ಒಂದು ನಿರ್ದಿಷ್ಟಮಟ್ಟಕ್ಕೆ ತಲುಪಿದ ನೃತ್ಯಾಂಗನೆಯರು ಮುಂದೆ ವಿವಿಧ ಕಾರಣಗಳಿಂದಾಗಿ ನೃತ್ಯವನ್ನು ಮುಂದುವರಿಸಲಾದೆ ಚಡಪಡಿಸುವ ನಾಟಕದ ಸೂಕ್ಷ್ಮತೆ ಇಂದಿನ ಪರಿಸ್ಥಿತಿಗೂ ಸರಿ ಹೊಂದುವಂತೆ ಭಾಸವಾಗುತ್ತದೆ. ಈ ತುಮುಲವನ್ನು ನಿರ್ದೇಶಕರು ನಾಟಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.
ಇತ್ತೀಚೆಗೆ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರದರ್ಶಿತವಾದ “ನೃತ್ಯಗಾಥ’ ಏಕವ್ಯಕ್ತಿ ನೃತ್ಯರೂಪಕ ಹೆಸರೇ ಸೂಚಿಸುವಂತೆ ಹೆಸರಾಂತ ನೃತ್ಯಗಾತಿಯರ ಜೀವನಕಥೆಯ ಒಂದು ಸುಂದರ ಗುತ್ಛ. ಪಂಪ ಮಹಾಕವಿಯ ಆದಿಪುರಾಣದ ನೀಲಾಂಜನೆಯ ನಾಟ್ಯ ಕಾವ್ಯ ಭಾಗದ ಕಥಾನಕದೊಂದಿಗೆ ಪ್ರಾರಂಭವಾಗುವ ಸಂಗೀತ-ನೃತ್ಯರೂಪಕ ಜೈನ ತೀರ್ಥಂಕರ ವೃಷಭ ದೇವನ ಆಸ್ಥಾನದಲ್ಲಿ ನೀಲಾಂಜನೆಯ ನಾಟ್ಯದೊಂದಿಗೆ ಅನಾವರಣಗೊಳ್ಳುತ್ತದೆ. ನೃತ್ಯಾಂಗನೆ ನೀಲಾಂಜನೆ ತನ್ನ ಸಾಧನೆಯ ಹಾದಿಯಲ್ಲಿ ಏನೇ ಎಡರು ತೊಡರುಗಳು ಎದುರಾದರೂ ಅವನ್ನು ಲೆಕ್ಕಿಸದೆ ತನ್ನ ಗಮ್ಯವನ್ನು ಮುಟ್ಟಿದ ಸಾಧಕಿ. ನೃತ್ಯ ಜೀವನ ಮುಂದುವರಿಸುವಲ್ಲಿ ಆಕೆ ಊಹಿಸಿ ವ್ಯಕ್ತಪಡಿಸುವ ಭಾವನೆಗಳು ಈ ಸಂಗೀತ ನೃತ್ಯ ನಾಟಕದ ನಿರ್ದೇಶಕರು ಹೇಳುವಂತೆ ಪ್ರತಿಯೊಂದು ನೃತ್ಯಾಂಗನೆಯು ಎದುರಿಸಬೇಕಾದ ಸವಾಲುಗಳು ಎನ್ನುವುದು ಸಾರ್ವಕಾಲಿಕ ಸತ್ಯ. ನೃತ್ಯ ಪ್ರದರ್ಶಿಸುತ್ತಿದ್ದಾಗಲೇ ರಂಗದ ಮೇಲೆಯೇ ಕುಸಿದು ವಿಧಿವಶಳಾಗುವ ನೀಲಾಂಜನೆ ಪ್ರಾಯಶಃ ಅಪರೂಪವೆನಿಸುವ ಘಟನೆ.
