Advertisement
ಅದು ಉತ್ತರಾಖಂಡದ ಮಧ್ಯಮ ವರ್ಗದ ಕುಟುಂಬ. ತಂದೆ ರಾಜೇಂದ್ರ ಡೋಗ್ರಾ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದರೆ, ತಾಯಿ ಕುಂಕುಮ ಡೋಗ್ರಾ ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿದ್ದರು. ಆ ಮನೆಯ ಏಕೈಕ ಮಗಳಾಗಿ ಹುಟ್ಟಿದ್ದು ಆರತಿ ಡೋಗ್ರಾ. 1979ರ ಜುಲೈಯಲ್ಲಿ ಆರತಿ ಜನಿಸಿದಾಗ, ಮಗಳು ಹುಟ್ಟಿದಳು ಎನ್ನುವ ಸಂತೋಷದಲ್ಲಿ ರಾಜೇಂದ್ರ ಅವರ ಕುಟುಂಬವಿತ್ತು. ಆದರೆ ವೈದ್ಯರು ಮಾತ್ರ ಆ ಕುಟುಂಬದ ಖುಷಿಯನ್ನು ಜಾಸ್ತಿ ಸಮಯ ಉಳಿಯಲು ಬಿಟ್ಟಿರಲಿಲ್ಲ. “ನಿಮ್ಮ ಮಗಳಿಗೆ ಸಮಸ್ಯೆಯಿದೆ. ಅವಳು ಎಲ್ಲರಂತೆ ಬೆಳೆಯಲಾರಳು. ಅವಳನ್ನು ನೀವು ಅಂಗವಿಕಲರ ಶಾಲೆಯಲ್ಲೇ ಓದಿಸಬೇಕಾಗುತ್ತದೆ’ ಎನ್ನುವ ಅಘಾತಕಾರಿ ವಿಚಾರವನ್ನು ಹೇಳಿದ್ದರು.
Related Articles
Advertisement
ಸ್ನಾತಕೋತ್ತರ ಪದವಿಗೆ ಬಂದರೂ ಆರತಿ ಅವರು ಬೆಳೆದಿದ್ದು 3 ಅಡಿ ಆರು ಇಂಚು ಎತ್ತರವಷ್ಟೇ. ಈ ವಿಚಾರವಾಗಿ ಅವರು ಅನೇಕ ಬಾರಿ ಸಮಾಜದೆದುರು ತಲೆ ತಗ್ಗಿಸಬೇಕಾಯಿತು. ಕುಳ್ಳಿ ಎಂದು ಚುಡಾಯಿಸುವವರ ಸಂಖ್ಯೆಯೂ ಕಡಿಮೆಯಿರಲಿಲ್ಲ. ಆದರೆ ತಂದೆ, ತಾಯಿ ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ನೋಡಿ, ಆರತಿ ಮತ್ತೆ ಮತ್ತೆ ಮನಸ್ಸಿಗೆ ಸಮಾಧಾನ ಹೇಳಿ ಮುನ್ನಡೆಯುತ್ತಿ ದ್ದರು. ಜೀವನದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಕನಸು ಕಟ್ಟಿ ಕೊಂಡಿದ್ದರು. ಡೆಹ್ರಾಡೂನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಸಮಯದಲ್ಲಿ ಡೆಹ್ರಾಡೂನ್‌ನ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾದ ಮನೀಶಾ ಪಾನ್ವಾರ್‌ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರನ್ನು ಭೇಟಿಯಾದ ಆರತಿಗೆ ತಾನೂ ಐಎಎಸ್ ಮಾಡಬೇಕೆಂಬ ಆಸೆ ಹುಟ್ಟಿಕೊಂಡಿತು.
ಆರತಿ ಅವರ ಆಸೆ ಬೇರೆಯವರ ಕಿವಿಗೆ ತಮಾಷೆಯಾಗಿ ಕೇಳಿದ್ದಂತೂ ಸುಳ್ಳಲ್ಲ. “ನೀನಿರುವ ಎತ್ತರಕ್ಕೆ ಐಎಎಸ್ ಅಧಿಕಾರಿ ಯಾಗ ಬೇಕೇ?’ ಎಂದು ಆಡಿಕೊಂಡವರು ಹಲವರು. ಆದರೆ ಆಗಲೂ ಆರತಿ ಆಸೆಯನ್ನು ಬಿಡಲಿಲ್ಲ. ಐಎಎಸ್ ಪರೀಕ್ಷೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದರು. 2005ರಲ್ಲಿ ಮೊದ ಲನೇ ಬಾರಿಗೆ ಐಎಎಸ್ ಪರೀಕ್ಷೆ ಬರೆದರು. ಆ ಪರೀಕ್ಷೆಗಾಗಿ ಅವರು ಅದೆಷ್ಟು ಶ್ರಮ ಹಾಕಿದ್ದರೆಂದರೆ ಮೊದಲನೇ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರ ಜತೆ ದೇಶಕ್ಕೆ 56ನೇ ರ್‍ಯಾಂಕ್ ಬಂದರು. ರಾಜಸ್ಥಾನದಲ್ಲಿ ತರಬೇತಿ ಪಡೆದು, ಐಎಎಸ್ ಅಧಿಕಾರಿಯಾಗಿ ಹೊರಬಂದರು.
