ಯಶೋವರ್ಮ ಎಂಬ ಹೆಸರಲ್ಲೇ ಯಶಸ್ಸನ್ನು ಸೂಚಿಸುವ ಇವರು ಇವರ ಯಶಸ್ಸಿನ ಜೊತೆ ಜೊತೆ ವಿದ್ಯಾರ್ಥಿಗಳ, ಉಪನ್ಯಾಸಕರ, ಹಾಗೂ ತನ್ನ ಜೊತೆಗಾರರ ಯಶಸ್ಸಿಗೂ ಕಾರಣಿಕರ್ತರಾದವರು. ಆದರೆ ಇಂದೇಕೋ ಅವರ ಬಗ್ಗೆ ಹೇಳಲು ಮನ ಅಳುಕುತ್ತಿದೆ ಇದಕ್ಕೆ ಕಾರಣ ಇಂದು ಅವರು ನಮ್ಮನ್ನೆಲ್ಲ ಅಗಲಿರುವುದೇ.
ಎಸ್. ಡಿ. ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಇದೀಗ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇವರ ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ. ಮುಗ್ದ ಮನಸ್ಸು, ಮಗುವಿನಂತ ನಗು, ಉದರ ಮನೋಭಾವ, ಶಿಸ್ತಿನ ಸಿಪಾಯಿ ಹೀಗೆ ಜಗತ್ತಿನ ಎಲ್ಲಾ ಒಳ್ಳೆಯ ಗುಣಗಳನ್ನು ತನ್ನಲ್ಲಿ ರೂಢಿಸಿಕೊಂಡದ್ದ ವ್ಯಕ್ತಿ ಇವರು.
ಯಶೋವರ್ಮ ಸರ್ ಬಂದರು ಎಂದರೆ ನಮಗೆ ಮನದೊಳಗೆ ಭಯ, ಸುತ್ತಲೂ ಮೌನ, ಎಲ್ಲರ ಕಣ್ಣು ಅವರನ್ನು ನೋಡಲು, ಅವರಿಗೆ ಕೈಯೆತ್ತಿ ನಮಸ್ಕರಿಸಲು ಕಾಯುತ್ತಿರುತ್ತದೆ. ಆಗಾಗ ಕಾಲೇಜಿನ ರೌಂಡಿಗ್ ಗೆ ಬರುವ ಇವರು ಯಾರಿಗೂ ಸೂಚನೆ ನೀಡದೆ ತರಗತಿಗೂ ಬರುತ್ತಿದ್ದರು. ತರಗತಿಗೆ ಬಂದರೆ ಹತ್ತಾರು ಪ್ರಶ್ನೆ ಕೇಳಿ ನಮ್ಮನೆ ಒಮ್ಮೆ ಗೊಂದಲಕ್ಕೆ ಸಿಲುಕಿಸಿ, ಕೊನೆಗೆ ನಮಗೆ ಧೈರ್ಯ ಹೇಳಿ ಹೋಗುತ್ತಿದ್ದರು.
ಒಮ್ಮೆ ನಾನು ಗ್ರಂಥಾಲಯದಲ್ಲಿ ಕುಳಿತು ಪುಸ್ತಕ ಓದುತ್ತಿರುವಾಗ ಒಮ್ಮೆಲ್ಲೇ ಹತ್ತಿರ ಬಂದು ನೀನು ಯಾವ ತರಗತಿ? ನಿನ್ನ ಊರು ಯಾವುದು? ನೀನು ಯಾವ ಕಾರಣಕ್ಕೆ ನಮ್ಮ ಕಾಲೇಜಿಗೆ ಬಂದೆ? ಹೀಗೆ ಒಂದರ ಹಿಂದೆ ಒಂದು ಬಾಣಗಳಂತೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು. ಅವರ ಆ ಗತ್ತು ಹಾಗೂ ಸದಾ ಮುಖದಲ್ಲಿ ಇರುವ ಮಂದಹಾಸ ನಮ್ಮಲ್ಲಿನ ಭಯವನ್ನು ದೂರಮಾಡಿ ನಮ್ಮವರ ಜೊತೆಗೆ ನಾವು ಮಾತನಾಡುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡಿಸಿತ್ತು.
ಅವರ ಗಟ್ಟಿತನ ಹಾಗೂ ಸಮಯಪ್ರಜ್ಞೆ ನಮ್ಮಲ್ಲಿ ನಾವು ರೂಡಿಸಿಕೊಳ್ಳಬೇಕಾದ ಮೊದಲ ಅಂಶವಾಗಿದೆ. ಅವರಿಡುವ ಪ್ರತಿಯೊಂದು ಹೆಜ್ಜೆಯು ನಮಗೆ ಆದರ್ಶಪ್ರಾಯವಾದದ್ದು. ಶಿಕ್ಷಣ ಸಂಸ್ಥೆಯ ಜೊತೆ ಜೊತೆಗೆ ಅವರಿಗಿದ್ದ ಪರಿಸರ ಕಾಳಜಿ, ಪರಿಸರ ಪ್ರೀತಿ ನಮಗೆಲ್ಲ ಒಂದು ಒಳ್ಳೆಯ ಸಂದೇಶವಾಗಿತ್ತು. ತಮ್ಮ ಕೊನೆಯ ಉಸಿರು ಇರುವವರೆಗೂ ಶಿಕ್ಷಣ ಸಂಸ್ಥೆಯ ಬಗೆಗೆ ಹೊಂದಿದ್ದ ಒಲವು ನಮಗೆ ಜೀವನ ಪಾಠವನ್ನು ಕಲಿಸಿದೆ.
ಯಶೋವರ್ಮ ಸರ್ ಪ್ರತಿ ಬಾರಿ ಸಿಕ್ಕಾಗವೂ, ಅವರ ಮಾತು, ಭಾಷಣ ಕೇಳಿದಾಗವೂ ಮನದ ಒಂದು ಮೂಲೆಯಲ್ಲಿ ಆದರೆ ಅವರ ತರ ಆಗಬೇಕು ಅನ್ನಿಸುತ್ತಿತ್ತು. ವಿದ್ಯಾರ್ಥಿಸ್ನೇಹಿ ಆಗಿದ್ದ ಅವರು ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿ ವ್ಯಕ್ತಿ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತಿದ್ದ ಅವರು ನಮ್ಮನ್ನು ಅಗಲಿದ್ದು ನಮಗೆಲ್ಲ ತುಂಬಲಾರದ ನಷ್ಟವೇ ಸರಿ…
ಮಧುರ ಎಲ್ ಭಟ್ಟ
ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