Advertisement

ವಾಕರಸಾ ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್‌

10:35 AM Sep 23, 2019 | Suhan S |

ಹುಬ್ಬಳ್ಳಿ: ಸಮಯಪಾಲನೆ, ಕರ್ತವ್ಯದಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಅನುಷ್ಠಾನಕ್ಕೆ ಮುಂದಾಗಿದೆ.

Advertisement

ಕೆಲಸಕ್ಕೆ ಎಷ್ಟೊತ್ತಿಗೆ ಬಂದರೂ ನಡೆಯುತ್ತೆ ಎನ್ನುವ ಮನಸ್ಥಿತಿಯ ಸಿಬ್ಬಂದಿ ಆಟಾಟೋಪಕ್ಕೆ ಇದರಿಂದ ಸಂಪೂರ್ಣ ಕಡಿವಾಣ ಬೀಳಲಿದೆ. ಕರ್ತವ್ಯಕ್ಕೆ ವಿಳಂಬ ಹಾಜರಿ, ತಡವಾಗಿ ಬಂದರೆ ಕೇಳುವರ್ಯಾರುಎನ್ನುವ ಅಶಿಸ್ತು, ಕರ್ತವ್ಯದ ಹೆಸರಲ್ಲಿನ ವೈಯಕ್ತಿಕ ಕೆಲಸಕ್ಕೆ ತಿರುಗಾಡುತ್ತಿದ್ದ ಸಿಬ್ಬಂದಿ ಚಟುವಟಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಯೋಮೆಟ್ರಿಕ್‌ ವ್ಯವಸ್ಥೆಗೆ ಮುಂದಾಗಿದೆ.

ಕೇಂದ್ರ ಕಚೇರಿಯಿಂದ ಹಿಡಿದು ಡಿಪೋವರೆಗೂ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳ್ಳಲಿದ್ದು, ವಾಯವ್ಯ ಸಾರಿಗೆ ಸಂಸ್ಥೆಯ ಈ ಪ್ರಯತ್ನ ಇತರೆ 4 ಸಂಸ್ಥೆಗಳ ಪೈಕಿ ಮೊದಲು. ನಾಲ್ಕು ವರ್ಷಗಳ ಹಿಂದೆಯೇ ಸಂಸ್ಥೆ ವ್ಯಾಪ್ತಿಯಲ್ಲಿ ಬಯೋಮೆಟ್ರಿಕ್‌ ಜಾರಿ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಕೇಂದ್ರ ಕಚೇರಿಯಲ್ಲಿ ಆಧಾರ ಸಂಖ್ಯೆ ಆಧಾರಿತ ಬಯೋಮೆಟ್ರಿಕ್‌ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ ಅಧಿಕಾರಿಗಳ ಬದಲಾವಣೆಯಿಂದ ಇದು ವಿಭಾಗ ಹಾಗೂ ಘಟಕಗಳ ಹಂತಕ್ಕೆ ತಲುಪಲಿಲ್ಲ. ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಯ ಪಾಲನೆ ಮಾಡುತ್ತಿಲ್ಲ ಎನ್ನುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಂಸ್ಥೆ ಬೋರ್ಡ್‌ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗಿದೆ.

ಆಡಳಿತ-ಮೆಕ್ಯಾನಿಕ್‌ ಸಿಬ್ಬಂದಿಗೆ ಕಡ್ಡಾಯ: ಮೊದಲ ಹಂತದಲ್ಲಿ ಆಡಳಿತ ಸಿಬ್ಬಂದಿ, ಮೆಕ್ಯಾನಿಕ್‌ ಹಾಗೂ ಅಧಿಕಾರಿಗಳನ್ನು ಬಯೋಮೆಟ್ರಿಕ್‌ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಈ ಸಿಬ್ಬಂದಿ ಮೇಲೆಯೇ ಕರ್ತವ್ಯದ ಸಮಯಕ್ಕೆ ಬರುವುದಿಲ್ಲ ಎನ್ನುವ ದೂರುಗಳಿವೆ. ಪ್ರಮುಖವಾಗಿ ಕೆಲ ಘಟಕ ವ್ಯವಸ್ಥಾಪಕರು ಪೀಕ್‌ ಅವರ್‌ನಲ್ಲಿ ಡಿಪೋಗಳಲ್ಲಿ ಇರದೆ ಕಿರಿಯ ಅಧಿಕಾರಿಗಳ ಮೇಲೆ ದೂಡುತ್ತಿದ್ದಾರೆ ಎನ್ನುವ ದೂರುಗಳಿವೆ. ಇದರಿಂದ ಬಸ್‌ಗಳ ಕಾರ್ಯಾಚರಣೆಗೆ ತೊಂದರೆಯಾಗುತ್ತಿವೆ. ಅಧಿಕಾರಿಗಳ ವಿಳಂಬ ಹಾಜರಾತಿ ತಡೆಗೆ ಅವರಿಗೂ ಬಯೋಮೆಟ್ರಿಕ್‌ ಕಡ್ಡಾಯವಾಗಲಿದೆ.

