ವಾಷಿಂಗ್ಟನ್/ನವದೆಹಲಿ: ಭಾರತ ಮಾರಣಾಂತಿಕ ಕೋವಿಡ್ ಎರಡನೇ ಅಲೆಗೆ ಸಾಕ್ಷಿಯಾಗಿದ್ದು, ದೇಶ ಕೋವಿಡ್ ಸೋಂಕಿನಿಂದ ತೀವ್ರ ಸಂಕಷ್ಟ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ಸಮುದಾಯ ರಾಷ್ಟ್ರಗಳು ತಮ್ಮ ಬೆಂಬಲವನ್ನು ಸೂಚಿಸಿ ಅಗತ್ಯ ನೆರವನ್ನು ನೀಡುತ್ತಿದೆ. ಈ ಬೆಳವಣಿಗೆ ನಡುವೆ ತಾಂತ್ರಿಕ ಕ್ಷೇತ್ರದ ದಿಗ್ಗಜ, ಖ್ಯಾತ ಉದ್ಯಮಿ ಬಿಲ್ ಗೇಟ್ಸ್ ಲಸಿಕೆ ಫಾರ್ಮುಲಾಕ್ಕೆ ಸಂಬಂಧಿಸಿದಂತೆನೀಡಿರುವ ವಿವಾದಿತ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಈಡು ಮಾಡಿದೆ.
ಇದನ್ನೂ ಓದಿ:ಕೋವಿಡ್ ರೋಗಿಗಳ ಪಾಲಿಗೆ ‘ಹೀರೋ’ : ಆ್ಯಂಬುಲೆನ್ಸ್ ಚಾಲಕನಾದ ಖಳನಟ ಅರ್ಜುನ್ ಗೌಡ
ಕೋವಿಡ್ ಸೋಂಕನ್ನು ತಡೆಗಟ್ಟಲು ಇಡೀ ಜಗತ್ತೇ ಒಗ್ಗಟ್ಟಾಗಿ ಹೋರಾಡುತ್ತಿದೆ. ಅಲ್ಲದೇ ಇದಕ್ಕಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ವರದಿಯ ಪ್ರಕಾರ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಲಸಿಕೆಯ ಫಾರ್ಮುಲಾವನ್ನು ಭಾರತ ಸೇರಿದಂತೆ ಯಾವುದೇ ಅಭಿವೃದ್ಧಿ ಶೀಲ ದೇಶಗಳ ಜತೆ ಹಂಚಿಕೊಳ್ಳುವುದಿಲ್ಲ ಎಂದು ಬಿಲ್ ಗೇಟ್ಸ್ ಸ್ಕೈ ನ್ಯೂಸ್ ಗೆ ನೀಡಿದ್ದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಸ್ಕೈ ನ್ಯೂಸ್ ಸಂದರ್ಶನದ ವೇಳೆ, ಪ್ರಸ್ತುತ ಕೋವಿಡ್ ಲಸಿಕೆ ಕೊರತೆ ಬಗ್ಗೆ ಪ್ರಶ್ನಿಸಿದ್ದು, ಒಂದು ವೇಳೆ ಬೌದ್ಧಿಕ ಆಸ್ತಿ ಸಂರಕ್ಷಣೆಯನ್ನು ಬದಿಗೊತ್ತಿ ವಿಶ್ವದ ಇತರ ದೇಶಗಳಿಗೆ ಲಸಿಕೆ ಉತ್ಪಾದಿಸಲು ಕೋವಿಡ್ ಲಸಿಕೆ ಫಾರ್ಮುಲಾ ನೀಡಿದರೆ ಹೇಗೆ ಎಂಬ ಕೇಳಲಾದ ಪ್ರಶ್ನೆಗೆ ಬಿಲ್ ಗೇಟ್ಸ್, ಇಲ್ಲ ಎಂಬುದಾಗಿ ಉತ್ತರಿಸಿದ್ದರು.
