ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಒಂದು ಮಹಾನ್ ಸಂಸ್ಥೆಯಾಗಿದೆ. ಕಾರಣ ಇದು ನಾಲ್ಕು ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ರೂಪಿತ ಸಂಸ್ಥೆಯಾಗಿದೆ. ನಾರಾಯಣ ಗುರುಗಳ ತತ್ವ ಪ್ರತಿಪಾದಿಸುವುದೇ ಬಿಲ್ಲವ ಸಂಸ್ಥೆಯ ಉದ್ದೇಶವಾಗಿದೆ. ಆದ್ದರಿಂದ ಜಾತಿ-ಮತ, ಪಕ್ಷ, ಭೇದಮುಕ್ತರಾಗಿ ಸಂಸ್ಥೆಯೊಂ ದಿಗೆ ಸಮಾಜವನ್ನು ಮುನ್ನಡೆಸಬೇಕು. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ನಾವು ಮೇಲೆ ಬಂದಾಗ ಸಂಸ್ಥೆಯ ಉದ್ದೇಶ ಸಾರ್ಥಕವಾಗುವುದು. ನವಿ ಮುಂಬಯಿಯಲ್ಲಿ ಸುಮಾರು 10,700 ಚದರ ಅಡಿ ವಿಸ್ತೀರ್ಣದ ನವಿ ಮುಂಬಯಿ ಬಿಲ್ಲವ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು ಇದೇ ಡಿ.11ರಂದು ಶಿಲಾನ್ಯಾಸ ನೆರವೇರಿಸುತ್ತಿದ್ದು ಸಮಸ್ತ ಬಾಂಧವರು ಸಹಯೋಗವನ್ನಿತ್ತು ಸಹಕರಿಸಬೇಕು ಎಂದು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ನುಡಿದರು.
ನ. 11ರಂದು ಮುಲುಂಡ್ ಪೂರ್ವದ ನೀಲಂ ನಗರದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಲುಂಡ್ ಸ್ಥಳೀಯ ಸಮಿತಿಯ ನೂತನ ಕಚೇರಿಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭಹಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಯತ್ನಶೀಲರಾದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಕಚೇರಿ ಸಾಕ್ಷಿ. ಇದು ನಮ್ಮ ಸಮುದಾಯದ ಏಕತೆಯ ಮುಕುಟದ ಮತ್ತೂಂದು ಗರಿಯಾಗಿದೆ. ಕೇಂದ್ರ ಸಮಿತಿಯ ಸಹಯೋಗದೊಂದಿಗೆ ಜನಸ್ಪಂದನೆಗೆ ಅವಕಾಶ ಒದಗಿಸುವಂತಾಗಲಿ. ಸ್ಥಾನೀಯವಾಗಿ ರಚಿತ ಈ ಕಚೇರಿ ಪರಿಸರದಲ್ಲಿನ ಸಮಾಜ ಬಂಧುಗಳಿಗೆ ಫಲಾನುಭವದ ಆಸರೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸ್ಥಾನೀಯ ಸಂಸದ ಡಾ| ಕಿರಿಟ್ ಸೋಮಯ್ಯ, ಶಾಸಕ ಸರ್ದಾರ್ ತಾರಾ ಸಿಂಗ್, ನಗರ ಸೇವಕಿ ರಜನಿ ಕಿಣಿ, ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಕಾಂಗ್ರೆಸ್ ನೇತಾರ ಜಯಪ್ರಕಾಶ್ ಆರ್. ಶೆಟ್ಟಿ ಮುಲುಂಡ್, ಅಸೋಸಿಯೇಶನ್‌ನ ಶಂಕರ ಡಿ. ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಭಾರತ್ ಬ್ಯಾಂಕ್‌ನ ನಿರ್ದೇಶಕರುಗಳಾದ ಚಂದ್ರಶೇಖರ್ ಎಸ್. ಪೂಜಾರಿ, ಜ್ಯೋತಿ ಕೆ. ಸುವರ್ಣ, ಸಿ. ಟಿ. ಸಾಲ್ಯಾನ್, ಹರೀಶ್ ಮೂಲ್ಕಿ, ಅಶೋಕ್ ಎಂ. ಕೋಟ್ಯಾನ್, ಗಂಗಾಧರ ಜೆ. ಪೂಜಾರಿ, ಮಾಜಿ ನಿರ್ದೇಶಕರಾದ ಎನ್. ಎಂ. ಸನಿಲ್, ಎಂ. ಎನ್. ಕರ್ಕೇರ ಪೊವಾಯಿ, ಮಧುಕರ ಕೋಟ್ಯಾನ್, ವಸಂತ್ ಶೆಟ್ಟಿ ಪಲಿಮಾರು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ನ್ಯಾಯವಾದಿ ರಾಜ ವಿ. ಸಾಲ್ಯಾನ್, ಮುಲುಂಡ್ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಗಣೇಶ್ ಎಸ್. ಅಮೀನ್, ಉಪಾಧ್ಯಕ್ಷರುಗಳಾದ ರವಿ ಕೋಟ್ಯಾನ್ ಮತ್ತು ಆನಂದ್ ಜತ್ತನ್, ಗೌರವ ಕೋಶಾಧಿಕಾರಿ ಶ್ರೀಧರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಾಧ್ಯಕ್ಷ ಕೆ. ಸುರೇಶ್ ಕುಮಾರ್ ಮತ್ತು ರತ್ನಾ ಸುರೇಶ್ ದಂಪತಿಯನ್ನು ಸಮ್ಮಾನಿಸಿದರು.
ಮುಲುಂಡ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ಪುಷ್ಪಾ ಬಂಗೇರ, ಯುವ ವಿಭಾಗದ ಸಂಚಾಲಕ ಸುಶೀಲ್ ಸಾಲ್ಯಾನ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಮುಲುಂಡ್ ಸಮಿತಿಯ ಪ್ರಥಮ ಅಧ್ಯಕ್ಷ ಶಿವರಾಮ ಸನೀಲ್, ನಿಕಟಪೂರ್ವ ಅಧ್ಯಕ್ಷ ನಾಗೇಶ್ ಅಮೀನ್ ಮತ್ತಿತರ ಪದಾಧಿಕಾರಿಗಳು ಹಾಗೂ ದಾನಿಗಳನ್ನು ಅಧ್ಯಕ್ಷರು ಗೌರವಿಸಿದರು.
ಕೆ. ಸುರೇಶ್ ಕುಮಾರ್ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕರ್ಕೇರ ಅತಿಥಿಗಳನ್ನು ಪರಿಚಯಿಸಿ ದಾನಿಗಳ ಯಾದಿ ವಾಚಿಸಿದರು. ಮುಲುಂಡ್ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ವಿನಯ್ ಪೂಜಾರಿ ವಂದಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಸ್ಥಾನೀಯ ವರ್ಧನ್ ಸಭಾಗೃಹದಲ್ಲಿ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಪೋರ್ಟ್ ಸಂಸ್ಥೆಯವರಿಂದ ಬ್ರಹ್ಮಶ್ರೀ ನಾರಾಯಣ ಗುರು ಪೂಜಾ ಮತ್ತು ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮಹಾಪೂಜೆ ನಡೆಯಿತು. ಹರೀಶ್ ಶಾಂತಿ ಪೂಜಾದಿಗಳನ್ನು ನೆರವೇರಿಸಿ ಮಂಗಳಾರತಿಗೈದು ತೀರ್ಥಪ್ರಸಾದ ವಿತರಿಸಿ ಹರಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್