ಕೊಪ್ಪಳ: ಕಳೆದ 2019-20ನೇ ಸಾಲಿನ ಜಿಪಂ ಅಭಿವೃದ್ಧಿ (ಶಾಸನಬದ್ಧ) ಅನುದಾನದ103.87 ಲಕ್ಷ ರೂ.ಗಳ ಕಾಮಗಾರಿಗಳು ನಡೆಸದೇ ಬಿಲ್ ಎತ್ತುವಳಿ ಮಾಡಿದ್ದಾರೆ. ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಪಂನ ಕಾಂಗ್ರೆಸ್ ಸದಸ್ಯರು ಸಿಇಒ ರಘುನಂದನ್ ಮೂರ್ತಿ ಅವರಿಗೆ ದೂರು ಸಲ್ಲಿಸಿದ್ದಾರೆ.
2019-20ನೇ ಸಾಲಿನಲ್ಲಿ ಬೋಗಸ್‌ಬಿಲ್ ಆಗಿವೆ ಎನ್ನುವ ದೂರುಗಳು ಕೇಳಿ ಬಂದಿವೆ. ಜಿಪಂ ಸದಸ್ಯರು ಚರ್ಚೆ ಮಾಡುವ ವೇಳೆ ಹಾಲಿ ಅಧ್ಯಕ್ಷರು ರಾಜೀನಾಮೆ ಕೊಡುತ್ತಿದ್ದಾರೆ ಎಂದು ಸುದ್ದಿ ಹರಡುತ್ತಿದೆ. ತಮ್ಮ ರಾಜೀನಾಮೆ ಅವಧಿ ಯ ವೇಳೆ ಎಲ್ಲ ಬೋಗಸ್ ಬಿಲ್ ಮಾಡಿ ಮೊದಲೇ ಹಣ ಮಾಡುವ ಹುನ್ನಾರ ನಡೆದಿದೆ.
ಗಂಗಾವತಿ ತಾಲೂಕಿನ ಸಿದ್ದಾಪುರ ಕ್ಷೇತ್ರದ ಗುಂಡೂರು ಕ್ಯಾಂಪಿನಲ್ಲಿ 3 ಲಕ್ಷ ರೂ. ರಸ್ತೆ ನಿರ್ಮಾಣ, ಲಕ್ಷ್ಮೀ ಕ್ಯಾಂಪಿನಲ್ಲಿ ರಸ್ತೆ ಅಭಿವೃದ್ಧಿಯ 2.50 ಲಕ್ಷ ರೂ. ಕಾಮಗುಂಡಪ್ಪ ಕ್ಯಾಂಪಿನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ 3 ಲಕ್ಷ, ಸಿಂಗನಾಳ ಗ್ರಾಮದ ಮಳೆಗಡ್ಡೆ ರಸ್ತೆ ಮರಂ ಹಾಕಲಿಕ್ಕೆ 2 ಲಕ್ಷ ರೂ., ಉಳೆನೂರು 2ನೇ ವಾರ್ಡ್‌ನಲ್ಲಿ ಸಿಸಿ, ಚರಂಡಿ ನಿರ್ಮಾಣಕ್ಕಾಗಿ 3 ಲಕ್ಷ ರೂ, ಸಿದ್ದಾಪುರ ಹರಿಜನ 2ನೇ ವಾರ್ಡ್ ನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ 3 ಲಕ್ಷ ರೂ., ಸಿದ್ದಾಪುರ 1ನೇ ವಾರ್ಡ್‌ನಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ 2.50 ಲಕ್ಷ ರೂ., ಈಳಿಗನೂರು ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸಲು 2.50ಲಕ್ಷ ರೂ., ಸಿದಾಪುರ ಗ್ರಾಮದ 5ನೇ ವಾರ್ಡ್ ನಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು 2 ಲಕ್ಷ ರೂ ಸೇರಿ ವಿವಿಧೆಡೆ ಕಾಮಗಾರಿಗಳನ್ನು ಮಾಡದೇ 103.87 ಲಕ್ಷಗಳ ಅನುದಾನ ಬಿಲ್ಲು ಎತ್ತುವ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿವೆ. ಕೂಡಲೇ ಇದಕ್ಕೆ ಸಂಬಂಧಿ ಸಿದಂತೆ ವಿಶೇಷ ತಂಡ ರಚಿಸಿ ಕಾಮಗಾರಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬೋಗಸ್ ಬಿಲ್ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಮನವಿ ಸಲ್ಲಿಸಿದರು.
ಈ ವೇಳೆ ಸದಸ್ಯರಾದ ಹನುಮಂತಗೌಡ ಚಂಡೂರು, ಗೂಳಪ್ಪ ಹಲಿಗೇರಿ, ಚೆನ್ನುಪಾಟಿ ವಿಜಯಲಕ್ಷ್ಮೀ ಪ್ರಭಾಕರ, ಕೆ. ರಾಜಶೇಖರ ಹಿಟ್ನಾಳ, ಲಕ್ಷಮ್ಮ ನೀರಲೂಟಿ, ರತ್ನವ್ವ ಭರಮಪ್ಪ ನಗರ, ಅಗಸಿಮುಂದಿನ ಭಿಮಣ್ಣ ಶರಣಪ್ಪ, ಹನಮಗೌಡ ಮಾದೇವಗೌಡ, ಗಾಯತ್ರಿ ವೆಂಕಟೇಶ ವಿ., ಬೀನಾ ಗೌಸ್, ಅನಿತಾ ಜಿ. ಮಾರುತಿ, ಅಮರೇಶಪ್ಪ ಗೋನಾಳ, ಶಾಂತಾ ರಮೇಶ ನಾಯಕ, ಹೊಳೆಯಮ್ಮ ಪೊಲೀಸ್ ಪಾಟೀಲ್, ಗಿರಿಜಾ ರೇವಣಪ್ಪ ಸಂಗಟಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.