Advertisement

ಬಿಲ್ಲವರ ಅಸೋಸಿಯೇಶನ್‌ ಮಹಿಳಾ ವಿಭಾಗ: “ಒಲುಮೆ’ಕಾರ್ಯಕ್ರಮ

02:59 PM Feb 27, 2018 | |

ಮುಂಬಯಿ:ಪ್ರೀತಿಯಿಂದ ಮಾತ್ರ ಎಲ್ಲರನ್ನೂ ಗೆಲ್ಲಬಹುದು. ಇಂತಹ ಒಲುಮೆಯಿಂದ ಎಲ್ಲ ವನ್ನೂ ಸಂಪಾದಿಸಬಹುದು. ಆದ್ದರಿಂದ ಇಂತಹ ಕಾರ್ಯಕ್ರಮಕ್ಕೆ ಮಂಗ ಳೂರಿನಿಂದ ಬಂದು ಪಾಲ್ಗೊಳ್ಳುವುದು ನನ್ನ ಸೌಭಾಗ್ಯವಾಗಿದೆ. ನಿಮ್ಮನ್ನು ಮುಖತಃ ನೋಡಿ ಪ್ರೀತಿ ಹಂಚಿಕೊಳ್ಳುವ ಅವಕಾಶ ಅಭಿಮಾನ ತಂದಿದೆ. ನನ್ನ ಸಾಧನೆಗೆ ನನ್ನ ಕ್ರೀಡಾಸಕ್ತಿಯೇ ಪ್ರೇರಣೆಯಾಗಿದ್ದು,  ಇದರ ಹಿಂದೆ ಮುಂಬಯಿವಾಸಿ ಬಿಲ್ಲವ ಬಂಧುಗಳ ಸಹಯೋಗ ಪ್ರಧಾನವಾಗಿದೆ. ನನಗೆ ಪ್ರಥಮ ಅಂತರಾಷ್ಟ್ರೀಯ ಪದಕ ಪ್ರಾಪ್ತಿಸಿದ ನಗರ ಮುಂಬಯಿ. ಇದೊಂದು ಸರ್ವಧರ್ಮ ಸಮನ್ವಯ ಸಾರುವ ನಗರವಾಗಿದೆ. ಏಕಮಾತಾ ಮಕ್ಕಳಾಗಿ ಬಾಳುವುದು  ಇಲ್ಲಿನ ವೈಶಿಷ್ಟ ಎಂದರು. ಪ್ರಸಕ್ತಾವಧಿಯಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿದ್ದಾರೆ. ಇದನ್ನು ಇನ್ನಷ್ಟು ಸಮಾನತೆಯತ್ತ ಒಯ್ಯುವಲ್ಲಿ ಇಂತಹ ವೇದಿಕೆಗಳು ಅನುಕರಣೀಯ. ಅವಾಗಲೇ ನಮ್ಮ ಸಂಸ್ಕಾರ‌, ಸಂಸ್ಕೃತಿಯ ಉಳಿವು ಸಾಧ್ಯ ಎಂದು ಮಂಗಳೂರು ಮಹಾಪೌರೆ ಕವಿತಾ ಸನಿಲ್‌ ತಿಳಿಸಿದರು.

Advertisement

ಫೆ. 25 ರಂದು ಸಂಜೆ ಸಾಂತಾಕ್ರೂಜ್‌ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಹಿಳಾ ವಿಭಾಗವು ಮುಂಬಯಿಯ ತುಳು ಕನ್ನಡಿಗರ ಸಂಸ್ಥೆಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಸದಸ್ಯೆ ಯರನ್ನೊಳಗೊಂಡು ಆಯೋಜಿಸಿದ್ದ “ಒಲುಮೆ’ ವಿನೂತನ ಕಾರ್ಯಕ್ರಮವನ್ನು  ಉದ್ಘಾಟಿಸಿ ಇವರು ಮಾತನಾಡಿ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಸಾರಥ್ಯದಲ್ಲಿ ವಿಶೇಷ ಅತಿಥಿಯಾಗಿ ಅಸೋಸಿಯೇಶನ್‌ನ ಮಾಜಿ ಮಹಿಳಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್‌ ಹೆಗ್ಡೆ ಇವರು ಉಪಸ್ಥಿತರಿದ್ದು ಮಾತನಾಡಿ, ಇವತ್ತು ನನ್ನ ಜೀವನದ ಒಂದು ಶ್ರೇಷ್ಠ ಸುದಿನ. ಕಾರಣ ನಾನು ಹಲವು ವರ್ಷಗಳಿಂದ ಬಿಲ್ಲವರ ಭವನನ ಮುಂದಿನಿಂದ ಸಾಗುತ್ತಿದ್ದೆ. ಆದರೆ ಇದೇ ಮೊದಲ ಬಾರಿ ಭವನದೊಳಗೆ ಭೇಟಿ ನೀಡುವ ಅವಕಾಶ ದೊರೆಯಿತು. ಮಹಿಳೆಯರು ಪರಸ್ಪರ ಕುಷಲೋಪರಿ ನಡೆಸಿ ಒಬ್ಬರನ್ನೊಬ್ಬರು ಅರ್ಥೈಯಿಸಿಕೊಂಡು  ಬಾಳಲು ಇಂತಹ ವೇದಿಕೆಗಳು ಪ್ರೇರಣೆ. ಇದರಿಂದ ಸ್ನೇಹ ಸೌಹಾರ್ದ ಹೆಚ್ಚಾಗುತ್ತದೆ ಮತ್ತು ಪ್ರೀತಿ ಸಂಬಂಧ ಬೆಳೆಯುತ್ತದೆ. ಒಲುಮೆ ಅಂದರೆ ಪ್ರೀತಿ. ಇದರ ವಿನಃ ಬದುಕೇ ಏಕಾಂತ‌. ನಮ್ಮೆಲ್ಲರ ಬಾಳಿಗೆ ಈ ಒಲುಮೆ ಪ್ರೇರಕವಾಗಲಿ ಎಂದರು.
ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ್‌ ಡಿ. ಕೋಟ್ಯಾನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಒಲುಮೆಯು ಎಲ್ಲ ವರ್ಗದ ನಾರಿಯರನ್ನೂ ಒಗ್ಗೂಡಿಸಲಿ. ಮತ್ತು ಮಹಿಳಾಪರ ದನಿಯಾಗಿ ಮುನ್ನಡೆಸಲಿ. ಪರಸ್ಪರ ಪ್ರೀತಿ ಹಂಚಿಕೊಂಡು ಸಮಾನತಾ ಮನೋಭಾವವುಳ್ಳ ಅಬಲೆಯರಾಗಿ ಬಾಳಲು ಪೂರಕವಾಗಲಿ ಎಂದರು.

