ಹುಬ್ಬಳ್ಳಿ: ವಿವಿಧ ಬೀಜ-ಕೃಷಿ ಉತ್ಪನ್ನಗಳಿಂದ ಜೈವಿಕ ಇಂಧನ ಹಾಗೂ ಎಥನಾಲ್ ತಯಾರಿಸಲಾಗುತ್ತಿದೆ. ಆದರೆ ಹರಕೆಗೆಂದು ದೇವರ ಮೂರ್ತಿಗಳ ಮೇಲೆ ಸುರಿದ ಹಾಗೂ ಚಿಪ್ಸ್ ಇನ್ನಿತರ ಕುರುಕಲು ತಿಂಡಿಗೆ ಬಳಸಿದ ಅಡುಗೆ ಎಣ್ಣೆಯಿಂದ ಜೈವಿಕ ಡೀಸೆಲ್ ತಯಾರಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ಅರಣ್ಯ ಕಾಲೇಜು ಇಂತಹ ಸಾಧನೆ ತೋರಿದೆ. ತ್ಯಾಜ್ಯ ರೂಪದ ಅಡುಗೆ ಎಣ್ಣೆ ಬಳಸಿ ಅರಣ್ಯ ಕಾಲೇಜಿನ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ತಯಾರಿಸಿದ ಜೈವಿಕ ಡೀಸೆಲ್ 50 ರೂ.ಗೆ ಒಂದು ಲೀಟರ್‌ನಂತೆ ಮಾರಾಟವಾಗುತ್ತಿದೆ.
ಶಿರಸಿಯ ಅರಣ್ಯ ಕಾಲೇಜಿನಲ್ಲಿ ಹೊಂಗೆ, ಬೇವು, ಹಿಪ್ಪೆ, ಜಟ್ರೋಫ, ಸಿಮರೂಬ, ನಾಗಸಂಗಪಿಗೆ, ಸುರಹೊನ್ನೆ ಮೊದಲಾದ ಬೀಜಗಳಿಂದ ಜೈವಿಕ ಇಂಧನ ತಯಾರಿಸಲಾಗುತ್ತಿತ್ತು. ಬೀಜಗಳ ಕೊರತೆಯಿಂದ ಪರ್ಯಾಯ ಹುಡುಕಾಟದಲ್ಲಿದ್ದ ಅರಣ್ಯ ಕಾಲೇಜು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ತ್ಯಾಜ್ಯ ರೂಪದ ಅಡುಗೆ ಎಣ್ಣೆ ವರದಾನವಾಗಿ ಪರಿಣಮಿಸಿದೆ.
ಹರಕೆ ಎಣ್ಣೆ ಪ್ರೇರಣೆ: ಶಿರಸಿಯಲ್ಲಿ ಮಾರಿಕಾಂಬಾ ದೇವಸ್ಥಾನ ಬಳಿ ಆಂಜನೇಯ ದೇವಸ್ಥಾನವಿದ್ದು, ಅಲ್ಲಿನ ಮೂರ್ತಿಗೆ
ಭಕ್ತರು ಶೇಂಗಾ, ಸೂರ್ಯಪಾನ, ಸೋಯಾ, ಎಳ್ಳು, ಔಡಲ, ಫಾಮ್ ಎಣ್ಣೆ ಸುರಿಯುತ್ತಾರೆ. ಈ ಎಣ್ಣೆ ಸಂಗ್ರಹವಾಗುತ್ತಿದ್ದರೂ ಬಳಕೆಗೆ ಬಾರದಾಗಿತ್ತು. ಇದೀಗ ಇದೇ ಎಣ್ಣೆ ಜೈವಿಕ ಡೀಸೆಲ್ ರೂಪದಲ್ಲಿ ಸಾರ್ಥಕತೆ ಪಡೆಯುತ್ತಿದೆ.
ತಯಾರಿಕೆ ಹೇಗೆ?: 1 ಲೀಟರ್ ಜೈವಿಕ ಡೀಸೆಲ್ ತಯಾರಿಕೆಗೆ ಸುಮಾರು ಒಂದು ಕಾಲು ಲೀಟರ್ ಅಡುಗೆ ಎಣ್ಣೆ ಬಳಕೆ ಆಗುತ್ತಿದೆ. ಸೋಸಿದ ಅಡುಗೆ ಎಣ್ಣೆಯನ್ನು ಯಂತ್ರಗಳಲ್ಲಿ ಹಾಕಿ 63 ಡಿಗ್ರಿ ಉಷ್ಣಾಂಶದಲ್ಲಿ ಒಂದೂವರೆ ತಾಸು ಕುದಿಸಲಾಗುತ್ತದೆ. ತಣ್ಣಗಾಗಿಸಿ ಅದರಲ್ಲಿನ ಗ್ಲೀಸರಿನ್ ಬೇರ³ಡಿಸಿ ಜೈವಿಕ ಡೀಸೆಲ್ ಸಿದ್ಧಪಡಿಸಲಾಗುತ್ತದೆ.
