ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಿವಂಡಿ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಉತ್ಸವವು ಸೆ. 6 ರಂದು ಸ್ಥಳೀಯ ಕಚೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6 ರಿಂದ ಗಣಹೋಮ, ನವಕಲಶಾಭಿಷೇಕ, ವಿಶೇಷ ಪೂಜೆ, ಸಿಯಾಳ ಅಭಿಷೇಕ, ಆರತಿ ಇತ್ಯಾದಿ ವಿಧಿ ವಿಧಾನಗಳು ಪುರೋಹಿತ ಕೆ. ಸದಾಶಿವ ಶಾಂತಿ ಅವರ ದಿವ್ಯಹಸ್ತದಿಂದ ನಡೆಯಿತು.
ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಎ. ಪೂಜಾರಿ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಮಂಗಳಾ ಮೇಶಿನರಿಯ ಮಾಲಕ ನಾರಾಯಣ ಪೂಜಾರಿ ಮತ್ತು ಶ್ರೀ ನಿತ್ಯಾನಂದ ಭಕ್ತಸೇವಾ ಮಂಡಳಿಯ ಜಯರಾಮ್ ಎಂ. ಪೂಜಾರಿ, ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ದೇವು ಎಸ್. ಪೂಜಾರಿ, ಭಾರತ್ ಬ್ಯಾಂಕ್ ಭಿವಂಡಿ ಶಾಖೆಯ ಪ್ರಬಂಧಕ ರತ್ನಾಕರ ಪೂಜಾರಿ ಅವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ದಾನಿಗಳ ಸಹಕಾರದಿಂದ ನಾಲ್ಕು ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯವನ್ನಿತ್ತು ಗಣ್ಯರು ಶುಭಹಾರೈಸಿದರು. ಧನ ಸಹಾಯ ನೀಡಿದ ದಾನಿಗಳಾದ ನಾರಾಯಣ ಪೂಜಾರಿ, ರತ್ನಾಕರ ಜಿ. ಪೂಜಾರಿ, ಜಯರಾಮ್ ಎಂ. ಪೂಜಾರಿ, ಮೋಹನ್‌ದಾಸ್ ಎ. ಪೂಜಾರಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿ ಗೌರವಿಸಿ ಕೃತಜ್ಞತೆ ಸಲ್ಲಿಸಲಾಯಿತು.
ದೇವರ ಮಂಟಪದ ಪುಷ್ಪಾಲಂಕಾರದ ಪ್ರಾಯೋಜಕತ್ವವನ್ನು ಸಂತೋಷ್ ಕೆ. ಪೂಜಾರಿ, ಪ್ರಸಾದದ ಪ್ರಾಯೋಜಕತ್ವವನ್ನು ವಿನಯ್ ಎಸ್. ಪೂಜಾರಿ, ಫಲವಸ್ತುವಿನ ಪ್ರಾಯೋಜಕತ್ವವನ್ನು ಸೋನಾಲಿ ಪಾಟೀಲ್ ಅವರು ವಹಿಸಿ ಸಹಕರಿಸಿದರು. ವಿವಿಧ ಪ್ರಾಯೋಜಕರುಗಳನ್ನು ಸಮಿತಿಯ ವತಿಯಿಂದ ಪದಾಧಿಕಾರಿಗಳು ಗೌರವಿಸಿದರು.
ಗೌರವ ಕಾರ್ಯದರ್ಶಿ ವಂದಿಸಿದರು. ಭಿವಂಡಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದರು. ಸಮಾಜ ಬಾಂಧವರು, ತುಳು-ಕನ್ನಡಿಗರು, ಗುರುಭಕ್ತರು, ಸ್ಥಳೀಯ ದಾನಿಗಳು, ಉದ್ಯಮಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.