Advertisement

ಇ -ಹಾಜರಾತಿ: ದ.ಕ., ಉಡುಪಿಗೆ ಅಗ್ರಸ್ಥಾನ

04:18 AM Feb 17, 2019 | Team Udayavani |

ಕುಂದಾಪುರ: ಪಂಚಾಯತ್‌ ರಾಜ್‌ ಇಲಾಖೆಯ ಪಂಚತಂತ್ರ ತಂತ್ರಾಂಶದ ಮೂಲಕ ಹಾಕುವ ಇ-ಹಾಜರಾತಿಯಲ್ಲಿ ರಾಜ್ಯ ಮಟ್ಟದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. 
ಆದರೆ ಕೆಳಹಂತದ ಅಧಿಕಾರಿಗಳು ಈ ಸಾಧನೆಯನ್ನು ಶೇ.100ಕ್ಕೆ ಕೊಂಡೊಯ್ದರೆ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳು ಮಾತ್ರ ಬಳಸುತ್ತಿಲ್ಲ. ಹಾಗಾಗಿ ಕಡ್ಡಾಯ ಡಿಜಿಟಲ್‌ ಹಾಜರಾತಿ ಮೇಲಿನ ಸ್ತರದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.

Advertisement

ಪಾರದರ್ಶಕ ಕಾಯಿದೆಯನ್ವಯ ಈ ತಂತ್ರಾಂಶದಲ್ಲಿ ಅನೇಕ ಅನುಕೂಲಗಳಿವೆ. ನಾಗರಿಕರು ರಾಜ್ಯದ ಯಾವುದೇ ಜಿ.ಪಂ., ತಾ.ಪಂ., ಗ್ರಾ.ಪಂ.ಗಳ ಚಟುವಟಿಕೆಗಳ ಮಾಹಿತಿ ಅಂಗೈಯಲ್ಲೆ ಲಭ್ಯ. ಈ ಸಂಸ್ಥೆಗಳಲ್ಲಿನ ಸಿಬಂದಿಗಳ ಸಂಖ್ಯೆ, ಅವರ ಹಾಜರಾತಿ ವಿವರ, ಅನುದಾನ ಬಳಕೆ, ಪಂಚಾಯತ್‌ ಸೊತ್ತುಗಳು, ಕಾಮಗಾರಿ ಹಾಗೂ ಸದಸ್ಯರ ವಿವರಗಳು ಇದರಲ್ಲಿ ಲಭ್ಯ.

ಮಾಹಿತಿಯಿಲ್ಲ
ರಾಜ್ಯದಲ್ಲಿ 6,024 ಗ್ರಾ.ಪಂ.ಗಳಿದ್ದು, ಈ ಪೈಕಿ 5,650ರಲ್ಲಿ ಇ ಹಾಜರಾತಿ ಅಳವಡಿಕೆಯಾಗಿದ್ದರೆ, 4,052ರಲ್ಲಿ ಬಳಕೆಯಾಗುತ್ತಿದೆ. ಜ.30ರ ಮಾಹಿತಿಯಂತೆ ಉಡುಪಿ, ದ.ಕ., ಬೆಂಗಳೂರು ಗ್ರಾಮಾಂ ತರ, ಕೊಡಗು, ಮೈಸೂರು, ಉ.ಕ. ಜಿಲ್ಲೆಗಳನ್ನು ಬಿಟ್ಟರೆ ಇತರ ಬಹುತೇಕ ಜಿಲ್ಲೆಗಳ ಅಧಿಕಾರಿಗಳ ಹಾಜರಾತಿ ಮಾಹಿತಿ ಅಪ್‌ಡೇಟ್‌ ಆಗಿಲ್ಲ. 

ಪಂಚಾಯತ್‌ಗಳು
ಉಡುಪಿಯಲ್ಲಿ ಶೇ. 98, ದ.ಕ. ಶೇ.96 ಇದ್ದರೆ ಕಲಬುರ್ಗಿಯಲ್ಲಿ ಕನಿಷ್ಠ ಶೇ.10 ಇದೆ. ಕುಂದಾಪುರ ಶೇ.98, ಉಡುಪಿ ಶೇ.98, ಕಾರ್ಕಳ ಶೇ.94, ಸುಳ್ಯ ಶೇ.100, ಪುತ್ತೂರು ಶೇ.97, ಬಂಟ್ವಾಳ ಶೇ. 96, ಬೆಳ್ತಂಗಡಿ ಶೇ.95, ಮಂಗಳೂರು ಶೇ.94 ಹಾಜರಾತಿ ಇದೆ. 

ಕುಂದಾಪುರದ ಬೆಳ್ವೆ, ಉಡುಪಿಯ ಆವರ್ಸೆ, ಕಾರ್ಕಳದ ನೀರೆ, ಇರ್ವತ್ತೂರು, ಪುತ್ತೂರಿನ ಬಡಗನ್ನೂರು, ಬಂಟ್ವಾಳದ ಕಡೇಶ್ವಾಲ್ಯ, ಬರಿಮಾರು, ಬೆಳ್ತಂಗಡಿಯ ತಣ್ಣೀರುಪಂತ, ಬಾರ್ಯ, ಮಂಗಳೂರಿನ ಬೋಳಿಯಾರು, ತಲಪಾಡಿ, ಶಿರ್ತಾಡಿ ಪಂ.ಗಳ ಮಾಹಿತಿ ಅಪ್‌ಡೇಟ್‌ ಆಗಿಲ್ಲ. ಈ ಕುರಿತು ಮಾತನಾಡಿದ ಬೆಳ್ವೆ ಪಿಡಿಒ ಪ್ರಭಾಶಂಕರ ಪುರಾಣಿಕ್‌, ವಾರದಿಂದ ಇಂಟರ್ನೆಟ್‌ ಸಮಸ್ಯೆಯಿಂದ ಅಪ್‌ಡೇಟ್‌ ಆಗಿಲ್ಲ. ಇ -ಹಾಜರಾತಿಯ ಬಳಕೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದಿದ್ದಾರೆ.

