Advertisement

ಬಯೋಮೆಟ್ರಿಕ್‌ ಅಸ್ತ್ರಬಳಕೆ

10:51 AM May 24, 2018 | |

ಬೆಂಗಳೂರು: ಈಗ್ಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಹೊರಗಟ್ಟುವ ಕುರಿತು ತೀವ್ರ ಚರ್ಚೆ ನಡೆದಿತ್ತು.

Advertisement

ಇದರೊಂದಿಗೆ ಆಗಾಗ ಪತ್ತೆಯಾಗುವ ಮಾದಕ ವಸ್ತು ಸಾಗಣೆ ಮತ್ತಿತರ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ವಿದೇಶಿಗರ
ವೀಸಾ ಪರಿಶೀಲಿಸಿದಾಗ ಶೇ.90ರಷ್ಟು ವಿದೇಶಿಗರ ವೀಸಾ ಅವಧಿ ಮೀರಿರುತ್ತಿತ್ತು. ಆದರೂ ಅವರೆಲ್ಲಾ ನಗರದಲ್ಲಿ ಅಕ್ರಮವಾಗಿ ನೆಲೆಸಿರುತ್ತಿದ್ದರು. ಇಂಥ ಅಕ್ರಮ ವಿದೇಶಿ ನಿವಾಸಿಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಹೊಸ ಪ್ರಯತ್ನವೊಂದಕ್ಕೆ ಮುಂದಾಗುತ್ತಿದೆ.
 
ನಕಲಿ ಪಾಸ್‌ಪೋರ್ಟ್‌ ನೆರವಿನಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವಿದೇಶಿಗರ ಪತ್ತೆಗಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಬಯೋಮೆಟ್ರಿಕ್‌ ಮಾಹಿತಿ ಸಂಗ್ರಹಕ್ಕೆ ಚಿಂತಿಸಿರುವ ಪೊಲೀಸ್‌ ಇಲಾಖೆ ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. 

ವೀಸಾ ಅವಧಿ ಮುಗಿದ ಬಳಿಕವೂ ನೆಲೆಸಿರುವ ವಿದೇಶಿಗರನ್ನು ಪೊಲೀಸ್‌ ಇಲಾಖೆ ಗಡಿಪಾರು ಮಾಡುತ್ತದೆ. ಆದರೆ,
ಒಂದೆರಡು ತಿಂಗಳ ನಂತರ ನಕಲಿ ಪಾಸ್‌ ಪೋರ್ಟ್‌ ಮೂಲಕ ಕೆಲವರು ನಗರ ಪ್ರವೇಶಿಸುತ್ತಿದ್ದಾರೆ. ಅಂತಹವರನ್ನು ಪತ್ತೆ ಹಚ್ಚುವುದೇ ಇಲಾಖೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿರುವಂತೆ ರಾಜ್ಯದಲ್ಲೂ ವಿದೇಶಿಗರ ಬೆರಳಚ್ಚಿನ ಮಾಹಿತಿ ಕಲೆಹಾಕುವ ಚಿಂತನೆ ನಡೆದಿದೆ. ಅಷ್ಟೇ ಅಲ್ಲದೆ, ಈ ಸಂಬಂಧ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗಳಿಗೂ ಈ ಬಗ್ಗೆ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಿಕೊಳ್ಳಲು ಮನವಿ ಸಲ್ಲಿಸಲು ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ.

ಅಕ್ರಮವಾಗಿ ನೆಲೆಸಿರುವ ಕೆಲ ವಿದೇಶಿಗರು ಜೀವನ ನಿರ್ವಹಣೆಗಾಗಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗುತ್ತಿದ್ದಾರೆ ಎಂಬ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿಯಿದೆ. ಅಲ್ಲದೇ, ಈ ವಿದೇಶಿ ಪ್ರಜೆಗಳ ಜತೆ ಉತ್ತರ ಭಾರತದ ಕೆಲ ಯುವತಿಯರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಬಯೋಮೆಟ್ರಿಕ್‌ ಮಾಹಿತಿ ಸಂಗ್ರಹಣೆ ಸಹಕಾರಿಯಾಗಲಿದೆ. ಜತೆಗೆ ಅಪರಾಧ ಹಿನ್ನೆಲೆಯಲ್ಲಿ ಗಡಿಪಾರಾದ ವಿದೇಶಿಯರನ್ನು ವಿಮಾನ ನಿಲ್ದಾಣ ದಲ್ಲೇ ವಾಪಸ್‌ ಕಳುಹಿಸಲು ಸಾಧ್ಯವಾಗಲಿದೆ ಎಂಬುದು ಪೊಲೀಸ್‌ ಇಲಾಖೆ ಲೆಕ್ಕಾಚಾರ.

