ಧಾರವಾಡ: ನ್ಯಾಯಬೆಲೆ ಅಂಗಡಿಗಳಿಗೆ ಧಾನ್ಯ ಸರಬರಾಜು ಮಾಡುವ ಗೋದಾಮುಗಳಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲು ರಾಜ್ಯ ಸರ್ಕಾರ ಚಿಂತಿಸಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋದಾಮುಗಳಲ್ಲಿ ಪಡಿತರ ಸುರಕ್ಷತೆ ದೃಷ್ಟಿಯಿಂದ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಲಾಗುವುದು. ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಈಗಾಗಲೇ ಅವುಗಳನ್ನು ರದ್ದುಗೊಳಿಸಿದ್ದು, ಆನ್‌ಲೈನ್ ಮೂಲಕವೇ ಪಡಿತರ ಚೀಟಿ ಅರ್ಜಿ ಸ್ವೀಕರಿಸಿ ಮನೆ ಮನೆಗೆ ವಿತರಣೆ ಮಾಡಲಾಗುತ್ತಿದೆ. ಆನ್‌ಲೈನ್ ಸಹಾಯದಿಂದಲೇ ಪಡಿತರ ವಿತರಣೆಯೂ ನಡೆಯುತ್ತಿದೆ ಎಂದರು.
ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ 20 ಸಾವಿರ ಕ್ವಿಂಟಲ್ ಗೋಧಿಗೆ ಹುಳು ಹಿಡಿದ ಪ್ರಕರಣದ ವರದಿ ಇನ್ನೂ ಕೈ ಸೇರಿಲ್ಲ. ಈಗಾಗಲೇ ಅದನ್ನು ಪ್ರಾಣಿಗಳಿಗೆ ಕೊಡಬೇಕಾ ಅಥವಾ ಪ್ರಾಣಿಗಳಿಗೆ ಕೊಡಲೂ ಯೋಗ್ಯವಿಲ್ಲದೇ ಹೋದರೆ ನಾಶಪಡಿಸಬೇಕಾ ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ ಎಂದರು.
ರಾಜ್ಯದಲ್ಲಿ 15.5 ಲಕ್ಷ ಜನ ಪಡಿತರ ಚೀಟಿಗೆ ಅರ್ಜಿ ಹಾಕಿದ್ದರು. ಈ ಪೈಕಿ 1.5 ಲಕ್ಷ ಅರ್ಜಿಗಳು ಮನೆ ವಿಳಾಸ ಸರಿ ಇಲ್ಲದ ಕಾರಣ ಬಾಕಿ ಉಳಿದಿವೆ. ಉಳಿದ 14 ಲಕ್ಷ ಅರ್ಜಿಗಳ ಪೈಕಿ 12ಲಕ್ಷ ಜನರಿಗೆ ಪಡಿತರ ಚೀಟಿ ಅಂಚೆ ಮೂಲಕ ತಲುಪಿದೆ. ಇನ್ನುಳಿದವು ಜನವರಿ ತಿಂಗಳಾಂತ್ಯಕ್ಕೆ ಫಲಾನುಭವಿಗಳ ಕೈ ಸೇರಲಿವೆ. ರಾಜ್ಯದಲ್ಲಿ ಈಗಾಗಲೇ 8.50 ಲಕ್ಷ ಬೋಗಸ್ ಕಾರ್ಡ್‌ಗಳನ್ನು ರದ್ದು ಮಾಡಿದ್ದೇವೆ.
– ಯು.ಟಿ. ಖಾದರ್, ಆಹಾರ ಸಚಿವ