ಮುಂದೆ ಕಲಾವಿದೆ ಪ್ರದರ್ಶಿಸಿದ ನೃತ್ಯ ಭಾಗ ನಾಟ್ಯರಾಣಿ ಶಾಂತಲಾಳ ನೃತ್ಯಾಸಕ್ತಿಯ ಕಿರುಪರಿಚಯವಾಗಿ ಮೂಡಿ ಬಂತು. ನೃತ್ಯಗಾತಿಯರ ವಂಶಸ್ಥಳಾಗಿ ನೃತ್ಯ ಪರಂಪರೆಯಲ್ಲಿ ಬೆಳೆದು ಬಂದ ಶಾಂತಲೆ ಈ ನೃತ್ಯದಿಂದಾಗಿಯೇ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಪಟ್ಟದ ರಾಣಿಯಾಗಿ ರಾಜನ ಅಂತಃಪುರಕ್ಕೆ ಪ್ರವೇಶ ಪಡೆದದ್ದು ಇತಿಹಾಸ. ಪ್ರಥಮ ಸಮಾಗಮದ ರಾತ್ರಿಯೇ ಶಾಂತಲಾ ತನ್ನ ಪತಿ ವಿಷ್ಣುವರ್ಧನನ್ನು ಅನುನಯದಿಂದ ಆಕೆಯ ಮಹಾಗುರು ಜಕ್ಕಣಾಚಾರ್ಯರಲ್ಲಿಗೆ ಮಾರುವೇಷದಿಂದ ಕರೆದುಕೊಂಡು ಹೋಗುವಾಗಿನ ಸಂಭಾಷಣೆಯನ್ನು ಕಲಾವಿದೆ ಕು| ಅನಘಶ್ರೀ ಸೊಗಸಾಗಿ ಅಭಿನಯಿಸಿದರು. ಆ ನಡುರಾತ್ರಿಯೂ ಶಿಲ್ಪ ರಚನೆಯಲ್ಲಿ ಧ್ಯಾನಸ್ಥರಾಗಿದ್ದ ಜಕ್ಕಣಚಾರ್ಯರಿಗೆ ತಾಂಬೂಲ ನೀಡುವ ಕಾಯಕ ತಾನು ಕೈಗೊಂಡು ತಾಂಬೂಲರಸ ಉಗಿಯುವ ಪೀಕದಾನಿಯನ್ನು ರಾಜನ ಕೈಗಿತ್ತು ಶಿಲ್ಪ ರಚನೆ ಸರಾಗವಾಗಿ ನಡೆಯುವಂತೆ ಮಾಡುತ್ತಾಳೆ. ಈ ಸನ್ನಿವೇಶದಲ್ಲಿ ಮುಂದಿನ ಸಂಭಾಷಣೆಯಲ್ಲಿ ತಾಂಬೂಲದ ಪೆಟ್ಟಿಗೆ ರಾಜನ ಕೈಗೆ ಬಂದು ಪೀಕದಾನಿ ಶಾಂತಲೆಗೆ ಹಸ್ತಾಂತರವಾಗುವುದು ಕಲಾವಿದೆಯ ಭಾವಪರವಶತೆಗೆ ಸಾಕ್ಷಿ. ಮಹಾರಾಣಿ ಶಾಂತಲೆಯ ಮಾತಿಗೆ ಕಟ್ಟುಬಿದ್ದು ಜಕಣಚಾರ್ಯರು ಆಕೆಯನ್ನು ರೂಪದರ್ಶಿಯಾಗಿಟ್ಟುಕೊಂಡು ಜೀವಂತ ಕನ್ನಿಕೆಯಂತೆ ಭಾಸವಾಗುವ ಮುಕುರ ಮುಗ್ದೆ, ಶುಕಭಾಷಿಣಿ ಮುಂತಾದ ಶಿಲ್ಪ ಕಲಾ ಸಾಕಾರಗೊಂಡು ಇಂದಿಗೂ ನೋಡುಗರ ಹೃನ್ಮನ ತಣಿಸುತ್ತಿರುವುದಕ್ಕೆ ನಾಟ್ಯರಾಣಿ ಶಾಂತಲೆಯೇ ಕಾರಣವಾದರೂ ವಿಷ್ಣುವರ್ಧನನ ಪಾತ್ರ ಇದರಲ್ಲಿ ಹಿರಿದಾದುದು. ನೃತ್ಯಾಂಗನೆಯಾಗಿದ್ದ ನಾಟ್ಯರಾಣಿ ಶಾಂತಲೆ ಮಹಾರಾಣಿ ಶಾಂತಲೆಯಾಗುವ ಸಂಕ್ರಮಣ ಕಾಲದ ಮನೋದಿಷ್ಟವನ್ನು ಅನಘಶ್ರೀ ಸೊಗಸಾಗಿ ಅಭಿನಯಿಸಿದ್ದಾರೆ.