 ಕಾಗದ ರಹಿತ ಕಚೇರಿಗೆ ಪ್ರೇರಣೆ: ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯ 51 ಘಟಕ, 9 ವಿಭಾಗೀಯ ಕಚೇರಿ, 9 ವಿಭಾಗೀಯ ಕಾರ್ಯಾಗಾರ, ಪ್ರಾದೇಶಿಕ ಕಾರ್ಯಾಗಾರ, ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಕೇಂದ್ರ ಕಚೇರಿಗಳಲ್ಲಿ ಬಯೋಮೆಟ್ರಿಕ್‌ ಯಂತ್ರಗಳು ಅಳವಡಿಕೆಯಾಗಲಿವೆ. ಒಟ್ಟು 70 ಬಯೋಮೆಟ್ರಿಕ್‌ ಯಂತ್ರಗಳನ್ನು ಖರೀದಿಸಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಈ ವ್ಯವಸ್ಥೆ ಜಾರಿಗೊಳಿಸುವುದರಿಂದ ಕಾಗದ ರಹಿತ ಕಚೇರಿ ವ್ಯವಸ್ಥೆಗೆ ಪ್ರೇರಣೆಯಾಗಲಿದೆ. ಹಾಜರಾತಿಯನ್ನು ಪೆರೋಲ್‌ ವೇತನ ತಂತ್ರಾಂಶಕ್ಕೆ ಲಿಂಕ್‌ ಮಾಡಲಿದ್ದಾರೆ. ಇದರಿಂದ ತಿಂಗಳ ಕೊನೆಗೆ ವೇತನ ಸಿದ್ಧಪಡಿಸಲು ಹಾಜರಾತಿ ಪುಸ್ತಕ ನಿರ್ವಹಣೆ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಸುವ ಕಾಗದ ಕೂಡ ಉಳಿಯಲಿದೆ.

Advertisement

ವೇತನ ಕಡಿತ-ಶಿಸ್ತುಕ್ರಮ: ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಬಂದರೂ ಬಾಕಿ ರಜೆಗಳಲ್ಲಿ ಕಡಿತ, ವೇತನ ಕಡಿತ, ಪುನರಾವರ್ತನೆಯಾದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಕರ್ತವ್ಯ ನಿಷ್ಠ ಸಿಬ್ಬಂದಿಗೆ ಅನಿವಾರ್ಯ ಕಾರಣಗಳಿಂದವಿಳಂಬವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅವರಿಗೆ ಪೂರ್ಣ ಹಾಜರಿ ಕೊಡುವ ಅಧಿಕಾರವನ್ನು ಶಾಖೆಯ ಮುಖ್ಯಸ್ಥರಿಗೆ ನೀಡುವ ಆಯಾಮದಲ್ಲಿ ನಿಯಮ ರೂಪಿಸುವ ಕೆಲಸ ನಡೆಯುತ್ತಿದೆ. ಇಂತಹ ಹಸ್ತಕ್ಷೇಪದಿಂದ ಯೋಜನೆ ಉದ್ದೇಶ ಈಡೇರುವುದಿಲ್ಲ ಎನ್ನುವ ಅಭಿಪ್ರಾಯವೂ ಅಧಿಕಾರಿಗಳಲ್ಲಿದೆ.

ಚಾಲಕ-ನಿರ್ವಾಹಕರಿಗೆ ವಿನಾಯ್ತಿ ಬಯೋಮೆಟ್ರಿಕ್‌ ವ್ಯವಸ್ಥೆಯಡಿ ಚಾಲಕ-ನಿರ್ವಾಹಕರನ್ನು ತರುವುದು ತಾಂತ್ರಿಕವಾಗಿ ಸವಾಲಿನ ಕಾರ್ಯ. ಮೂರ್‍ನಾಲ್ಕು ದಿನಗಳ ಕಾಲ ಕರ್ತವ್ಯದ ಮೇಲೆ ತೆರಳುವುದರಿಂದ ಅವರಿಗೆ ಅಷ್ಟೊಂದು ಊರ್ಜಿತವಲ್ಲ ಎನ್ನುವ ಅಭಿಪ್ರಾಯಗಳಿವೆ. ಹೀಗಾಗಿ ಬಯೋಮೆಟ್ರಿಕ್‌ ವ್ಯವಸ್ಥೆ ಚಾಲಕ-ನಿರ್ವಾಹಕರಿಗೆ ಸದ್ಯಕ್ಕಿಲ್ಲ. ಎರಡನೇ ಹಂತದಲ್ಲಿ ಇವರ ಬಗ್ಗೆ ನಿರ್ಧಾರವಾಗಲಿದೆ.

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next