ಗುವಾಹಟಿ : ಲಂಗು ಲಗಾಮಿಲ್ಲದ ಅಜ್ಞಾನದ ಹೇಳಿಕೆಗಳಿಗಾಗಿ ಈಚೆಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ತ್ರಿಪುರ ಮುಖ್ಯಮಂತ್ರಿ ಬಿಪ್‌ಲಬ್ ಕುಮಾರ್ ದೇಬ್ ಅವರು ಈಚೆಗೆ ಉದಯಪುರದಲ್ಲಿ ನಡೆದಿದ್ದ ರಬೀಂದ್ರ ಜಯಂತಿ ಕಾರ್ಯಕ್ರಮದಲ್ಲಿ ನೀಡಿರುವ ಇನ್ನೊಂದು ಅಜ್ಞಾನದ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
“ಬ್ರಿಟಿಷರ ವಿರುದ್ಧದ ಪ್ರತಿಭಟನೆಯಾಗಿ ಕವಿ ರಬೀಂದ್ರನಾಥ್ ಟಾಗೋರರು ತಮಗೆ ಸಂದಿದ್ದ ನೊಬೆಲ್ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು” ಎಂದು ಸಿಎಂ ಬಿಪ್‌ಲಬ್ ಹೇಳಿದ್ದರು.
ವಾಸ್ತವವಾಗಿ ರಬೀಂದ್ರ ನಾಥ್ ಠಾಗೋರರು 1919ರಲ್ಲಿ ಬ್ರಿಟಿಷರಿಂದ ನಡೆದಿದ್ದ ಜಲಿಯನ್‌ವಾಲಾ ಬಾಗ್ ನರಮೇಧವನ್ನು ಪ್ರತಿಭಟಿಸಿ ತಮ್ಮ ನೈಟ್‌ಹುಡ್ ಪದವಿಯನ್ನು ಮರಳಿಸಿದ್ದರು; ಹೊರತು ನೊಬೆಲ್ ಪ್ರಶಸ್ತಿಯನ್ನು ಅಲ್ಲ.
ರಬೀಂದ್ರ ನಾಥ್ ಠಾಗೋರರಿಗೆ 1913ರಲ್ಲಿ ಸಂದಿದ್ದ ನೊಬೆಲ್ ಪ್ರಶಸ್ತಿ ಮತ್ತು ಫಲಕ 2004ರಲ್ಲಿ ಬೀರ್‌ಭೂಮ್‌ನಲ್ಲಿನ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಮ್ಯೂಸಿಯಂನಿಂದ ಕಳವಾಗಿತ್ತು. ಆಗಿನ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್‌ಜೀ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದರು; ಆದರೆ 2009ರಲ್ಲಿ ಸಿಬಿಐ ಈ ಕಳವು ಪ್ರಕರಣಕ್ಕೆ ಸಂಬಂಧಿಸಿ ತನಗೆ ಯಾವುದೇ ಹೊಸ ನಿಖರ ಸುಳಿವು ಸಿಗಲಿಲ್ಲ ಎಂಬ ಕಾರಣ ಒಡ್ಡಿ ಕೇಸನ್ನು ಮುಚ್ಚಿತ್ತು.
ಈ ಕೇಸನ್ನು ಮುಚ್ಚುವ ಬದಲು ಅದನ್ನು ಪಶ್ಚಿಮ ಬಂಗಾಲ ಸರಕಾರದ ತನಿಖಾ ಸಂಸ್ಥೆಗೆ ಏಕೆ ಒಪ್ಪಿಸಿಲ್ಲ ಎಂದು ಸಿಬಿಐ ಅನ್ನು 2017ರಲ್ಲಿ ಕಲ್ಕತ್ತಾ ಹೈಕೋರ್ಟ್ ಪ್ರಶ್ನಿಸಿತ್ತು.