ವಿಳಾಸ ಬದಲು: ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳ ಮಾಹಿತಿ ಆಧರಿಸಿ ಈ ಹಿಂದೆ 100ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಲಾಗಿತ್ತು. ಆದರೆ, ಕೆಲ ವಿದೇಶಿಗರು ನಕಲಿ ಪಾಸ್‌ಪೋರ್ಟ್‌ ಮೂಲಕ ಮತ್ತೆ ನಗರಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿಯಿದೆ. ಇಂತಹವರ ಪತ್ತೆ ಕಷ್ಟ.
 
ಕೆಲವೊಮ್ಮೆ ವಿದ್ಯಾರ್ಥಿ ಹಾಗೂ ವ್ಯವಹಾರ ವೀಸಾದಡಿ ನಗರಕ್ಕೆ ಆಗಮಿಸುವ ವಿದೇಶಿಯರು ಪ್ರಾದೇಶಿಕ ಕಚೇರಿಯಲ್ಲಿ
ನೊಂದಾಯಿಸುವ ವಿಳಾಸ ಹಾಗೂ ಹಾಲಿ ವಾಸಿಸುವ ವಿಳಾಸ ಬೇರೆಡೆ ಇರುತ್ತದೆ. ಹೀಗಾಗಿ ನಗರದಲ್ಲಿ ನೆಲೆಸಿರುವ
ವಿದೇಶಿಯರ ಬಯೋಮೆಟ್ರಿಕ್‌ ಪಡೆದರೆ ಪತ್ತೆ ಸುಲಭ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

900 ಮಂದಿ ಅಕ್ರಮ ವಿದೇಶಿಯರು: ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ ಪ್ರಕಾರ ನಗರದಲ್ಲಿ 900ಕ್ಕೂ ಹೆಚ್ಚು ವಿದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ. ಈ ಎಲ್ಲ ವಿದೇಶಿಯರನ್ನು ಗಡಿಪಾರು ಮಾಡಲು ಆಯಾ ವಲಯದ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ವಿದೇಶಿಗರ ವಿಳಾಸ ಬದಲಾಗಿರುವುದರಿಂದ ಅವರ ಪತ್ತೆ ಸಾಧ್ಯವಾಗುತ್ತಿಲ್ಲ  ಪೂರ್ವ ವಲಯದಲ್ಲೇ ಹೆಚ್ಚು ನಗರದ ಎಂಟು ವಲಯಗಳಲ್ಲಿ ಪೂರ್ವ ವಲಯದಲ್ಲೇ ಹೆಚ್ಚು ವಿದೇಶಿಯರು ನೆಲೆಸಿದ್ದು, ಮಾದಕ ವಸ್ತು ಮಾರಾಟ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಈ ಹಿಂದೆ ಸುಮಾರು 200ಕ್ಕೂ ಅಧಿಕ ಮಂದಿಯನ್ನು ಗಡಿಪಾರು ಮಾಡಲಾಗಿತ್ತು. ಅವಧಿ ಮುಗಿದ ನೆಲೆಸಿರುವ ವಿದೇಶಿಯರಿಂದ ದಂಡ ಕಟ್ಟಿಸಿಕೊಂಡು ವಿದೇಶಿಕ್ಕೆ ಕಳುಹಿಸಲಾಗಿತ್ತು. ಆದರೂ, ಕೆಲವರು ನಕಲಿ ಪಾಸ್‌ಪೋರ್ಟ್‌ ಮೂಲಕ ಮತ್ತೆ ನಗರ ಪ್ರವೇಶಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.

ತಾಂತ್ರಿಕ ಸಮಸ್ಯೆ, ಸಮನ್ವಯ ಕೊರತೆ ಸಾಮಾನ್ಯವಾಗಿ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ವಿದೇಶಿ ಪ್ರಜೆಗಳ ಬಯೋಮೆಟ್ರಿಕ್‌ ಪಡೆಯಲಾಗುತ್ತದೆ. ಆದರೆ, ಯಾರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ನೋಂದಣಿ ಕಚೇರಿಗೆ ಇರುವುದಿಲ್ಲ. 

ಮತ್ತೂಂದೆಡೆ ಅಕ್ರಮ ದಂಧೆಯಲ್ಲಿ ತೊಡಗುವ ವಿದೇಶಿಯರ ಬಯೋಮೆಟ್ರಿಕ್‌ ಮಾಹಿತಿಯನ್ನು ಪೊಲೀಸರು ನೋಂದಣಿ ಕಚೇರಿಗೆ ರವಾನಿಸುವುದಿಲ್ಲ. ಈ ತಾಂತ್ರಿಕ ಹಾಗೂ ಸಮನ್ವಯ ಕೊರತೆಯಿಂದ ಅಕ್ರಮ ದಂಧೆಯಲ್ಲಿ ತೊಡಗಿ ಗಡಿಪಾರು ಆದವರು ಮತ್ತೆ ನಗರ ಪ್ರವೇಶಿಸುತ್ತಿದ್ದಾರೆ ಎಂದು ಹೇಳುತ್ತಾರೆ.

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next