ಮುಂಬಯಿ: ಕರ್ಮಭೂಮಿ ಮತ್ತು ಜನ್ಮಭೂಮಿಯ ಸೇವಾ ಸಫಲತೆಗೆ ಬಿಲ್ಲವರ ಅಸೋಸಿಯೇಶನ್ ವಿಶ್ವಕ್ಕೇ ಮಾದರಿ. ಪೂರ್ವಜರ ಸೇವಾ ಕನಸು ನನಸಾಗಿಸುವಲ್ಲಿ ಫಲಪ್ರದವಾಗಿ ಭಾವೀ ಪೀಳಿಗೆಯತ್ತ ಸಾಗುತ್ತಿರುವ ಅಸೋಸಿಯೇಶನ್ ಕಾಲಾನುಸಾರ ಬದಲಾವಣೆಯಾಗಿ ಮುನ್ನಡೆ ಯುತ್ತಿದೆ. ಇದೆಲ್ಲಕ್ಕೂ ಜಯ ಸುವರ್ಣರ ಮಾರ್ಗದರ್ಶನವೇ ಶ್ರೀರಕ್ಷೆಯಾಗಿದೆ. ಸುವರ್ಣರ ಪ್ರೇರಣೆ ಬಿಲ್ಲವರಿಗೆ ಮಾತ್ರವಲ್ಲ ಸೇವಾಕಾಂಕ್ಷಿಗಳೆಲ್ಲರಿಗೂ ಗಜಬಲವಾಗಿದೆ. ಸಾಮಾಜಿಕ ಚಿಂತನೆ, ದೂರದೃಷ್ಟಿತ್ವವುಳ್ಳ ಸುವರ್ಣರ ಸಮಾಜ ಸೇವೆ ಪ್ರಾತಃ ಸ್ಮರಣೀಯವಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ತಿಳಿಸಿದರು.
ಜು. 7ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ನ 87ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮೆಲ್ಲರ ಸಹಯೋಗದೊಂದಿಗೆ ನಮಗೆ ಅಸೋಸಿಯೇಶನ್‌ನಲ್ಲಿ ಸೇವೆ ಸಲ್ಲಿಸುವ ಜವಾಬ್ದಾರಿ ದೊರಕಿದೆ. ಅದನ್ನು ನಾವು ಫಲಪ್ರದವಾಗಿ ನಿಭಾಯಿಸುವೆವು. ಪಡುಬೆಳ್ಳೆಯಲ್ಲಿ 15 ಎಕರೆ ಜಾಗದ ನಮ್ಮ ಶಾಲೆಯಲ್ಲಿ ಸುಮಾರು 850 ವಿದ್ಯಾರ್ಥಿಗಳು ಜಾತಿಮತ ಧರ್ಮ ಭೇದವಿಲ್ಲದೆ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ಕೇಂದ್ರವನ್ನು ಕಾಲೇಜು ಮಾಡುವ ಉದ್ದೇಶ ನಮ್ಮೆಲ್ಲರ ಆಶಯವಾಗಿದೆ. ಅದನ್ನು ನೇರವೇರಲು ತಮ್ಮೆಲ್ಲರ ಸಹಕಾರ ಬೇಕಾಗಿದೆ. ವಿದ್ಯಾದಾನದ ಗುಡಿ ಗೋಪುರ ಕಟ್ಟುವುದರೊಂದಿಗೆ ವಿದ್ಯಾಮಂದಿರಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಹೆಸರಿನಲ್ಲಿ ಕಾನೂನು ಕಾಲೇಜು, ದೇಯಿ ಬೈದ್ಯೆತಿ ಹೆಸರಿನಲ್ಲಿ ಆಯುರ್ವೆದ ಕಾಲೇಜು ಮಾಡುವಂತಹ ಉನ್ನತ ವಿಚಾರ ನಮ್ಮದಾಗಬೇಕು. ಅದಕ್ಕಾಗಿ ನಾವೆಲ್ಲರೂ ಒಂದಾಗಿ ಸಮಾಜ ಸೇವೆ ಮಾಡಿ ಜಯ ಸುವರ್ಣರ ಆದರ್ಶವನ್ನು ಮೈಗೂಡಿಸಿ ಮುನ್ನಡೆಯೋಣ ಎಂದು ನುಡಿದರು.
ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಅವರು, ಭವನದಲ್ಲಿನ ಶ್ರೀ ಗುರು ನಾರಾಯಣ ಮಂದಿರದಲ್ಲಿನ ಕೋಟಿ-ಚೆನ್ನಯ ಮತ್ತು ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆಗೈದು, ಆರತಿ ಬೆಳಗಿಸಿ ಮಹಾಸಭೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ದಯಾನಂದ ಆರ್. ಪೂಜಾರಿ, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಗೌರವ ಜೊತೆ ಕಾರ್ಯದರ್ಶಿಗಳಾದ ಧರ್ಮೇಶ್ ಎಸ್. ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಶಿವರಾಮ ಎಸ್. ಪೂಜಾರಿ, ಸದಾಶಿವ ಎ. ಕರ್ಕೇರ, ಮೋಹನ್ ಡಿ. ಪೂಜಾರಿ, ಜಯ ಎಸ್. ಸುವರ್ಣ, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎನ್. ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಕೆ. ಪೂಜಾರಿ ಸೇರಿದಂತೆ ಅಸೋಸಿಯೇಶನ್‌ನ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಸ್ಥಳೀಯ ಸಮಿತಿಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆದಿಯಲ್ಲಿ ಜಯ ಸಿ. ಸುವರ್ಣ ಅವರು ಶ್ರೀ ಗುರು ಪ್ರಸಾದ ಅನ್ನನಿಧಿಗೆ ಚಾಲನೆ ನೀಡಿ ಸಭೆಯಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಅಮೃತ ಮಹೋತ್ಸವದ ಮನವಿಪತ್ರ ಬಿಡುಗಡೆಗೊಳಿಸಿದರು. ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು ಇತ್ತೀಚೆಗೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಜಯ ಸಿ. ಸುವರ್ಣ, ನೂತನ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್, ಅಸೋಸಿಯೇಶನ್‌ನ ಸಂಚಾಲಕತ್ವದ ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಗತ ಶೈಕ್ಷಣಿಕ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಂದ ತೇರ್ಗಡೆಯಾದ ಕು| ಪೂಜಾ ದಶರತ್ ಚವ್ಹಾಣ್, ಕು| ದಿವ್ಯಾ ದಶರತ್ ಚವ್ಹಾಣ್, ಇಫ್ರಾ ಕೆ. ಶೇಖ್ ಅವರನ್ನು ಸಂಸ್ಥೆಯ ಪದಾಧಿಕಾರಿಗಳು ಗೌರವಿಸಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್ ಬಿತ್ತ್ಲ್ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು, ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾದ ವರದ ಉಳ್ಳಾಲ್, ಎಲ್. ವಿ. ಅಮೀನ್, ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಬ್ಯಾಂಕಿನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಎನ್. ಎಂ. ಸನಿಲ್, ಹರೀಶ್ಚಂದ್ರ ಎಸ್.ಪೂಜಾರಿ, ಟಿ. ಆರ್. ಶೆಟ್ಟಿ, ರೋಹಿತ್ ಎಂ. ಸುವರ್ಣ, ಜಯಕರ್ ಡಿ. ಪೂಜಾರಿ, ಕು| ಪೂಜಾ ಡಿ. ಚವ್ಹಾಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ, ಸೂಚನೆಗಳನ್ನಿತ್ತರು.
ಅಸೋಸಿಯೇಶನ್‌ನ ಧುರೀಣರುಗಳಾದ ವಾಸುದೇವ ಆರ್. ಕೋಟ್ಯಾನ್, ಭಾರತ್ ಬ್ಯಾಂಕಿನ ನಿರ್ದೇಶಕರು, ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾರ್ಯಾಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಕೆಲಿಂಜೆಗುತ್ತು ಪ್ರವೀಣ್ ಶೆಟ್ಟಿ, ಸುರೇಂದ್ರ ಎ. ಪೂಜಾರಿ ಸಾಯಿಕೇರ್, ಸಿಎ ಅಶ್ವಜಿತ್ ಹೆಜ್ಮಾಡಿ, ಬಿಲ್ಲವರ ಭವನದ ಪ್ರಬಂಧಕ ಭಾಸ್ಕರ ಟಿ. ಪೂಜಾರಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ಗತ ವಾರ್ಷಿಕ ಸಾಲಿನಲ್ಲಿ ಅಗಲಿದ ಅಸೋಸಿಯೇಶನ್‌ನ ಸದಸ್ಯರು, ಹಿತೈಷಿಗಳು ಮತ್ತು ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕು| ಧಿವಿತಾ ಆನಂದ ಪೂಜಾರಿ ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಶಾಂತಿ ಸ್ವಾಗತಿಸಿ ವಾರ್ಷಿಕ ಚಟುವಟಿಕೆ ಮಾಹಿತಿ, ಗತ ವಾರ್ಷಿಕ ಲೆಕ್ಕಪತ್ರ ತಿಳಿಸಿದರು. ಗೌರವ ಜೊತೆ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಅಸೋಸಿಯೇಶನ್‌ನ ಮುಖವಾಣಿ ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ
ಮತ್ತು ಗೌರವ ಜೊತೆ ಕಾರ್ಯದರ್ಶಿ
ಕೇಶವ ಕೆ. ಕೋಟ್ಯಾನ್ ಪುರಸ್ಕೃತರನ್ನು ಪರಿಚಯಿಸಿದರು. ಗೌರವ ಜೊತೆ ಕಾರ್ಯದರ್ಶಿ ರವೀಂದ್ರ ಎ. ಶಾಂತಿ ವಂದಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್