ಮುಂದೆ ಖ್ಯಾತ ಮುಜ್ರಾ ನರ್ತಕಿ ಉಮ್ರಾನ್ ಜಾನ್‌ಕಥೆ ಬರುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ಲಕೊ ಘರಾನಾ ಸೇರಿದ ಬಡ ಮುಸ್ಲಿಂ ಯುವತಿ ಪ್ರಾರಂಭದಲ್ಲಿ ಆಘಾತಕ್ಕೊಳಗಾದರೂ ನಂತರ ನೃತ್ಯ ವೃತ್ತಿಯನ್ನು ಪ್ರೀತಿಸಿ ಅದರಲ್ಲೆ ಸಾರ್ಥಕತೆ ಕಂಡುಕೊಳ್ಳುವ ಅಪೂರ್ವ ನೃತ್ಯಗಾತಿಯ ಮನೋಜ್ಞ ಕತೆಯಿದು. ದೇಹದಲ್ಲಿ ಉಸಿರಿರುವ ತನಕ ನೃತ್ಯವನ್ನು ತನ್ನ ಉಸಿರಾಗಿಸಿಕೊಂಡ ಉಮ್ರಾನ್ ಜಾನ್ ಪಾತ್ರವನ್ನು ಕಲಾವಿದೆ ಹೃದಯಂಗಮವಾಗಿ ಅಭಿನಯಿಸುವುದರೊಂದಿಗೆ ಸಾಂದರ್ಭಿಕವಾಗಿ ಸುಶ್ರಾವ್ಯವಾಗಿ ಹಾಡಿ ಉತ್ತಮ ಸಂಗೀತಗಾರ್ತಿ ಎನ್ನುವುದನ್ನು ಸಾಬೀತುಪಡಿಸಿದರು. ಏಕವ್ಯಕ್ತಿ ನಾಟಕ ಪ್ರದರ್ಶನ ಒಂದು ಕಠಿಣ ಸವಾಲು. ಅದನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡಿದ ನಿರ್ದೇಶಕ ಡಾ| ಶ್ರೀಪಾದ ಭಟ್ ಪ್ರಯತ್ನ ಮೆಚ್ಚುವಂಥದ್ದು. ನೀಲಾಂಜನೆ ಶಾಂತಲೆಯಾಗಿ ಮುಂದೆ ಉಮ್ರಾನ್ ಜಾನ್‌ಳಾಗಿ ಪರಿವರ್ತನೆಯಾಗುವ ಪ್ರಕ್ರಿಯೆ ಅತ್ಯಂತ ನಾಜೂಕಾಗಿ,ಸಾಂಕೇತಿಕವಾಗಿ ಮೂಡಿ ಬರುವಲ್ಲಿ ನಿರ್ದೇಶಕರ ಕೈಚಳಕ ಕಂಡುಬಂತು. ಧ್ವನಿಮುದ್ರಿತ ಸಂಗೀತದ ಗುಣಮಟ್ಟ ಸುಧಾರಿಸಿದರೆ ನಾಟಕ ಇನ್ನಷ್ಟು ಸೊಗಸಾಗಿ ಮೂಡಿ ಬರಲು ಸಹಕಾರಿಯಾಗಬಹುದು.
ಜನನಿ ಭಾಸ್ಕರ್ ಕೊಡವೂರು