Advertisement

ಸಿಎಂ ಭೇಟಿ ಮುನ್ನವೇ ರಜೆ ಪಡೆದ ಬಿಮ್ಸ್‌ ನಿರ್ದೇಶಕ

06:40 PM Jun 03, 2021 | Team Udayavani |

ಬೆಳಗಾವಿ: ಸಿಎಂ ಯಡಿಯೂರಪ್ಪನವರ ಗಮನ ಸೆಳೆಯುವ ಮಟ್ಟಿಗೆ ಅವ್ಯವಸ್ಥೆ ಗೂಡಾಗಿದ್ದ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್‌)ಯಲ್ಲಿ ದಿನದಿಂದ ದಿನಕ್ಕೆ ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಆಗಮನ ಮುನ್ನವೇ ಬಿಮ್ಸ್‌ ನಿರ್ದೇಶಕ ಡಾ| ವಿನಯ ದಾಸ್ತಿಕೊಪ್ಪ ಒಂದು ತಿಂಗಳ ರಜೆ ಹಾಕಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶುಕ್ರವಾರ ಜೂ.4ರಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದು, ಜೂನ್‌ 1ರಂದು ಡಾ. ವಿನಯ ದಾಸ್ತಿಕೊಪ್ಪ ಅವರು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ರಜೆ ಅರ್ಜಿ ಕಳುಹಿಸಿದ್ದಾರೆ. ಒಂದು ತಿಂಗಳ ಕಾಲ ಜೂ. 2ರಿಂದ ಜುಲೈ ಒಂದರವರೆಗೆ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೇಳಿದ್ದಾರೆ.

ಮೇ 29ರಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಮ್ಸ್‌ಗೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಗೆ ಕಿಡಿಕಾರಿದ್ದರು. ಬಿಮ್ಸ್‌ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೇ ವಿಷಯವಾಗಿ ಈಗ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿದ್ದು, ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಡಾ| ವಿನಯ ದಾಸ್ತಿಕೊಪ್ಪ ರಜೆ
ಮೇಲೆ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮುಖ್ಯಮಂತ್ರಿಗಳು ಬಿಮ್ಸ್‌ ಬಗೆಗಿನ ವರದಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಅವರ ಭೇಟಿಯ ಕಾಲಕ್ಕೆ
ಮುಜುಗರವಾಗಬಾರದೆಂದು ಬಿಮ್ಸ್‌ ನಿರ್ದೇಶಕರಿಗೆ ರಾಜ್ಯ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ ಎಂದು ಮೂಲಗಳಿಂದ
ಮಾಹಿತಿ ಸಿಕ್ಕಿದೆ.

ತಮ್ಮ ಅನುಪಸ್ಥಿತಿಯಲ್ಲಿ ಬಿಮ್ಸ್‌ ಅಂಗರಚನಾ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ಉಮೇಶ ಕುಲಕರ್ಣಿ ಅವರು ನಿರ್ದೇಶಕರ ಹುದ್ದೆಯ ಕಾರ್ಯಭಾರವನ್ನು ನೋಡಿಕೊಳ್ಳುವರೆಂದು ದಾಸ್ತಿಕೊಪ್ಪ ಅವರು ತಮ್ಮ ಪತ್ರದಲ್ಲಿ ಉಲ್ಲೇಖೀಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮುಖ್ಯಮಂತ್ರಿಗಳ ಭೇಟಿಯ ಮುನ್ನ ಬಿಮ್ಸ್‌ನಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆದಿದೆ. ಕೋವಿಟ್‌ ವಾರ್ಡ್‌ನಲ್ಲಿಯೇ ಶವ ಇಟ್ಟಿದ್ದ ಪ್ರಕರಣ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಹೀಗಾಗಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಹುಸೇನಸಾಬ ಖಾಜಿ ಅವರು 6 ಜನರ
ಶುಶ್ರೂಷಕರು ಹಾಗೂ ನರ್ಸಿಂಗ್‌ ಮುಖ್ಯಸ್ಥರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದರು.

ಜತೆಗೆ ವೈದ್ಯರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದರು. ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದನ್ನು ಖಂಡಿಸಿ ಶುಶ್ರೂಷಕರು ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಮ್ಸ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಡಲು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ತಳ ಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡಿದ್ದಾರೆ. ದಿನದ 16 ಗಂಟೆಗಳ ಕಾಲ
ಕೆಲಸ ಮಾಡಿದರೂ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿದ್ದರು.

ಶುಕ್ರವಾರ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳ ಭೇಟಿ ಬಹಳ ಮಹತ್ವ ಪಡೆದುಕೊಂಡಿದ್ದು, ಬಿಮ್ಸ್‌ನ ಮೇಜರ್‌ ಸರ್ಜರಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next