Advertisement

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು 

06:00 AM Jul 31, 2018 | Team Udayavani |

ಹೊಸದಿಲ್ಲಿ: ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಗೆ ಲೋಕಸಭೆ ಸೋಮವಾರ ಅಂಗೀಕಾರ ನೀಡಿದೆ. ಅದು ಸದ್ಯ ಹೊರಡಿಸಲಾಗಿರುವ ಅಧ್ಯಾದೇಶ ಸ್ಥಾನದಲ್ಲಿ ಜಾರಿಯಾಗಲಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲೆ ಮತ್ತು ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ತೀವ್ರ ವಿವಾದ ಸೃಷ್ಟಿಸಿದ ಬಳಿಕ ಕೇಂದ್ರ ಸರಕಾರ ಈ ಬಗ್ಗೆ ಅಧ್ಯಾದೇಶ ಹೊರಡಿಸಿತ್ತು.

Advertisement

ಕ್ರಿಮಿನಲ್‌ ಕಾನೂನು (ತಿದ್ದುಪಡಿ) ಮಸೂದೆ 2018ಕ್ಕೆ ಪಕ್ಷಭೇದ ಮರೆತು ಎಲ್ಲ ಸಂಸದರು ಧ್ವನಿಮತದಿಂದ ಅಂಗೀಕಾರ ನೀಡಿದ್ದಾರೆ. ಆದರೆ ವಿಪಕ್ಷಗಳ ಕೆಲವು ಸದಸ್ಯರು ಅಧ್ಯಾದೇಶ ಮೂಲಕ ಇಂಥ ಕಾನೂನು ಜಾರಿ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಎರಡೂವರೆ ಗಂಟೆಗಳ ಕಾಲ ನಡೆದ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು, ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ರಕ್ಷಿಸಲು ಇಂಥ ಕ್ರಮ ಅಗತ್ಯ ಎಂದು ಸಮರ್ಥಿಸಿಕೊಂಡರು.

ಡೆಪ್ಯುಟಿ ಸ್ಪೀಕರ್‌ ಎಂ. ತಂಬಿದೊರೈ ಮಾತನಾಡಿ ಹೊಸ ಕಾನೂನಿನ ಬಗ್ಗೆ ವ್ಯಾಪಕ ಪ್ರಚಾರವಾಗಬೇಕು ಎಂದರು. ಚರ್ಚೆಯಲ್ಲಿ ಭಾಗವಹಿಸಿದ ಸಿಪಿಎಂನ ಪಿ.ಕೆ. ಶ್ರೀಮತಿ ಟೀಚರ್‌, ಸಂತ್ರಸ್ತ ಬಾಲಕಿಯರಿಗೆ ನೆರವು ನೀಡಲು 3 ಸಾವಿರ ಕೋಟಿ ರೂ. ಮೊತ್ತದ ನಿರ್ಭಯಾ ನಿಧಿ ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರಕ್ಕೆ ಸಲಹೆ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next