ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರು ನಾಗರಿಕರಿಂದ ಕೇಳಿ ಬರುತ್ತಿರುವ ಬೆನ್ನಲ್ಲೇ ಕೋವಿಡ್ ಸೋಂಕಿತರಿಂದಲೂ ಹಣ ಪಡೆದು ಸರ್ಕಾರಕ್ಕೂ ಬಿಲ್ ಸಲ್ಲಿಕೆ ಮಾಡಿರುವ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯ ದೋಖಾ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಸೋಂಕಿತರಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸಿಗೆಗಳ ಕೊರತೆಯಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಉಚಿತ ಚಿಕಿತ್ಸೆ ನೀಡಿ ಅದರ ವೆಚ್ಚವನ್ನ ಆಯುಷ್ಮಾನ್ ಭಾರತಹಾಗೂ ಆರೋಗ್ಯಕರ್ನಾಟಕ ಯೋಜನೆಯಡಿ ಭರಿಸುತ್ತೇವೆ ಎಂದು ಸರ್ಕಾರದ ಆಶ್ವಾಸನೆಯನ್ನು ಬಂಡವಾಳ ಮಾಡಿಕೊಂಡ ಖಾಸಗಿ ಆಸ್ಪತ್ರೆ ವೈದ್ಯರು ಮಾನವೀಯತೆ ಮರೆತುಕೊರೊನಾ ಸೋಂಕಿತರ ಬಳಿ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.
ದಾಖಲಾತಿ ಸಲ್ಲಿಕೆ: ಸುರಕ್ಷಾ ಆರೋಗ್ಯ ರಕ್ಷಾ ಯೋಜನೆಯಡಿ ನೋಂದಾಯಿಸಿಕೊಂಡ ಚಿಕ್ಕಬಳ್ಳಾಪುರ ನಗರದ ಅನನ್ಯ ಖಾಸಗಿ ಆಸ್ಪತ್ರೆಗೆ ಕೋವಿಡ್ ಸೋಂಕಿತರನ್ನ ಸ್ವತಃ ಜಿಲ್ಲಾಡಳಿತವೇ ದಾಖಲು ಮಾಡಿತ್ತು. ಸೋಂಕಿತರಿಂದಲೂ ಹಣ ಪಡೆದು ಸರ್ಕಾರಕ್ಕೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಬಿಲ್ ಪಾವತಿಸುವಂತೆ ದಾಖಲಾತಿಗಳನ್ನ ಸಲ್ಲಿಸಿಕೊಂಡಿದ್ದಾರೆ.
ವಾಪಸ್ ಮಾಡುವುದಾಗಿ ಭರವಸೆ: ಅನನ್ಯ ಆಸ್ಪತ್ರೆಯಲ್ಲಿ 35 ಕೋವಿಡ್ ಸೋಂಕಿತರನ್ನ ಸರ್ಕಾರ ದಾಖಲಿಸಿದೆ ಎನ್ನಲಾಗಿದ್ದು, ಇದರಲ್ಲಿ12 ಮಂದಿಯ ಚಿಕಿತ್ಸಾ ವೆಚ್ಚ ಪಾವತಿಸುವಂತೆ ಎಬಿಎಆರ್ಸ್ಗೆಗೆ ದಾಖಲೆಗಳನ್ನ ಸಲ್ಲಿಸಿಕೊಂಡಿದ್ದಾರೆ. ಕೋವಿಡ್ ಸೋಂಕಿತರು ಆಸ್ಪತ್ರೆಯವರು ತಮ್ಮ ಬಳಿ ಹಣ ಪಡೆದಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಸಭೆ ನಡೆಸಿ ತನಿಖೆ ನಡೆಸಿದಾಗ ಆಸ್ಪತ್ರೆಯ ಮಾಲೀಕ ಕೋವಿಡ್ ಸೋಂಕಿತರಿಂದ ಪಡೆದ ಹಣವನ್ನು ವಾಪಸ್ಸು ಮಾಡುವುದಾಗಿ ಭರವಸೆ ನೀಡಿದ್ದಾರೆ.
ದಾಖಲೆ ಸಂಗ್ರಹ: ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಇಂದಿರಾ ಕಬಾಡೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಸುವರ್ಣ ಆರೋಗ್ಯ ಟ್ರಸ್ಟ್‌ನ ಅಧಿಕಾರಿಗಳ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ನಗರದ ಅನನ್ಯ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಮಾಹಿತಿ ಪಡೆದು ದಾಖಲೆ ಸಂಗ್ರಹಿಸಿದ್ದಾರೆ.
ಕೆಲವರಿಗೆ ಹಣ ವಾಪಸ್ : ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾಕಬಾಡೆ ಅವರನ್ನು ಉದಯವಾಣಿ ಸಂಪರ್ಕಿಸಿದಾಗ, ನಗರದ ಅನನ್ಯ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಂದ ಹಣ ಪಡೆದುಕೊಂಡಿರುವುದಾಗಿ ಸ್ವತಃ ಆಸ್ಪತ್ರೆಯವರು ತಪ್ಪೊಪ್ಪಿಕೊಂಡಿದ್ದಾರೆ.ಕೆಲವರಿಗೆ ಹಣವಾಪಸ್ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ನಮಗೆ 12 ಜನರಿಂದ ಬಂದ ದೂರಿನ ಅನ್ವಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿಚಾರಣೆ ಮಾಡಲಾಗಿದೆ. ಈ ಸಂಬಂಧ ಸಮಗ್ರ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.