ಗ್ಲೀಸರಿನ್‌ನಿಂದ ಸಾಬೂನು ತಯಾರಿಸಲಾಗುತ್ತದೆ. ಇದೇ ಪ್ರಕ್ರಿಯೆ ಉತ್ಪನ್ನ ಬಳಸಿ ಫ್ಲೋರ್ ಕ್ಲೀನರ್ ತಯಾರಿಸಲಾಗುತ್ತದೆ. ಒಂದು ಲೀಟರ್ ಜೈವಿಕ ಡಿಸೇಲ್ ತಯಾರಿಕೆಗೆ 25-28 ರೂ.ವರೆಗೆ ವೆಚ್ಚ ಆಗುತ್ತದೆ.
ಅಡುಗೆ ಎಣ್ಣೆ ಬಳಸಿ ದಿನಕ್ಕೆ ಸುಮಾರು 100 ಲೀಟರ್ ಜೈವಿಕ ಡೀಸೆಲ್ ತಯಾರಿಸುವ ವ್ಯವಸ್ಥೆಯನ್ನು ಅರಣ್ಯ ಕಾಲೇಜು ಹೊಂದಿದೆ. ಜೈವಿಕ ಡಿಸೇಲ್ ಒಂದು ಲೀಟರ್‌ಗೆ 50 ರೂ.ನಂತೆ ಮಾರಾಟವಾಗುತ್ತಿದೆ. ವಾಹನಕ್ಕೆ 10 ಲೀಟರ್ ಡೀಸೆಲ್ ಬಳಸಿದರೆ ಇದರಲ್ಲಿ 2 ಲೀಟರ್ ಜೈವಿಕ ಇಂಧನ ಸೇರಿಸಲಾಗುತ್ತಿದೆ.
ದಿನಕ್ಕೆ 25 ಲೀಟರ್ ಜೈವಿಕ ಇಂಧನ ಉತ್ಪನ್ನಗಳ ತಯಾರಿಸಲು ಮೂವರು ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಾರೆ. ಈ ಉತ್ಪನ್ನಗಳ ಮಾರಾಟದಿಂದ ಸುಮಾರು 4,800 ರೂ. ಆದಾಯ ಬರುತ್ತಿದ್ದು, ಇದರಲ್ಲಿ 3,675ರೂ. ಉತ್ಪಾದನಾ ವೆಚ್ಚ ತೆಗೆದರೆ 1,125ರೂ. ಲಾಭವಾಗುತ್ತಿದೆ. ಅದೇ ರೀತಿ ಅಡುಗೆ ಎಣ್ಣೆಯಿಂದ ತಯಾರಿಸುವ ಜೈವಿಕ ಡೀಸೆಲ್‌ನಿಂದ 2,550ರೂ. ಆದಾಯ ಬರುತ್ತಿದ್ದು, 1,080ರೂ. ಉತ್ಪಾದನಾ ವೆಚ್ಚ ತೆಗೆದರೆ 1,470ರೂ. ಲಾಭವಾಗುತ್ತಿದೆ. ಒಂದು ತಿಂಗಳಲ್ಲಿ 26 ದಿನಕ್ಕೆ 50ಲೀಟರ್‌ನಷ್ಟು ಜೈವಿಕ ಇಂಧನ, ಸಹ ಉತ್ಪನ್ನಗಳಿಂದ ಪ್ರತಿ ವಿದ್ಯಾರ್ಥಿಗೆ 22,490ರೂ. ಲಾಭ ದೊರೆಯಲಿದೆ. ಲಾಭದ ಹಣವನ್ನು ಉತ್ಪನ್ನದಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
ಪಾಚಿಯಿಂದಲೂ ಜೈವಿಕ ಇಂಧನ ಸಾಧ್ಯ
ನೀರಿನಲ್ಲಿ ಬೆಳೆಯುವ ಪಾಚಿಯಿಂದಲೂ ಜೈವಿಕ ಇಂಧನ ತಯಾರಿಕೆ ನಿಟ್ಟಿನಲ್ಲಿ ರಿಲಾಯನ್ಸ್ ಕಂಪನಿ ಅಡಿಯಲ್ಲಿ ಸುಮಾರು 200 ಮಂದಿ ಸಂಶೋಧನೆ-ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ನೈಋತ್ಯ ರೈಲ್ವೆ ವಲಯ ಸಿದ್ಧಾರೂಢ ಎಕ್ಸ್‌ಪ್ರೆಸ್ ರೈಲಿಗೆ ಶೇ.5ರಷ್ಟು ಜೈವಿಕ ಇಂಧನ ಬಳಸಿದರೆ, ಬೆಂಗಳೂರು-ಚೆನ್ನೈ ನಡುವಿನ ವೋಲ್ವೊ ಬಸ್‌ಗೆ ಶೇ.100ರಷ್ಟು ಜೈವಿಕ ಇಂಧನ ಬಳಸಲಾಗುತ್ತಿದೆ. ನಮ್ಮಲ್ಲಿ ತಯಾರಿಸಿದ ಜೈವಿಕ ಡೀಸೆಲ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೈವಿಕ ಇಂಧನ ಮೂಲಗಳ ವೃದ್ಧಿ ಕುರಿತು ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ಜೋಯಿಡಾ ಜನರಿಗೆ ತರಬೇತಿ ನೀಡಲಾಗಿದೆ. ಎಂದು ಶಿರಸಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ|ಪಿ.ರಮಣ ತಿಳಿಸಿದ್ದಾರೆ.
– ಅಮರೇಗೌಡ ಗೋನವಾರ