Advertisement

ಇವರ ಕಥೆ ಬೇರೆಯೇ
ಇದಿಷ್ಟು ಕೆಳಹಂತದ ಅಧಿಕಾರಿಗಳದ್ದಾದರೆ, ತಾ.ಪಂ., ಜಿ.ಪಂ. ಅಧಿಕಾರಿ- ಸಿಬಂದಿಯದು ಬೇರೆ. ತಾ.ಪಂ. ಹಾಜರಾತಿಯಲ್ಲಿ ಉಡುಪಿ 18ನೇ ಸ್ಥಾನ, ದ.ಕ. 21ನೇ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ಉ.ಕ., ಚಿಕ್ಕಬಳ್ಳಾಪುರ ಜಿಲ್ಲೆಗಳ ತಾ.ಪಂ.ಗಳು ಶೇ.100ರಲ್ಲಿದ್ದರೆ, ಉಡುಪಿ ಶೇ.66, ದ.ಕ. ಶೇ.60  ಹಾಜರಾತಿ ತೋರಿಸುತ್ತಿವೆ. ಇಲ್ಲೂ  ಕಲಬುರಗಿ ಜಿಲ್ಲೆ ಕನಿಷ್ಠ ಶೇ.14ರಲ್ಲಿದೆ. ರಾಜ್ಯದ 176 ತಾ.ಪಂ.ಗಳ ಪೈಕಿ 169ರಲ್ಲಿ ಇ ಹಾಜರಾತಿ ವ್ಯವಸ್ಥೆ ಅಳವಡಿಸಿದ್ದು, ಜ.30ರಂದು 118 ತಾ.ಪಂ.ಗಳ ಮಾಹಿತಿ ಅಪ್‌ಡೇಟ್‌ ಆಗಿದೆ. 

ಅಸಡ್ಡೆ
ಎಲ್ಲ ಜಿ.ಪಂ.ಗಳಲ್ಲಿ ಇ-ಹಾಜರಾತಿ ಅಳವಡಿಸಿದ್ದರೂ ಅಧಿಕಾರಿಗಳ ಅಸಡ್ಡೆ ಎದ್ದುಕಾಣುತ್ತಿದೆ. ಏಕೆಂದರೆ ಗ್ರಾ.ಪಂ.ಗಳಂತೆ ಇವರಿಗೆ ಇಂಟರ್‌ನೆಟ್‌ ಸಮಸ್ಯೆ ಇಲ್ಲ. ಹಾಗಿದ್ದರೂ ಬೆಂಗಳೂರು, ಬೆಂ. ಗ್ರಾಮಾಂತರ, ಬೀದರ್‌, ಕೊಪ್ಪಳ ಮೊದಲಾದವು ಕನಿಷ್ಠ ಹಾಜರಾತಿ ತೋರಿಸುತ್ತಿವೆ. ದ. ಕನ್ನಡದ 91 ಮಂದಿಯ ಪೈಕಿ 26, ಉಡುಪಿಯ 62 ಮಂದಿಯ ಪೈಕಿ 26 ಮಂದಿಯ ಹಾಜರಾತಿ ಮಾತ್ರ ದಾಖಲಾಗಿದೆ. ಬಹುತೇಕ ಜಿ.ಪಂ. ಗಳಲ್ಲಿ ಅರ್ಧದಷ್ಟು ಅಧಿ ಕಾರಿ ಗಳೂ ಇದನ್ನು ಪಾಲಿಸುತ್ತಿಲ್ಲ ಎನ್ನುತ್ತದೆ ಪಂಚತಂತ್ರದ ಅಂಕಿಅಂಶಗಳು.

ನಿರ್ದೇಶಿಸಲಾಗಿದೆ
ಇ- ಹಾಜರಾತಿ ಹಾಕುವಂತೆ ಎಲ್ಲರಿಗೂ ಸೂಚಿಸಲಾಗಿದೆ. ಬಯೋಮೆಟ್ರಿಕ್‌ ಮೂಲಕ ಹಾಜರಾತಿ ಹಾಕುತ್ತಿದ್ದರೂ ತಂತ್ರಾಂಶದಲ್ಲಿನ ಹಿನ್ನಡೆಗೆ ಸ್ಪಷ್ಟ ಕಾರಣದ ಅರಿವಿಲ್ಲ. 
 ಸಿಂಧೂ ಬಿ. ರೂಪೇಶ್‌, ಉಡುಪಿ ಜಿ.ಪಂ. ಸಿಇಒ

ಕಾರಣ ಕೇಳಿ  ನೋಟಿಸ್‌
ಸಿಬಂದಿ ಕಚೇರಿಗೆ ತಡವಾಗಿ ಬರುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಡಿಸೆಂಬರ್‌ನಲ್ಲಿ ಕಾರಣ ಕೇಳಿ ನೋಟಿಸ್‌ ಕೊಡಲಾಗಿದೆ. ಫೆಬ್ರವರಿಯಿಂದ ಇ- ಹಾಜರಾತಿ ಆಧಾರದಲ್ಲೇ ವೇತನ ನೀಡುವುದಾಗಿ ತಿಳಿಸಲಾಗಿದೆ.
ಡಾ| ಆರ್‌. ಸೆಲ್ವಮಣಿ,  ದ.ಕ. ಜಿ.ಪಂ. ಸಿಇ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next