ಕಾರ್ಯಕ್ರಮದ ಮಧ್ಯಾಂತರದಲ್ಲಿ  ಮಹಾನಗರದಲ್ಲಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ “ವರ್ತಮಾನದ ಮಹಿಳೆ- ತಲ್ಲಣ- ಪರಿಹಾರ’ ವಿಚಾರಗೋಷ್ಠಿ ನಡೆಯಿತು. ತೀಯಾ ಸಮಾಜ ಮುಂಬಯಿ ಸಂಸ್ಥೆಯ ದಿವಿಜಾ ಚಂದ್ರಶೇಖರ್‌, ಮೊಗವೀರ ಮಾಸಿಕ ಮಾಜಿ ಸಂಪಾದಕಿ ಡಾ| ಜಿ. ಪಿ ಕುಸುಮಾ, ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ವಿಚಾರಗಳನ್ನು ಮಂಡಿಸಿದರು.  ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಸ್ಥೆಗಳ ಮಹಿಳಾ ಸದಸ್ಯೆಯರ ತಂಡಗಳಿಂದ ನೃತ್ಯ ವೈವಿಧ್ಯ, ಸಂಗೀತ ಯೋಗ, ಜಾನಪದ ಗಾಯನ ಮತ್ತಿತರ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

Advertisement

ಈ ಸಂದರ್ಭದಲ್ಲಿ ಸಮಾಜ ಸೇವಕಿ ಪ್ರಮೀಳಾ ಜಿ. ಪೂಜಾರಿ, ಬಿಎಸ್‌ಕೆಬಿ ಅಸೋಸಿಯೇಶನ್‌ನ ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮಾ ಎಸ್‌. ರಾವ್‌, ಗಾಣಿಗ ಸಮಾಜ ಮುಂಬಯಿ  ಮಹಿಳಾ ಕಾರ್ಯಾಧ್ಯಕ್ಷೆ ತಾರಾ ಎನ್‌. ಭಟ್ಕಳ್‌,  ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ  ಮಹಿಳಾ ಕಾರ್ಯಾಧ್ಯಕ್ಷೆ  ಸರೋಜಿನಿ ಶೆಟ್ಟಿಗಾರ್‌, ಮೊಗವೀರ ವ್ಯವಸ್ಥಾಪಕ ಮಂಡಳಿ ಮಹಿಳಾ ಕಾರ್ಯಾಧ್ಯಕ್ಷೆ ರಾಜೀವಿ ಕಾಂಚನ್‌, ದೇವಾಡಿಗ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಜಯಂತಿ ಆರ್‌. ಮೊಲಿ, ಭಂಡಾರಿ ಸೇವಾ ಸಮಿತಿ ಮುಂಬಯಿ  ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್‌ ಭಂಡಾರಿ ಕಡಂದಲೆ, ಕುಲಾಲ ಸಂಘ ಮುಂಬು ಮಹಿಳಾ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ತೀಯಾ ಸಮಾಜ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಲತಾ ಡಿ. ಉಳ್ಳಾಲ್‌, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬಯಿ  ಮಹಿಳಾ ಕಾರ್ಯಾಧ್ಯಕ್ಷೆ ಶುಭಾ ಎಸ್‌. ಆಚಾರ್ಯ, ರಜಕ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ  ಸರೋಜಿನಿ ಡಿ. ಕುಂದರ್‌, ಬೊಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ಕಾರ್ಯಾಧ್ಯಕ್ಷೆ  ಶಾರದಾ ಶ್ಯಾಮ ಶೆಟ್ಟಿ, ಸಾಫಲ್ಯ ಸೇವಾ ಸಂಘ ಮುಂಬಯಿ  ಮಹಿಳಾ ಕಾರ್ಯಾಧ್ಯಕ್ಷೆ  ಶೋಭಾ ವಿ. ಬಂಗೇರ  ಉಪಸ್ಥಿತರಿದ್ದರು. ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ರಾಜ ವಿ. ಸಾಲ್ಯಾನ್‌, ಡಾ| ಯು. ಧನಂಜಯ ಕುಮಾರ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಗೌರವ  ಪ್ರಧಾನ ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್‌ ಪೂಜಾರಿ ಪಲಿಮಾರ್‌, ಬಿಲ್ಲವರು ಕುಡ್ಲ ಇದರ ಉದಯ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಲಕ್ಷ್ಮೀ ಎಸ್‌. ಪೂಜಾರಿ, ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್‌. ಸಾಲ್ಯಾನ್‌ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದು  ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್‌ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ವಿಲಾಸಿನಿ ಕೆ. ಸಾಲ್ಯಾನ್‌, ಉಪ ಕಾರ್ಯಾಧ್ಯಕ್ಷೆ ಪ್ರಭಾ ಕೆ. ಬಂಗೇರ ಅತಿಥಿಗಳಿಗೆ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಅಸೋಸಿಯೇಶನ್‌ನ ಗೌರವ  ಪ್ರಧಾನ ಧರ್ಮಪಾಲ ಜಿ. ಅಂಚನ್‌ ಸ್ವಾಗತಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. 
ಗೌ| ಪ್ರ| ಕಾರ್ಯದರ್ಶಿ ಸುಮಿತ್ರಾ ಎಸ್‌. ಬಂಗೇರ ಅವರು ಸಾಂಸ್ಕೃತಿಕ  ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

ಸಮಯಪ್ರಜ್ಞೆ ಮರೆತ ಮೇಯರ್‌
ಒಲುಮೆ ಕಾರ್ಯಕ್ರಮಕ್ಕಾಗಿಯೇ ಮೇಯರ್‌ ಕವಿತಾ ಸನಿಲ್‌ ಅವರು  ಬೆಳಗ್ಗೆನೇ ಮಂಗಳೂರಿನಿಂದ ವಿಮಾನ ಮೂಲಕ ಮಹಾನಗರಕ್ಕೆ ಆಗಮಿಸಿದ್ದರೂ, ಅವರ ಬಂಧುಗಳ  ಜೊತೆಗೆ ಕಲ್ವಾಕ್ಕೆ ತೆರಳಿದ್ದರು. ಅಲ್ಲಿ ಕೋಳಿ ಸುಕ್ಕಾ, ಚಿಕನ್‌ ತಿಕ್ಕಾ, ಪಾಂಪ್ರಟ್‌ ಪ್ರೈ  ಎಂದು ಬೀಗರೂಟ ಮುಗಿಸಿ ಕಾರ್ಯಕ್ರಮದತ್ತ ಬರುಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಅಷ್ಟರಲ್ಲೇ ಮರಳಿ ಮಂಗಳೂರಿಗೆ ಸೇರುವ ನೆನಪಾಯಿತೋ ಏನೋ…ವಿಮಾನ ನಿಲ್ದಾಣಕ್ಕೆ ಹೋಗುವ ತವಕದಲ್ಲಿದ್ದ ಮೇಯರಮ್ಮ ಅವಸರದಲ್ಲೇ ಭಾಷಣ ಮೊಟಕುಗೊಳಿಸಿ ಓಡಿ ಇಲ್ಲೂ ತನ್ನ ಕ್ರೀಡಾಭಿಮಾನಕ್ಕೆ ಸಾಕ್ಷಿಯಾದ‌ರು. ಮೇಯರಮ್ಮನ ಭಾಷಣ ಕೇಳುವಲ್ಲಿ ಆಸಕ್ತರಾಗಿ, ತುಳುನಾಡ ಪದ್ಯಕ್ಕೆ ಹೆಜ್ಜೆಯನ್ನಾಕಿ ಕುಣಿದು ಕುಪ್ಪಳಿಸುವರೋ ಎಂದು ಕಾತುರದಿಂದ ಕಾದಿದ್ದ ಜನತೆಯನ್ನು ನಿರಾಶೆಯಲ್ಲಿರಿಸಿ ಮೇಯರಮ್ಮ ಕಾಲ್ಕಿತ್ತರು. ಬರೇ ಹತ್ತಿಪ್ಪತ್ತು ನಿಮಿಷಕ್ಕೆ ಸಾವಿರಾರು ಮೈಲು ದೂರದಿಂದ  ಬರುವ ಅತಿಥಿಗಳು ಈ ರೀತಿ ನಡೆದರೆ ಹೇಗೆ ಎಂದು ಸಭಿಕರೇ ಗುಣುಗುತ್ತಿದ್ದರು.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next