ಬೆಳಗಾವಿ: ಕೊರೊನಾ ಮಹಾಸಮರದಲ್ಲಿ ವೈದ್ಯರು ಸೇರಿ ಎಲ್ಲ ಸಿಬ್ಬಂದಿಯೂ ರೋಗಿಗಳ ಜೀವ ಉಳಿಸಲು ಉತ್ತಮ ಆರೈಕೆ, ಚಿಕಿತ್ಸೆ ನೀಡಬೇಕಾಗಿದೆ. ಈ ವಿಷಯದಲ್ಲಿ ಏನಾದರೂ ಲೋಪ ದೋಷ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಹಾಗೂ ಬಿಮ್ಸ್ ಮೇಲುಸ್ತುವಾರಿ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಕೆಲ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲಾಗುವುದು. ಇಂಥ ಸಮಯದಲ್ಲಿ ಎಲ್ಲರೂ ಕೂಡಿ ಕೆಲಸ ಮಾಡಬೇಕಾಗಿದೆ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಲೋಪ ದೋಷ ಕಂಡು ಬಂದರೆ, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಬಿಮ್ಸ್‌ನಲ್ಲಿ ಎಲ್ಲ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಕೆಲಸವನ್ನು ಹಂಚಿ ಕೊಡಲಾಗಿದೆ. ಕೆಲಸದ ಪಟ್ಟಿ ಹಾಕಿ ಕೊಡಲಾಗಿದೆ. ಹಿರಿಯರು, ಕಿರಿಯ ವೈದ್ಯರು ಸೇರಿ ಎಲ್ಲರೂ ಚಾರ್ಟ್ ಪ್ರಕಾರವೇ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡುವುದು, ಪೌಷ್ಟಿಕ ಆಹಾರ ನೀಡುವುದರ ಬಗ್ಗೆ ಹಾಗೂ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಈ ಕುರಿತು ವೈದ್ಯರು ಹಾಗೂ ಇಲ್ಲಿನ ಸಿಬ್ಬಂದಿ ಕೆಲವು ಸಲಹೆ-ಸೂಚನೆ ನೀಡಿದ್ದಾರೆ. ಇದೆಲ್ಲವನ್ನೂ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಶಸ್ತ್ರಚಿಕಿತ್ಸಕರ ಕೊರತೆ ಇದೆ. ಬೇರೆ ಜಿಲ್ಲೆಗಳಲ್ಲಿ ಇರುವಂತೆ ಸ್ನಾತಕೋತ್ತರ ಪದವೀಧರರು ನಮ್ಮಲ್ಲಿ ಇಲ್ಲ. ಬ್ಲ್ಯಾಕ್ ಫಂಗಸ್ ಶಸ್ತ್ರಚಿಕಿತ್ಸೆ ದಿನಕ್ಕೆ 9 ಆಗಬೇಕು. ಈ ಬಗ್ಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇನ್ನೂ 35 ಬ್ಲ್ಯಾಕ್ ಫಂಗಸ್ ಶಸ್ತ್ರಚಿಕಿತ್ಸೆ ಆಗಬೇಕಿದ್ದು, ಇವುಗಳನ್ನು ಮೂರ್‍ನಾಲ್ಕು ದಿನಗಳಲ್ಲಿ ಮುಗಿಸುವಂತೆ ಹೇಳಲಾಗಿದೆ ಎಂದು ಹೇಳಿದರು.
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಡಿ ದರ್ಜೆ ನೌಕರರು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ ಎಂಬ ಮಾಹಿತಿ ನನಗೂ ಸಿಕ್ಕಿದೆ. ಹೀಗಾಗಿ ಗುತ್ತಿಗೆ ಅವ ಧಿ ಮುಗಿದ ಮೇಲೆ ಅದನ್ನು ಮತ್ತೆ ವಿಸ್ತರಿಸಿಕೊಂಡು ಹೋಗುವುದು ಅಷ್ಟರ ಮಟ್ಟಿಗೆ ಸರಿ ಅಂತ ಅನಿಸುವುದಿಲ್ಲ. 2018ರಲ್ಲಿ ಗುತ್ತಿಗೆ ಆಗಿದ್ದು, ಅದನ್ನೇ ಮುಂದುವರಿಸಲಾಗಿದೆ. ಇದೆಲ್ಲವನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.