ಸಾಮಾನ್ಯ ಮನುಷ್ಯರ ಅರ್ಧದಷ್ಟು ಎತ್ತರವಿದ್ದ ಆರತಿ ಐಎಎಸ್ ಅಧಿಕಾರಿಯಾಗುದುದು ದೊಡ್ಡ ಸಾಧನೆಯಾಗಿದ್ದು. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎನ್ನುವ ಗಾದೆಯನ್ನು ನಿಜ ಮಾಡಿ ಎಲ್ಲರೆದುರು ನಿಂತಿದ್ದರು ಅವರು.
ಐಎಎಸ್ ಅಧಿಕಾರಿ ಸ್ಥಾನಕ್ಕೇರಿದ ಮಾತ್ರಕ್ಕೆ ಅವರ ಕನಸುಗಳು ಪೂರ್ಣಗೊಂಡಿರಲಿಲ್ಲ. ಸಮಾಜದ ಸುಧಾರಣೆಗಾಗಿ ತಾನು ಏನನ್ನಾದರೂ ಮಾಡಲೇಬೇಕೆಂದು ಅವರ ಮನಸ್ಸು ತುಡಿಯುತ್ತಲೇ ಇತ್ತು. ರಾಜಸ್ಥಾನದಲ್ಲಿ ಜೋಧ್‌ಪುರ ವಿದ್ಯುತ್ ವಿತ್ರಾಣ ನಿಗಮದ ಮೊದಲ ಮಹಿಳಾ ಐಎಎಸ್ ಅಧಿಕಾರಿಯಾಗಿ ಕೆಲಸ ಆರಂಭಿಸಿದರು. ಅಜ್ಮೇರ್ ನ ಜಿಲ್ಲಾ ಉಪ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸಿದರು. ಬಿಕನೆರ್ ಮತ್ತು ಬುಂಡಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ, ಅಜ್ಮೇರ್ ನ ಜಿಲ್ಲಾ ಚುನಾವಣ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಜಂಟಿ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದರು.
ಸಮಾಜ ಸುಧಾರಣೆಯತ್ತ ಆರತಿ: ಬಿಕನೆರ್‌ನಲ್ಲಿ ಸೇವೆ ಸಲ್ಲಿಸುವಾಗ ಆರತಿ ಅವರು “ಬಂಕೋ ಬಿಕಾನೋ’ ಹೆಸರಿನ ಅಭಿಯಾನ ಆರಂಭಿಸಿದರು. ಸ್ವತ್ಛತೆಯ ಬಗ್ಗೆ ಹಳ್ಳಿ ಹಳ್ಳಿಯ ಜನರಿಗೆ ಅರಿವು ಮೂಡಿಸುವ ಅಭಿಯಾನ ಅದಾಗಿತ್ತು. ಆ ಅಭಿಯಾನದಿಂದಾಗಿ ಒಟ್ಟು 195 ಗ್ರಾಮ ಪಂಚಾಯತ್‌ಗಳಲ್ಲಿನ ಜನರು ನೂರಾರು ಶೌಚಾಲಯಗಳನ್ನು ತಾವೇ ನಿರ್ಮಿಸಿಕೊಂಡರು. ಈ ಅಭಿಯಾನವನ್ನು ಸರಕಾರದ ಅಧಿಕಾರಿಗಳು ಮೊಬೈಲ್ ಆ್ಯಪ್ ಮೂಲಕ ನಿರ್ವಹಿಸಿದರು. ಈ ಅಭಿಯಾನ ಎಷ್ಟರ ಮಟ್ಟಿಗೆ ಪ್ರಸಿದ್ಧವಾಯಿತೆಂದರೆ, ಅನಂತರದ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಯಲ್ಲೂ ಇದೇ ರೀತಿಯ ಅಭಿಯಾನ ಜಾರಿಗೆ ಬಂದವು. ಈ ಯೋಜನೆಯ ಬಗ್ಗೆ ಅರಿತುಕೊಂಡು, ತಮ್ಮ ದೇಶದಲ್ಲೂ ಅದನ್ನು ಜಾರಿಗೆ ತರಲೆಂದು ಬ್ರಿಟನ್, ಅಮೆರಿಕ, ಅರಬ್ ಸಂಯುಕ್ತ ಸಂಸ್ಥಾನ, ಥೈಲ್ಯಾಂಡ್, ಭೂತಾನ್, ನೇಪಾಲ, ಬಾಂಗ್ಲಾದೇಶ ಸೇರಿ ಅನೇಕ ದೇಶದ ಪ್ರತಿನಿಧಿಗಳು ಜಿಲ್ಲೆಗೆ ಬಂದು ಅಭಿಯಾನದ ಬಗ್ಗೆ ಮಾಹಿತಿ ಪಡೆದು ಹೋಗಿದ್ದಾರೆ.
ಡಾಟರ್ಸ್ ಫಾರ್ ಡಾಕ್ಟರ್ಸ್: ಈ ಅಭಿಯಾನವನ್ನು ಆರತಿ ಅವರು ಬಿಕನೆರ್ ಜಿಲ್ಲೆಯಲ್ಲಿನ ವೈದ್ಯರಿಗಾಗಿಯೇ ಆರಂಭಿಸಿ ದರು. ವೈದ್ಯರು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಜನನವಾಗುವ ಅತ್ಯಂತ ಬಡ ಹೆಣ್ಣು ಮಕ್ಕಳು ಅಥವಾ ಆಸ್ಪತ್ರೆಗೆ ಬರುವ ಅನಾಥ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತೆ ವೈದ್ಯರಿಗೆ ಪ್ರೇರೇಪಿಸಿದರು. ಅದರ ಪರಿಣಾಮವಾಗಿ 40 ವೈದ್ಯರು 40 ಬಡ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು, ಅವರ ಊಟ, ವಸತಿ, ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡರು. ವಿಶೇಷವೆಂದರೆ ಈಗಲೂ ಈ ಅಭಿಯಾನ ಚಾಲ್ತಿಯಲ್ಲಿದೆ. ಈಗಲೂ ಬಿಕನೆರ್ ಜಿಲ್ಲೆಯ ಹತ್ತಾರು ವೈದ್ಯರು ಬಡ ಹೆಣ್ಣು ಮಕ್ಕಳನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳುತ್ತಿದ್ದಾರೆ.
ಆರತಿ ಅವರು ಮೊದಲು ಕೆಲಸ ಆರಂಭಿಸಿದ ಜೋಧ್‌ಪುರ ದಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಅವರು ಹೊಂದಿದ್ದರು. ಅದಕ್ಕಾಗಿ ಜೂನಿಯರ್ ಎಂಜಿನಿಯರ್‌ನಿಂದ ಸೀನಿಯರ್ ಎಂಜಿನಿಯರ್ ವರೆಗೂ ಎಲ್ಲರೂ ಕಟ್ಟುನಿಟ್ಟಿನ ಕೆಲಸ ನಿರ್ವಹಿಸುವಂತೆ ಅವರು ಮಾಡಿದರು. ಅವರ ಅಧಿಕಾರದ ವೇಳೆಯಲ್ಲಿ ಜಿಲ್ಲೆಯಲ್ಲಿ 3,27,819 ಎಲ್‌ಇಡಿ ಬಲ್ಬ್ ಗಳನ್ನು ಹಂಚಲಾಯಿತು.
ತಾವೊಬ್ಬ ಅಂಗವಿಕಲರಲ್ಲದಿದ್ದರೂ ಸಮಾಜದ ಕಡೆಯಿಂದ ಅಂಗವಿಕಲ ಎನ್ನುವ ರೀತಿಯಲ್ಲಿ ಕಾಣಿಸಿಕೊಂಡಿದ್ದ ಆರತಿ ಅವರಿಗಾಗಿ ವಿಶೇಷ ಕೆಲಸಗಳನ್ನು ನಡೆಸಿದರು. ಅಜ್ಮೇರ್ ನಲ್ಲಿ ಚುನಾವಣೆಯಲ್ಲಿ ಅಂಗವಿಕಲರೂ ಮತದಾನ ಮಾಡಲು ಸಹಾಯವಾಗಲಿ ಎಂದು ಚುನಾವಣೆಯ ದಿನದಲ್ಲಿ ಅವರಿಗಾಗಿ “ಅಂಗವಿಕಲರ ರಥ’ಗಳನ್ನು ನಿಯೋಜಿಸಿದರು. ಇದರಿಂದಾಗಿ 17,000 ಅಂಗವಿಕಲರು ಮತದಾನ ಮಾಡುವಂತಾಯಿತು. ಅದೇ ಮೊದಲ ಬಾರಿಗೆ ಜಿಲ್ಲೆಯ ಶೇ. 59.88 ಅಂಗವಿಕಲರು ಮತದಾನ ಮಾಡುವಂತಾಯಿತು.
