Advertisement

ಬಿಲ್ಕಿಸ್‌ಬಾನು ಪ್ರಕರಣ; 11ಅಪರಾಧಿಗಳನ್ನು ಜೈಲಿಗೆ ಕಳಿಸಿ

01:30 PM Aug 28, 2022 | Team Udayavani |

ಕಲಬುರಗಿ: ಬಿಲ್ಕಿಸ್‌ಬಾನು ಪ್ರಕರಣದಲ್ಲಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾದ ಎಲ್ಲ 11 ಜನ ಅಪರಾಧಿ ಗಳನ್ನು ಪುನಃ ಜೈಲಿಗೆ ಕಳಿಸಬೇಕು ಎಂದು ಒತ್ತಾಯಿಸಿ ಶನಿವಾರ ಭಾರತ ಕಮ್ಯುನಿಸ್ಟ್‌ ಪಕ್ಷದ ನಗರ ಸಮಿತಿ ನೇತೃತ್ವದಲ್ಲಿ ಸಾವಿತ್ರಿಬಾಯಿ ಫುಲೆ ಸಂಘ, ಸ್ಲಂ ಜನಾಂದೋಲನ ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು.

Advertisement

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮುಖೇನ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಸಾಬರಮತಿ ಎಕ್ಸ್‌ಪ್ರೆಸ್‌ ರೈಲು ದುರಂತ ನಡೆದ ಗುಜರಾತನಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಸೇಡಿನ ರೋಷಕ್ಕೆ ಬಲಿಯಾಗಿ ಬಾಲ್ಕಿಸ್‌ ಬಾನು ಏಳು ತಿಂಗಳು ಗರ್ಭಿಣಿ ಎಂಬುದನ್ನು ಲೆಕ್ಕಿಸದೇ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಆಕೆ ಎದುರಿಗೆ ಆಕೆಯ ಮೂರು ವರ್ಷದ ಮಗುವಿನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಅವರ ಕುಟುಂಬದವರನ್ನು ಕೊಲೆ ಮಾಡಲಾಯಿತು. ಆದರೂ ಆಕೆ ಎದೆಗುಂದದೇ ಹೋರಾಡಿ ಅತ್ಯಾಚಾರಿಗಳಾದ 11 ಜನರಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಳು. ಅಂತಹ ಘಟನೆಯಲ್ಲಿ ಅಪರಾಧಿಗಳಾದವರಿಗೆ ಸನ್ನಡತೆ ಆಧಾರದಲ್ಲಿ ಬಂಧ ಮುಕ್ತ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ಈ ನಡೆಯನ್ನು ಎರಡು ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಶ್ನಿಸಿ, ವಿರೋಧಿಸಿದ್ದಾರೆ. ಬಿಡುಗಡೆ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ತೃಣಮೂಲ ಪಕ್ಷದ ನಾಯಕಿ ಮಹಾವೋಮೊಹಿತ್ರಾ, ಚಿತ್ರ ನಿರ್ಮಾಪತಿ ರೇವತಿ ಬೌಲ್‌, ಸಾಮಾಜಿಕ ಕಾರ್ಯಕರ್ತೆ ರೂಪರೇಖಾರಾಣಿ ಬಿಡುಗಡೆ ಪ್ರಶ್ನಿಸಿ ಸುಪ್ರಿಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಪು ಬರುವ ಮೊದಲೇ ಡಬಲ್‌ ಇಂಜಿನ್‌ ಸರ್ಕಾರ ಬಿಡುಗಡೆಗಳನ್ನು ರದ್ದುಗೊಳಿಸಿ ಹೀನ ಕೃತ್ಯದಲ್ಲಿ ಭಾಗಿಯಾದ ಎಲ್ಲ 11 ಅಪರಾಧಿಗಳಿಗೆ ಮತ್ತೆ ಜೈಲಿಗೆ ತಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ನಗರ ಕಾರ್ಯದರ್ಶಿ ಎಂ.ಬಿ. ಸಜ್ಜನ್‌, ಕೆ. ನೀಲಾ, ಜಾವೇದ್‌ ಹುಸೇನ್‌, ಅಲ್ತಾಫ್‌ ಇನಾಂದಾರ್‌, ಚಂದಮ್ಮ ಗೋಳಾ, ರೇಣುಕಾ ಸರಡಗಿ, ಜಗದೇವಿ ನೂಲಕರ್‌, ಶಹನಾಜ್‌ ಅಕ್ತರ್‌, ನಾಗಯ್ಯಸ್ವಾಮಿ, ರಾಫಿಯಾ ಸಿರಿನ್‌, ಸಂಗಮ್‌ ಸಂಸ್ಥೆಯ ಬೀರಲಿಂಗ್‌, ಗುಲಾಬೊ, ಅಖೀಲ ಭಾರತ ಮಹಿಳಾ ಒಕ್ಕೂಟದ ಪದ್ಮಾ ಪಾಟೀಲ, ಹೀನಾ ಶೇಖ್‌, ಗೌರಮ್ಮ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next