ಯಾವುದೇ ಕಾರಣಕ್ಕೂ ಅಭಿವೃದ್ಧಿಶೀಲ ದೇಶಗಳಿಗೆ ಕೋವಿಡ್ ಲಸಿಕೆ ಫಾರ್ಮುಲಾ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಲ್ ಗೇಟ್ಸ್ ಹೇಳಿದ್ದರು. ಜಗತ್ತಿನಲ್ಲಿ ಬೇಕಾದಷ್ಟು ಲಸಿಕೆ ಉತ್ಪಾದನಾ ಸಂಸ್ಥೆಗಳಿವೆ. ಅಷ್ಟೇ ಅಲ್ಲ ಜನರು ಲಸಿಕೆ ಸುರಕ್ಷತೆ ಬಗ್ಗೆ ಗಂಭೀರವಾಗಿದ್ದಾರೆ. ಆದ್ದರಿಂದ ಈವರೆಗೆ ಆದಂತೆ ಒಂದು ಕಡೆಯಿಂದ ಮತ್ತೊಂದು ದೇಶಕ್ಕೆ ಸರಬರಾಜು ಆಗುತ್ತಿರುತ್ತದೆ. ಅಂದರೆ ಕೋವಿಡ್ ಲಸಿಕೆಯನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಫ್ಯಾಕ್ಟರಿಯಿಂದ ಭಾರತಕ್ಕೆ ಸರಬರಾಜು ಆಗುತ್ತದೆ. ಇದು ನಮ್ಮ ಅನುದಾನ ಮತ್ತು ಪರಿಣತಿಯಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದರು.
ಸೇರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಇದು ಕೋವಿಡ್ 19 ಲಸಿಕೆಯಾದ ಕೋವಿಶೀಲ್ಡ್ ಅನ್ನು ಉತ್ಪಾದಿಸಲು ಆಸ್ಟ್ರಾಜೆನಿಕಾ ಜತೆ ಒಪ್ಪಂದ ಮಾಡಿಕೊಂಡಿದೆ. ಇದೊಂದು ಬೌದ್ಧಿಕ ಆಸ್ತಿಯ ಹಕ್ಕು ಅಲ್ಲ ಎಂದಿರುವ ಬಿಲ್ ಗೇಟ್ಸ್, ಇದೊಂದು ಕೆಲವು ನಿಷ್ಕ್ರಿಯ ಲಸಿಕೆಯ ಕಾರ್ಖಾನೆಯಂತೆಯೂ ಅಲ್ಲ. ನಿಯಮಕ್ಕೊಳಪಟ್ಟ ಅನುಮತಿಯೊಂದಿಗೆ ಲಸಿಕೆಯನ್ನು ಸುರಕ್ಷಿತವಾಗಿಡುತ್ತದೆ. ನಿಮಗೆ ಗೊತ್ತಾ, ಈ ವಿಷಯಗಳ ಜಾಡನ್ನು ಹಿಡಿಯಬೇಕಾಗಿದೆ. ಪ್ರತಿಯೊಂದು
ಉತ್ಪಾದನಾ ಪ್ರಕ್ರಿಯೆಗೆ ತುಂಬಾ ಎಚ್ಚರಿಕೆಯ ಅಗತ್ಯವಿರುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದೀಗ ಲಸಿಕೆ ಫಾರ್ಮುಲಾಕ್ಕೆ ಸಂಬಂಧಿಸಿದಂತೆ ಬಿಲ್ ಗೇಟ್ಸ್ ನೀಡಿರುವ ಹೇಳಿಕೆಗೆ ಜಾಗತಿಕವಾಗಿ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಬಿಲ್ ಗೇಟ್ಸ್ ಹೇಳಿಕೆ ಹಿಂದೆ ಯಾವ ರಹಸ್ಯ ಅಡಗಿದೆ ಎಂಬ ಬಗ್ಗೆ ಚರ್ಚೆ ನಡೆಯತೊಡಗಿದೆ ಎಂದು ವರದಿ ತಿಳಿಸಿದೆ.