ಹೀಗೆ ಆರತಿ ಅವರ ಬಗ್ಗೆ ವರ್ಣಿಸಲು ಸಾಕಷ್ಟು ಸಾಧನೆಗಳಿವೆ. ಅವರ ಸಾಧನೆಗಳನ್ನು ಗುರುತಿಸಿ ಅನೇಕ ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ. ಅತೀ ಹೆಚ್ಚು ಅಂಗವಿಕಲರ ಮತದಾನ ಮಾಡಿಸಿದ ಆರತಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2019ರಲ್ಲಿ ರಾಷ್ಟ್ರ ಪ್ರಶಸ್ತಿ ಕೊಟ್ಟು ಗೌರವಿಸಿದರು. 2018ರಲ್ಲಿ “ಡಾಟರ್ಸ್ ಆರ್ ಪ್ರೀಶಿಯಸ್’ ತಲೆಬರಹದಡಿಯಲ್ಲಿ ಜೋಧ್‌ಪುರದಲ್ಲಿ ನಡೆದ ಆರೋಗ್ಯ ಶೃಂಗಸಭೆಯಲ್ಲೂ ಆರತಿ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿ, ಸಮ್ಮಾನಿಸಿ ಗೌರವಿಸಲಾಯಿತು. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಯಾಗಿರುವ ವಸುಂಧರಾ ರಾಜೆ ಸಿಂಧಿಯಾ ಅವರಿಗೆ ಆರತಿ ಅವರ ಅಸಾಮಾನ್ಯ ಸಾಧನೆಗಳಿಂದಲೇ ಹತ್ತಿರವಾಗಿದ್ದರು. ರಾಜಸ್ಥಾನದ ಈಗಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರಧಾನಿ ನರೇಂದ್ರ ಮೋದಿಯವರೂ ಆರತಿ ಅವರನ್ನು ಕೊಂಡಾಡಿದ್ದಾರೆ. ಎಷ್ಟೋ ವೇದಿಕೆಗಳಲ್ಲಿ ಭಾಷಣ ಮಾಡುವಾಗ ಆರತಿಯವರ ಸ್ಫೂರ್ತಿದಾಯಕ ಕಥೆಯನ್ನೂ ವಿವರಿಸಿದ್ದಾರೆ.
ಆರತಿ ಅವರ ತಂದೆ ತಾಯಿಗೆ ಗಂಡು ಮಗು ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದ ಹಲವರು, ಆರತಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದಾಗ, “ಕೊನೆಗೂ ನಿಮಗೆ ಮಗನಿಲ್ಲ ಎನ್ನುವ ಕೊರಗು ದೂರ ಹೋದಂತಾಯಿತು’ ಎಂದಿದ್ದರಂತೆ. ಅದಕ್ಕೆ ನಗುತ್ತಾ ಉತ್ತರಿಸಿದ್ದ ರಾಜೇಂದ್ರ ದಂಪತಿ, “ನಮಗೆ ಗಂಡು ಮಗುವಿಲ್ಲ ಎನ್ನುವ ಕೊರತೆ ಎಂದೂ ಇರಲಿಲ್ಲ. ಆರತಿ ಹುಟ್ಟಿದಾಗಿನಿಂದಲೂ ನಮಗೆ ಮಗ ನಾಗಿಯೇ ಇದ್ದಳು’ ಎಂದಿದ್ದರು. ನಿಜಕ್ಕೂ ಆರತಿ ಅವರ ಜೀವನದಲ್ಲಿ ಆರತಿ ಅವರ ಜತೆಯಲ್ಲೇ ಅವರ ತಂದೆ-ತಾಯಿಯೂ ಕೋಟ್ಯಂತರ ಮಂದಿಗೆ ಆದರ್ಶವಾಗಿದ್ದಾರೆ.
– ಮಂದಾರ ಸಾಗರ