂಬ ಭಯ ಹವಾಮಾನ ತಜ್ಞರನ್ನು ಕಾಡುತ್ತಿದೆ. ಈ ತಾಪಮಾನದ ಏರಿಕೆಗೆ ಭೂಮಿ ಕುದಿಯುತ್ತದೆ ಎಂಬ ಸಂದೇಶ ಹರಿಬಿಟ್ಟದ್ದಾರೆ. ಇದರಿಂದ ಎಲ್ಲ ಜೀವ ಸಂಕುಲವೇ ನಾಶದ ಅಂಚಿಗೆ ತಳ್ಳಲ್ಪಡುತ್ತದೆ. ಎನ್ನುವ ಗಂಟೆ ಬಾರಿಸುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ರುಜಿನಗಳು ಇಂದು ಬೆಳೆಯುತ್ತಿರುವ ವಿಜ್ಞಾನಕ್ಕೆ ಸವಾಲಾಗಿ ನಿಂತಿವೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಭೂಮಿಯ ಆರೋಗ್ಯಕ್ಕಾಗಿ ಮನುಷ್ಯರೆಲ್ಲರೂ ಪರಿಸರ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ವಾತಾವರಣವೆಲ್ಲ ಹಾಳಾಗಲು ಮನುಕುಲವೇ ಕಾರಣವಾಗಿದೆ. ಪಂಚಮಹಾ ಬೂತಗಳಾದ ಗಾಳಿ, ನೀರು, ಆಕಾಶ, ಬೆಂಕಿ, ಮಣ್ಣು ಇವುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.
ಅವಿಭಜಿತ ಜಿಲ್ಲೆಯಲ್ಲಿರುವ ಕೃಷ್ಣಾ, ಭೀಮಾ, ಮಲಪ್ರಭಾ, ಘಟಪ್ರಭಾ, ಡೋಣಿ ಪಂಚ ನದಿಗಳಿದ್ದರೂ ವರ್ಷವಿಡಿ ಹರಿಯುತ್ತಿಲ್ಲ ಕೆಲ ಕಾಲ ಬತ್ತಿ ಹೋಗುತ್ತಿವೆ. ನೀರಿನ ಹಾಹಾಕಾರ ಸೃಷ್ಟಿಯಾಗುತ್ತಿದೆ. ಹಾಗಾಗಿ ಅವೆಲ್ಲ ಸರ್ವಋತು ಜೀವಂತವಾಗಿಟ್ಟು ನಮ್ಮ ನಾಡು ಹಸಿರಾಗಿಸಬೇಕಿದೆ. ಈಗಿನ ವಾತಾವರಣ ನೋಡಿದರೆ ನಮ್ಮ ತಾಯಿ ಭೂಮಿಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಅದಕ್ಕಾಗಿ ಸರಕಾರ ಮತ್ತು ಜಿಲ್ಲಾಡಳಿತ ಜಿಲ್ಲೆಯಲ್ಲಿ ಎಲ್ಲ ರೀತಿಯ ಗಣಿಕಾರಿಕೆ ನಿಯಂತ್ರಿಸಿಬೇಕಿದೆ. ಅರಣ್ಯ ನಾಶ ವಾಯು ಮಾಲಿನ್ಯ, ಜಲ ಮಾಲಿನ್ಯ ದಿಂದಾಗಿ ಪರಿಸರ ನಾಶವಾಗುದನ್ನು ರಕ್ಷಿಸಬೇಕಿದೆ.ಈ ರೀತಿ ಎಲ್ಲ ವಿಪತ್ತುಗಳನ್ನು ಹೊರಬರಲು ರಾಷ್ಟ್ರೀಯ ವಿಪತ್ತು ನಿಯಂತ್ರಣ ಯೋಜನೆಯಲ್ಲಿ ಸರಕಾರ ಕಾರ್ಯೋನುಖವಾಗಬೇಕಿದೆ ಎಂದು ಜಿಲ್ಲಾಡಳಿತದ ಮುಖಾಂತರ ಭಾರತ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆರ್.ಕೆ.ಎಸ್ ರೈತ ಸಂಘಟನೆ ಮುಖಂಡ ಬಾಳು ಜೇವೂರ, ಸಂಸ್ಥಾಪಕ ಆಬೀದ್ ಸಂಗಮ್, ನಾರಿಕಾ ಯೂಥ್ ಸಂಸ್ಥೆ ಅಮೀನ್ ಹುಲ್ಲೂರ, ಮುನ್ನಾ ಭಕ್ಷಿ, ರಿಜಾ ಸಂಗಮ್, ರಿಹಾನ್ ಸಂಗಮ, ಮುಬಾರಕ್ ವಾಲೀಕಾರ, ಮಹಾದೇವ ಲಿಗಾಡೆ ಇದ್ದರು.