ಬರ್ಮಿಂಗಂ: ಕಾಮನ್ವೆಲ್ತ್ ಗೇಮ್ಸ್‌ನ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಭಾರತದ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದರು. ಇದು ಈ ಬಾರಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ನಾಲ್ಕನೇ ಪದಕ.
ತನ್ನ ಮೊದಲ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಒಟ್ಟು 202 ಕೆಜಿ ಎತ್ತುವ 23 ವರ್ಷದ ಬಿಂದ್ಯಾರಾಣಿ ದೇವಿ, 55 ಕೆಜಿ ವಿಭಾಗದಲ್ಲಿ 116 ಕೆಜಿಯ ಪ್ರಯತ್ನದೊಂದಿಗೆ ಅತ್ಯಧಿಕ ‘ಕ್ಲೀನ್ ಮತ್ತು ಜರ್ಕ್’ ಲಿಫ್ಟ ಮಾಡಿ ಗೇಮ್ಸ್ ದಾಖಲೆಯನ್ನು ಮುರಿದರು.
ಬಿಂದ್ಯಾರಾಣಿಯ ಈ ಯಶಸ್ವಿ ಪ್ರದರ್ಶನದ ಪರಿಣಾಮ ಭಾರತವು ಕಾಮನ್ವೆಲ್ತ್ ಕ್ರೀಡಾಕೂಟದ ಎರಡನೇ ದಿನದಲ್ಲಿ ನಾಲ್ಕು ಪದಕಗಳನ್ನು ಗೆದ್ದಿತು. ಎಲ್ಲಾ ನಾಲ್ಕು ಪದಕಗಳು ವೇಟ್‌ಲಿಫ್ಟಿಂಗ್ ನಲ್ಲಿ ಬಂದವೆನ್ನುವುದು ವಿಶೇಷ.
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಈ ಬಾರಿಯ ಕೂಟದಲ್ಲಿ ಭಾರತದ ಮೊದಲ ಚಿನ್ನ ಗೆದ್ದರು. 2018ರ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದಿದ್ದ ಮೀರಾಬಾಯಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಇದನ್ನೂ ಓದಿ:ಸಾವಿತ್ರಿ ಜಿಂದಾಲ್ ಈಗ ಏಷ್ಯಾಕ್ಕೇ ಶ್ರೀಮಂತೆ !ಈವರೆಗೆ ನಂ.1 ಆಗಿದ್ದ ಚೀನದ ಯಾಂಗ್ ಈಗ ನಂ.3
ಅದಕ್ಕೂ ಮೊದಲು ಭಾರತಕ್ಕೆ ಕೂಟದ ಪದಕ ತಂದು ಕೊಟ್ಟಿದ್ದು ಸಂಕೇತ್ ಮಹಾದೇವ್. ಅವರು 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಬಳಿಕ 61 ಕೆಜಿ ಪುರುಷರ ವಿಭಾಗದಲ್ಲಿ ಕುಂದಾಪುರದ ಗುರುರಾಜ ಪೂಜಾರಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು. ಸದ್ಯ ಪದಕ ಪಟ್ಟಿಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ.