ಚೆನ್ನೈ: ಜಲ್ಲಿಕಟ್ಟು ನಿಷೇದ ತೆರವಿನ ಅಧ್ಯಾದೇಶಕ್ಕೆ ಬದಲಿಯಾಗಿ ರಾಜ್ಯ ಸರಕಾರ ಶಾಶ್ವತ ಪರಿಹಾರದ ರೂಪದಲ್ಲಿ ಬೇಗನೆ ತಮಿಳು ನಾಡು ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಲಿದೆ ಎಂದು ಜಂಟಿ ಸದನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜ್ಯಪಾಲ ವಿದ್ಯಾಸಾಗರ ರಾವ್ ಹೇಳಿದ್ದಾರೆ.
ಜಲ್ಲಿಕಟ್ಟು ಕುರಿತಾಗಿ ನಡೆದಿರುವ ಸಾಮೂಹಿಕ ಚಳವಳಿ ಹಾಗೂ ಜನರು ಒಗ್ಗಟ್ಟಾಗಿ ತೋರಿರುವ ಭಾವೋದ್ವೇಗದ ಫಲವಾಗಿ ಈ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಕ್ರೀಡೆಯ ಮೇಲಿನ ನಿಷೇಧ ತೆರವುಗೊಳ್ಳಲು ಸಾಧ್ಯವಾಗಿದೆ ಎಂದವರು ಹೇಳಿದರು.
ಚೆನ್ನೈನ ಮರೀನಾ ಬೀಚ್‌ನಲ್ಲಿ ಕಳೆದ ಒಂದು ವಾರದಿಂದ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಯುವಕರು ಒಗ್ಗೂಡಿ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯು ಜಲ್ಲಿಕಟ್ಟು ನಿಷೇಧವನ್ನು ಅಧ್ಯಾದೇಶದ ಮೂಲಕ ತೆರವುಗೊಳಿಸುವಲ್ಲಿ ಸಫಲವಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪ್ರತಿಭಟನಕಾರರನ್ನು ಬಲವಂತದಿಂದ ಎತ್ತಂಗಡಿ ಮಾಡುವ ಕಾರ್ಯಾಚರಣೆಯನ್ನು ಪೊಲೀಸರು ನಡೆಸಿದ್ದರು. ಇದನ್ನು ಸದನದಲ್ಲಿ ಪ್ರತಿಭಟಿಸಿದ ಡಿಎಂಕೆ ಇಂದು ವಾಕ್ ಔಟ್ ನಡೆಸಿತು.
ಡಿಎಂಕೆ ನಾಯಕಿ ಕನಿಮೋಳಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬಲವಂತದ ಪೊಲೀಸ್ ಕ್ರಮ ತೆಗೆದುಕೊಂಡ ತಮಿಳು ನಾಡು ಸರಕಾರದ ಕ್ರಮ ದಮನಕಾರಿಯಾಗಿದೆ ಎಂದು ಹೇಳಿದರು.
ಪೊಲೀರು ಕೈಗೊಂಡಿದ್ದ ಲಾಠೀ ಚಾರ್ಚ್ ಕಾರ್ಯಾಚರಣೆಯನ್ನು ವಿಫಲಗೊಳಿಸುವ ಸಲುವಾಗಿ ಪ್ರತಿಭಟನಕಾರರು ಚೆನ್ನೈ ಮರಿನಾ ಬೀಚ್‌ನಲ್ಲಿ ಮಾನವ ಸರಪಣಿಯನ್ನು ರಚಿಸಿ ತಮ್ಮೊಳಗಿನ ಒಗ್ಗಟ್ಟನ್ನು ತೋರ್ಪಡಿಸಿದರು.